ಪುಟ:Kannadigara Karma Kathe.pdf/೧೭೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೧೫೮
ಕನ್ನಡಿಗರ ಕರ್ಮಕಥೆ
 

ನಿಮ್ಮ ಹೆಸರು ಹೇಳಿ ನಮ್ಮನ್ನು ಬಹಳವಾಗಿ ಗದ್ದರಿಸಿದರು; ನಾವು ನಾಳೆ ವಿಜಾಪುರಕ್ಕೆ ಹೋಗಿ ಬಾದಶಹರಿಗೆ ಎಲ್ಲ ಸಂಗತಿಯನ್ನು ತಿಳಿಸಿದರೆ, ನಿಮ್ಮ ರಾಜ್ಯದ ಮೇಲೆ ದಂಡೆತ್ತಿ ಬರಲಿಕ್ಕೆ ವಿಳಂಬವಾಗದೆಂಬರ್ಥವನ್ನು ಸೂಚಿಸಿ ನಮ್ಮನ್ನು ಬೆದರಿಸುವ ಪ್ರಯತ್ನವನ್ನೂ ಒಂದೆರಡು ಸಾರೆ ಮಾಡಿದರು; ಆದರೆ ಅದರ ಕಡೆಗೆ ಲಕ್ಷ್ಯಗೊಡದೆ ನಮಗೆ ಯೋಗ್ಯವೆಂದು ತೋರಿದ ಮಾರ್ಗದಿಂದ ನಮ್ಮ ಸಂಶಯವನ್ನು ನಿವಾರಣವನ್ನು ನಾವು ಮಾಡಿಕೊಂಡು, ಕೂಡಲೇ ನಾವಾಗಿಯೇ ಆ ತರುಣಿಯನ್ನೂ, ಬೇರೆ ಜನರನ್ನೂ ಆ ನಿಮ್ಮ ವಕೀಲರಿಗೆ ಒಪ್ಪಿಸಿ ಬಿಟ್ಟೆವು. ಪುನಃ ನಮ್ಮ ರಾಜ್ಯದಲ್ಲಿ ಅವರ ಕೂದಲು ಕೊಂಕದಂತೆ ವ್ಯವಸ್ಥೆ ಮಾಡಿದೆವು. ಅವರ ಸಂರಕ್ಷಣಕ್ಕಾಗಿ ಜನರನ್ನು ಕೊಟ್ಟೆವು. ವಿಜಾಪುರದವರೆಗೆ ಸಹ ಅವರನ್ನು ಕಳುಸುವ ವ್ಯವಸ್ಥೆ ಮಾಡುವೆವೆಂದು ನಿಮ್ಮ ವಕೀಲರ ಮುಂದೆ ಹೇಳಿದೆವು. ಇದಲ್ಲದೆ, ಮೂರು ದಿನ ನಸುಕಿನಲ್ಲಿಯೇ ನಾವು ಸ್ವತಃ ನಿಮ್ಮ ವಕೀಲರ ಬಳಿಗೆ ಹೋಗಿ, ಅವರಿಗೆ ನಾನಾ ಪ್ರಕಾರದ ಆಶ್ವಾಸನೆಗಳನ್ನು ಕೊಟ್ಟೆವು; ಅದಕ್ಕೆ ಅವರು ಒಪ್ಪಿಗೆಯನ್ನು ಇತ್ತರು ; ಆದರೆ ತಿರುಗಿ ಮತ್ತೇನು ಅವರ ಮನಸ್ಸಿನಲ್ಲಿ ಬಂದಿತೋ ಏನೋ ಅವರು ಸ್ವತಃ ತಮ್ಮ ತನಕ ಓಡಿ ಬಂದಿದ್ದಾರೆ! ತಾವು ಬಹು ಯೋಗ್ಯ ವಿಚಾರ ಮಾಡಿದಿರಿ. ಇಲ್ಲದಿದ್ದರೆ ವ್ಯರ್ಥವಾಗಿ ಉಭಯ ಪಕ್ಷಗಳ ಅರ್ಥಹಾನಿ ಪ್ರಾಣಹಾನಿಗಳಾಗಬೇಕಾಗುತ್ತಿತ್ತು. ತಾವು ತಿರುಗಿ ವಕೀಲರನ್ನು ಕಳಿಸುವಾಗ ಯೋಗ್ಯ ಮನುಷ್ಯನನ್ನು ಕಳಿಸುವ ವ್ಯವಸ್ಥೆಯಾಗಬೇಕು. ಹೆಚ್ಚಿಗೆ ಏನೂ ಇಲ್ಲ.” ಇತ್ಯಾದಿ ಸಂಗತಿಗಳನ್ನು ಬರೆದು ನಂತರ ಕಡೆಗೆ ವಿನೋದದಿಂದ-“ಇದೆಲ್ಲ ಕಾಮ ದೇವರ ಆಟವಿರುತ್ತದೆ. ನೀವು ನಿಮ್ಮ ವಕೀಲರ ಲಗ್ನವನ್ನು ಆ ಕುಮಾರಿಯೊಡನೆ ಮಾಡಿರಿ; ಅಂದರೆ ನಮ್ಮ ಮೇಲಿನ ನಿಮ್ಮ ವಕೀಲರ ಸಿಟ್ಟು ಶಾಂತವಾಗುವದು ಅವರಿಬ್ಬರ ವಿವಾಹವು ಅವರಿಬ್ಬರಿಗೂ ಬಹು ಇಷ್ಟವಾಗುವದೆಂಬದು, ಇಲ್ಲಿರುವಾಗ ಅವರ ವರ್ತನೆಯಿಂದ ನಮಗೆ ನಂಬಿಗೆಯಾಗಿದೆ. ಆ ವಿವಾಹಕ್ಕೆ ನಮ್ಮನ್ನು ಕರಿಸಿದರೆ, ನಾವು ಬಹಳ ಸಂತೋಷದಿಂದ ಬಂದು ಅಕ್ಷತೆಯನ್ನು ಹಾಕುವೆವು. ನಿಮ್ಮ ವಕೀಲನ ಮೇಲೆ ನಮ್ಮ ಪ್ರೇಮವು ವಿಶೇಷವಾಗಿರುತ್ತದೆ. ಅವರಲ್ಲಿ ತಾರುಣ್ಯದ ರಂಗು ಬಹಳವಿರುತ್ತದೆಂಬ ದಿಷ್ಟೇ ಅವರಲ್ಲಿಯ ದೋಷವು; ಆದರೆ ಕಾಲಾಂತರದಿಂದ ಅದು ಹೊರಟು ಹೋಗಬಹುದು. ಅವರ ಮೇಲೆ ತಾವು ಸಿಟ್ಟಾಗಿರುವಿರೆಂದು ಕೇಳಿದ್ದೇವೆ. ಆದರೆ ಹಾಗೆ ಮಾಡದೆ, ಈವರೆಗೆ ಮಾಡಿದ ಅವರ ಚಾಕರಿಗೆ ಲಕ್ಷ್ಯಗೊಟ್ಟು ಅವರಿಗೆ ಪತ್ನಿಯನ್ನು ದೊರಕಿಸಿಕೊಡತಕ್ಕದ್ದು. ಅದರಂಥೆ ಅವರ