ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸಂಬಂಧ ಸೂಚನೆ
೧೪೯

ಲಗ್ನವನ್ನು ಹ್ಯಾಗೆ ಆಗಗೊಟ್ಟಾರು ? ಎಂಬ ದುಃಖದಾಯಕವಾದ ವಿಚಾರಗಳು ಆತನ ಮನಸ್ಸನ್ನು ನೋಯಿಸಹತ್ತಿದವು. ತಾನು ಕುಲೀನನಲ್ಲೆಂಬ ವಿಚಾರವು ಆತನ ಮನಸ್ಸನ್ನು ನೋಯಿಸುತ್ತಿದ್ದಷ್ಟು ಬೇರೆ ಯಾವ ವಿಚಾರವು ಆತನ ಮನಸ್ಸನ್ನು ನೋಯಿಸುತ್ತಿದ್ದಿಲ್ಲ. ಆತನಿಗೆ ತನ್ನ ಕುಲದ ಇತಿಹಾಸವು. ಇವನು ಇಪ್ಪತ್ತುನಾಲ್ಕು ಇಪ್ಪತ್ತೈದು ವರ್ಷದವನಾಗುವತನಕ ಗೊತ್ತೇ ಆಗಿದ್ದಿಲ್ಲ. ಆಮೇಲೆ ಅದು ಆತನಿಗೆ ಸ್ವಲ್ಪ ಮಟ್ಟಿಗಾದರೂ ಗೊತ್ತಾಯಿತು. ಒಂದು ದಿನ ಆತನು ತನ್ನ ಕುಲವೃತ್ತಾಂತವೇನೆಂದು ತನ್ನ ತಾಯಿಯನ್ನು ಕೇಳಿದನು. ಅದಕ್ಕೆ ಆಕೆಯು ತನ್ನ ವೃದ್ದ ದಾಸಿಯಾದ ಲೈಲಿಯನ್ನು ಕೇಳೆಂದು ಹೇಳಲು, ರಣಮಸ್ತಖಾನನು ಲೈಲಿಯನ್ನು ಕೇಳಿದನು. ಲೈಲಿಯು ಮಹಾ ಚತುರಳೂ ಬಹುಶ್ರತಳೂ ಇದ್ದಳು. ಆಕೆಯು ರಣಮಸ್ತಖಾನನನ್ನು ಒತ್ತಟ್ಟಿಗೆ ಕರಕೊಂಡು ಹೋಗಿ ಆತನ ಮನಸ್ಸನ್ನು ನೋಯಿಸದಂತೆ ಆತನನ್ನು ಕುರಿತು- ಒಡೆಯರೇ. ಇಂದು ನಾನು ನಿಮಗೆ ಎಲ್ಲ ವೃತ್ತಾಂತವನ್ನು ಹೇಳುತ್ತೇನೆ. ಒಮ್ಮೆ ಅದನ್ನು ಕೇಳಿದ ಬಳಿಕ, ತಿರುಗಿ ಅದರ ಚಕಾರ ಶಬ್ದವನ್ನೂ ಮಾಸಾಹೇಬರ ಮುಂದೆ ನೀವು ತೆಗೆಯಬೇಡಿರಿ. ಅದನ್ನ ಕೇಳಿ ನಿಮ್ಮ ಮಾಸಾಹೇಬರಿಗೆ ಬಹಳ ವ್ಯಸನವಾಗುತ್ತದೆ. ಅವರು ನಿಮ್ಮ ಸಲುವಾಗಿ ಎಷ್ಟುಕಷ್ಟಪಟ್ಟರೆಂಬದನ್ನು ನೀವು ಬಲ್ಲಿರಿ. ಅದರ ಉಪಕಾರವನ್ನು ಸ್ವಲ್ಪವಾದರೂ ತೀರಿಸುವ ಇಚ್ಛೆ ನಿಮಗಿದ್ದರೆ. ತಿರುಗಿ ಈ ಮಾತನ್ನು ನೀವು ಅವರ ಮುಂದೆ ತೆಗೆಯಬೇಡಿರಿ. ಅವರಿಗೆ ಈ ಮಾತಿನ ನೆನಪಾಗುವಂತೆ ಸರ್ವಥಾ ನೀವು ಮಾಡಬಾರದು. ನಿಮ್ಮ ತಂದೆ-ತಾಯಿಗಳಿಬ್ಬರೂ ದೊಡ್ಡ ಕುಲದವರಿರುತ್ತಾರೆ. ನಿಮ್ಮ ಹಿರಿಯರು ನಿಮ್ಮ ತಾಯಂದಿರನ್ನು ಅವರು ಅವಿವಾಹಿತರಾಗಿರುವಾಗ ಹುಲಿಯ ಬಾಯೊಳಗಿಂದ ಬಿಡಿಸಿದರು. ಆಗಿನ ಕಾಲದ ನಿಮ್ಮ ಹಿರಿಯರ ಶೌರ್ಯವನ್ನು ನೋಡಿ, ನಿಮ್ಮ ತಾಯಿಯವರು ಅವರನ್ನು ಲಗ್ನವಾಗಬೇಕೆಂದು ಇಚ್ಛಿಸಿದರು. ಆದರೆ ಅವೆರಡೂ ಮನೆತನಗಳು ಪರಸ್ಪರ ದ್ವೇಷಿಸುತ್ತಿದ್ದರಿಂದ, ನಿಮ್ಮ ತಾಯಿಯವರ ಲಗ್ನಕ್ಕೆ ಅವರ ತಂದೆಯ, ಅಂದರೆ ನಿಮ್ಮ ಅಜ್ಜಂದಿರ ಒಪ್ಪಿಗೆಯು ದೊರಯುವ ಹಾಗಿದ್ದಿಲ್ಲ; ಆದ್ದರಿಂದ ನಿಮ್ಮ ತಾಯಂದಿರು ಗುಪ್ತರೀತಿಯಿಂದ ನಿಮ್ಮ ಹಿರಿಯರನ್ನು ಲಗ್ನಮಾಡಿಕೊಂಡರು. ಕಾರಣ ನಿಮ್ಮ ಅಜ್ಜಂದಿರಿಗೆ ಬಹಳ ಸಂತಾಪವಾಯಿತು. ಕಾರಣ ನಿಮ್ಮ ಹಿರಿಯರು, ತಮ್ಮ ಮನೆಯವರಿಗೆ ಈ ಲಗ್ನದ ಸಂಗತಿಯು ತಿಳಿದರೆ ತಮ್ಮನ್ನು ಮನೆ ಬಿಡಿಸಿ ಹೊರಗೆ ಹಾಕಿಯಾರೆಂಬ ಭಯದಿಂದ ಅವರೂ ತಮ್ಮ ಲಗ್ನದ ಸಂಗತಿಯನ್ನು ಗುಪ್ತವಾಗಿ ಇಟ್ಟರು. ಕೆಲವು ದಿನಗಳವರೆಗೆ ನಿಮ್ಮ ತಾಯಿ ತಂದೆಗಳಿಬ್ಬರೂ