ಪುಟ:Kannadigara Karma Kathe.pdf/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಔದಾಶೀನ್ಯ

೧೫೯

ಪದವಿಯನ್ನಾದರೂ ಹೆಚ್ಚಿಸತಕ್ಕದ್ದು, ಅವರಿಗೆ ಸರದಾರ ಪದವಿಯನ್ನು ಕೊಡಬೇಕು ಎಂದು ನಾವು ಮನಃಪೂರ್ವಕವಾಗಿ ಶಿಫಾರಸು ಮಾಡುತ್ತೇವೆ. ನಮ್ಮ ಪದರಿನಲ್ಲಿ ಅವರು ಇರುತ್ತಿದ್ದರೆ, ನಾವು ಹಾಗೆ ನಿಶ್ಚಯವಾಗಿ ಮಾಡುತ್ತಿದ್ದೆವು.”

ಹೀಗೆ ಪತ್ರದ ಕಡೆಯಲ್ಲಿ ಬರೆದಿದ್ದ ವಿನೋದದ ಮಾತುಗಳನ್ನು ಓದಿದ ಕೂಡಲೇ ಬಾದಶಹನಿಗೆ ನಗೆ ಬಂದಿತು. ಆತನು ರಣಮಸ್ತಖಾನನನ್ನು ಕರೆಸಿಕೊಂಡು ಪತ್ರವನ್ನು ಓದಿ ತೋರಿಸಿದನು. ಆಮೇಲೆ ಮತ್ತೆ ಗುಪ್ತಾಲೋಚನೆಗಳಾದವು. ಬಳಿಕ ಬಾದಶಹನು ಮತ್ತೆ ದರ್ಬಾರು ಸೇರಿಸಿ-ರಾಮರಾಜನ ಪತ್ರವು ಬಂದು ಅದರಿಂದ ಬಾದಶಹರ ಸಮಾಧಾನವಾಗಿರುತ್ತದೆ. ಆ ಸಂಬಂಧದಿಂದ ಇನ್ನು ಮಾಡತಕ್ಕದ್ದೇನೂ ಉಳಿಯಲಿಲ್ಲ. ಇದು ರಣಮಸ್ತಖಾನನ ಕಾರಣವಿಲ್ಲದ ಉತಾವಳಿಯ ಪರಿಣಾಮವಾದದ್ದರಿಂದ, ಆತನು ಇನ್ನುಮೇಲೆ ತನ್ನ ಸ್ಥಿತಿಯನು ಸುಧಾರಿಸಿಕೊಳ್ಳತಕ್ಕದ್ದು. ಈಗ ನಾವು ಪುನಃ ಆತನನ್ನು ವಕೀಲನನ್ನಾಗಿ ವಿಜಯನಗರಕ್ಕೆ ಕಳಿಸುತ್ತೇವೆ; ಆದರೆ ಆತನೊಬ್ಬನ ಮೇಲೆ ನಮ್ಮ ವಿಶ್ವಾಸವಾಗದ್ದರಿಂದ, ಆತನ ಮೇಲೆ ಕಣ್ಣಿಡುವದಕ್ಕಾಗಿ ಖಾನಖನಾನ ಮಹಮೂದಖಾನ್ ಎಂಬವನನ್ನು ಕಳಿಸಿಕೊಡುವೆವು. ಖಾನಖನಾನನೇ ಮುಖ್ಯನು; ರಣಮಸ್ತಖಾನನು ಆತನ ಕೈ ಕೆಳಗಿನವನಾಗಿ ನಡೆಯತಕ್ಕದ್ದು, ಎಂದು ಜಾಹೀರು ಮಾಡಿದನು. ಇದರಿಂದ ದರ್ಬಾರದ ಜನರ, ವಿಶೇಷವಾಗಿ ತರುಣರ ಉತ್ಸಾಹವು ಕಡಿಮೆಯಾಯಿತು. ಹೀಗೆ ಮಾಡಿದ್ದರಿಂದ ಬರಿಯ ವಿಜಾಪುರದ ಬಾದಶಹನದಷ್ಟೇ ಅಲ್ಲ, ಇಡಿಯ ಮುಸಲಮಾನ ಬಾದಶಹರ ಮಹತ್ವವು ಕಡಿಮೆಯಾಗಿ, ಇದರಿಂದ ರಾಮರಾಜನು ಮತ್ತಷ್ಟು ಏರುವನೆಂದು ಆ ತರುಣರು ತಿಳಕೊಂಡರು. ರಣಮಸ್ತಖಾನನ ಗೌರವವನ್ನೇ ಕಡಿಮೆ ಮಾಡತಕ್ಕದಿದ್ದರೆ ಹೀಗೆ ದರ್ಬಾರದಲ್ಲಿ ಮಾಡದೆ, ಬಾದಶಹನು ಗುಪ್ತರೀತಿಯಿಂದ ಮಾಡತಕ್ಕದ್ದಿತ್ತೆಂದು ಅವರು ತಮ್ಮೊಳಗೆ ಮಾತಾಡಿಕೊಳ್ಳಹತ್ತಿದರು. ಅದರಂತೆ ಈಗ ಮೇಲೆಯೊಬ್ಬರನ್ನು ನಿಯಮಿಸಿ ಪುನಃ ರಣಮಸ್ತಖಾನನನ್ನು ವಿಜಾಪುರದ ವಕೀಲನನ್ನಾಗಿ ನಿಯಮಿಸಿ ಕಳಿಸಿದ್ದು ನೆಟ್ಟಗಾಗಲಿಲ್ಲೆಂದು ತರುಣರ ಮತವಾಯಿತು. ಕೆಲವರು ವೃದ್ದರಿಗೂ, ವಿಚಾರವಂತರಿಗೂ ಮಾತ್ರ ಬಾದಶಹನ ಕೃತಿಯು ಸಮರ್ಪಕವಾಗಿ ತೋರಿತು. ಇಷ್ಟು ಕುಲ್ಲಕ ಕಾರಣಕ್ಕಾಗಿ ಉಭಯ ಪಕ್ಷದ ಅರ್ಥ ಹಾನಿ-ಪ್ರಾಣಹಾನಿಗಳನ್ನು ಮಾಡಗೊಡೆಯಿದ್ದದ್ದು ಬಹುಯೋಗ್ಯವಾಯಿತೆಂದು ಅವರು ಭಾವಿಸಿದರು. ರಣಮಸ್ತಖಾನನ ಮೇಲೆ ಒಬ್ಬ ತಿಳುವಳಿಕೆಯ ವಕೀಲನನ್ನು ಕಳಿಸಿದ್ದೂ ಅವರಿಗೆ ಸಮರ್ಪಕವಾಗೆ ತೋರಿತು.