ಪುಟ:Kannadigara Karma Kathe.pdf/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೬

ಕನ್ನಡಿಗರ ಕರ್ಮಕಥೆ

ಅಪಮಾನಕರವಾದದ್ದರಿಂದ, ಬಾದಶಹರು ದಯಮಾಡಿ ನನ್ನನ್ನು ಕಳಿಸಬಾರದು.” ಎಂದು ಪ್ರಾರ್ಥಿಸಿದನು. ಇದಕ್ಕಾಗಿ ಬಾದಶಹನು ರಣಮಸ್ತಖಾನನ ಮೇಲೆ ಸಿಟ್ಟಾಗಿ, ಕಡೆಗೆ ಬೇರೊಬ್ಬ ಸರದಾರನಿಗೆ ಆ ಪತ್ರವನ್ನು ರಾಮರಾಜನಿಗೆ ಒಯ್ದು ಕೊಡುವಂತೆ ಆಜ್ಞಾಪಿಸಲಿಕ್ಕೆ ಸಹ ಹಿಂದುಮುಂದು ನೋಡಲಿಲ್ಲ.

ಬಾದಶಹನ ಈ ಕೃತಿಯಂತು ದರ್ಬಾರದ ಜನರ ಮನಸ್ಸಿಗೆ ಎಷ್ಟು ಮಾತ್ರವೂ ಬರಲಿಲ್ಲ. ಈ ಸಂಬಂಧದಿಂದ ಬಾದಶಹನು ಬಹಳ ಅನ್ಯಾಯ ಮಾಡಿದನೆಂದು ಅವರು ಭಾವಿಸಹತ್ತಿದರು. ಆದರೆ ಬಾದಶಹನ ಮುಂದೆ ಯಾರ ಆಟ ನಡೆಯುವದು ? ಅವರೆಲ್ಲರೂ ಬಾಯಿಮುಚ್ಚಿಕೊಂಡು ತೆಪ್ಪಗೆ ಕುಳಿತುಕೊಳ್ಳಬೇಕಾಯಿತು. ಇತ್ತ ಬಾದಶಹನು ಕಳಿಸಿದ ಸರದಾರನು ವಿಜಯನಗರಕ್ಕೆ ಹೋಗಿ, ರಾಮರಾಜನಿಗೆ ಪತ್ರವನ್ನು ಕೊಟ್ಟನು. ಪತ್ರದೊಳಗಿನ ಸಂಗತಿಯನ್ನು ಓದಿ ರಾಮರಾಜನಿಗೆ ಬಹಳ ಸಮಾಧಾನವಾಯಿತು. ರಾಮರಾಜನ ಗುಪ್ತಚಾರರೂ ಬಾದಶಹನ ಗುಪ್ತ ದರ್ಬಾರದಲ್ಲಿ ನಡೆದ ಸಂಗತಿಯನ್ನು ಹೇಳಿ, ಬಾದಶಹನು ರಣಮಸ್ತಖಾನನಿಗೆ ಕೆಲವು ದಿನ ದರ್ಬಾರಕ್ಕೆ ಬಾರದಿರುವಂತೆ ಆಜ್ಞಾಪಿಸಿದ್ದನ್ನು ತಿಳಿಸಿದ್ದನು. ಚಾರನ ಈ ಗುಪ್ತಮಾತನ್ನು ಕೇಳಿಯಂತು ರಾಮರಾಜನು, ತನಗೆ ಬಾದಶಹನು ಹೆದರುವನೆಂದು ಭಾವಿಸಿದನು. ಆ ಪತ್ರವನ್ನು ತಂದ ವಕೀಲನ ಮುಂದೆ ರಾಮರಾಜನು, ರಣಮಸ್ತಖಾನನನ್ನು ಬಹಳವಾಗಿ ನಿಂದಿಸಿದನು. ಆತನು ಆ ವಕೀಲನಿಗೆ, “ಒಬ್ಬ ಅನುಭವಿಕನಾದ ವಕೀಲನನ್ನೇ ಕಳಿಸಿಕೊಟ್ಟಿದ್ದರೆ, ಇಂಥ ಪ್ರಸಂಗವೇ ಬರುತ್ತಿದ್ದಿಲ್ಲ. ನಾನು ಮಾಡಿದ್ದು ಅನ್ಯಾಯವಲ್ಲ. ಅಂಥ ಪ್ರಸಂಗದಲ್ಲಿ ಬೇರೆ ಯಾರಿದ್ದರೂ ನನ್ನ ಹಾಗೆಯೇ ಮಾಡುತ್ತಿದ್ದರು. ನಮಗೆ ಸಂಶಯ ಬಂದಬಳಿಕ ಬುರುಕಿ ತೆಗೆಸಿ ನೋಡಿದರೆ ತಪ್ಪೇನು ? ವಿಜಾಪುರದ ಬಾದಶಹರೊಬ್ಬರು ನಮ್ಮ ಮಿತ್ರರಿರುವರು. ಆದರೆ ಅಹಮದನಗರ ಗೋವಳಕೊಂಡಗಳ ಬಾದಶಹರ ಸಂಗಡ ನಮ್ಮ ಮಿತ್ರತ್ವವಿಲ್ಲ. ವಿಜಾಪುರದವರ ಹೆಸರು ಹೇಳಿ ಬೇರೆ ಯಾರಾದರು ನಮ್ಮ ವಿರುದ್ಧ ಒಳಸಂಚು ನಡಿಸಿದ ಸಂಶಯ ಬಂದರೆ, ಅದರ ನಿವಾರಣವನ್ನು ನಾವು ಮಾಡಿಕೊಳ್ಳಬಾರದೋ?” ಎಂದು ಕೇಳಲು, ಹೊಸದಾಗಿ ಬಂದ ಆ ವಕೀಲನು- “ಅಲಬತ್, ಅಲಬತ್, ತಾವು ಸಂಶಯ ನಿವಾರಣವನ್ನು ಮಾಡಿಕೊಳ್ಳಲೇಬೇಕು. ಈ ಮಾತನ್ನು ಮನಸ್ಸಿನಲ್ಲಿ ತಂದು ಕೊಂಡೇ ಬಾದಶಹರು ನನ್ನನ್ನು ತಮ್ಮ ಬಳಿಗೆ ಕಳಿಸಿದ್ದಾರೆ. ತಾವು ಈಗ ಹೇಳುವ ಸಂಗತಿಗಳ ಮೇಲಿಂದ ತಮ್ಮ ಕಡೆಗೆ ಏನೂ ತಪ್ಪು ಇದ್ದಂತೆ ನನಗೆ ತೋರುವದಿಲ್ಲ. ತಮಗೆ ಒದಗಿದ ಪ್ರಸಂಗವೇ ಬಾದಶಹರಿಗೆ ಒದಗಿದ್ದರೆ, ಅವರೂ