ಪುಟ:Kannadigara Karma Kathe.pdf/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬೦

ಕನ್ನಡಿಗರ ಕರ್ಮಕಥೆ

ಸ್ವತಃ ರಣಮಸ್ತಖಾನನಿಗೆ ಬಾದಶಹನ ಈ ಕೃತಿಯು ಸ್ವಾಭಾವಿಕವಾಗಿಯೇ ಸೇರಲಿಲ್ಲ. ಆತನು ಬಾದಶಹರಿಗೆ-ನನ್ನ ಮಾನಹಾನಿಯನ್ನು ಇಷ್ಟು ಮಾಡಬಾರದೆಂತಲೂ, ನನ್ನನ್ನು ತಿರುಗಿ ವಿಜಯನಗರಕ್ಕಾದರೂ ಕಳಿಸಬಾರದೆಂತಲೂ, ವಿಜಾಪುರದಲ್ಲಿ ತಮ್ಮ ಬಳಿಯಲ್ಲಿಯೇ ನನ್ನನ್ನು ಇಟ್ಟುಕೊಳ್ಳಿರೆಂತಲೂ ಬಹಳವಾಗಿ ಹೇಳಿಕೊಂಡನು. ಆದರೆ ಬಾದಶಹನು ಆತನ ಮಾತನ್ನು ಕೇಳಲಿಲ್ಲ. ನನ್ನ ಅಪ್ಪಣೆಯನ್ನು ನೀನು ಪಾಲಿಸಬೇಕೆಂದು ನಿಷ್ಠುರವಾಗಿ ಹೇಳಿದನು. ಅದರಿಂದ ರಣಮಸ್ತಖಾನನಿಗೆ ವಿಜಯನಗರಕ್ಕೆ ಹೋದಹೊರತು ಎರಡನೆಯ ಮಾರ್ಗವೇ ಉಳಿಯದಾಗಲು, ಅವನು ಸುಮ್ಮನೆ ಅದಕ್ಕೆ ಒಪ್ಪಿಕೊಂಡನು. ರಣಮಸ್ತಖಾನನ ಸಂಗಡ ಖಾನಖನಾನ ಮಹಮೂದಖಾನನೂ ಹೊರಟನು. ಅವರಿಬ್ಬರೂ ವಿಜಯನಗರಕ್ಕೆ ಬಂದರು. ರಣಮಸ್ತಖಾನನು ಬಹಳ ಲಜ್ಜೆಯಿಂದ ಕುಂಜವನವನ್ನು ಪ್ರವೇಶಿಸಿದನು. ಪಾಪ ಏನು ಮಾಡ್ಯಾನು ! ಬರುವಾಗ ವಿಜಾಪುರದಲ್ಲಿ ನೂರಜಹಾನಳನ್ನು ಕಾಣಲಿಕ್ಕೆ ಸಹ ಆತನಿಗೆ ಸಂಧಿಯು ದೊರೆಯಲಿಲ್ಲ. ಆದರೆ ಆಕೆಯು ತನ್ನ ಪ್ರತಿಜ್ಞೆಯಂತೆ ನಿಶ್ಚಯವಾಗಿ ನಡೆಯುವಳೆಂಬ ನಂಬಿಗೆಯು ಆತನಿಗಿತ್ತು. ವಿಜಾಪುರಕ್ಕೆ ಹೋದನಂತರ ಆಕೆಯ ಸಂಗಡ ಪ್ರತ್ಯಕ್ಷ ಮಾತಾಡುವದಂತು ಇರಲಿ, ಆಕೆಗೆ ಪತ್ರ ಬರೆದು ಕಳಿಸಲಿಕ್ಕೆ ಸಹ ರಣಮಸ್ತಖಾನನಿಗೆ ಅನುಕೂಲವಾಗಲಿಲ್ಲ. ಆತನು ತಿರುಗಿ ವಿಜಯನಗರಕ್ಕೆ ಬರಲಿಕ್ಕೆ ತಿಂಗಳ ಮೇಲೆ ಹಿಡಿಯಿತು. ಈ ಅವಧಿಯಲ್ಲಿ ಆತನು ತನ್ನ ತಾಯಿಗೆ ಪತ್ರ ಹಾಕಿದ್ದನು. ಆತನ ತಾಯಿಯ ಕಡೆಯಿಂದಲೂ ಆತನಿಗೆ ಪತ್ರಗಳು ಬಂದಿದ್ದವು. ರಣಮಸ್ತಖಾನನು ಕುಂಜವನಕ್ಕೆ ಬಂದ ಕೂಡಲೆ ಆತನು ಮೊದಲು ತನ್ನ ತಾಯಿಯ ದರ್ಶನ ಮಾಡಿಕೊಂಡು ಅಕೆಯ ಚರಣಕ್ಕೆರಗಿದನು, ಮಗನನ್ನು ನೋಡಿ ತಾಯಿಗೆ ಬಹಳಸಂತೋಷವಾದರೂ, ಬಾದಶಹನಿಂದ ಆತನು ನಿರಾಕರಿಸಲ್ಪಟ್ಟಿದ್ದಕ್ಕಾಗಿ ಆಕೆಯು ದುಃಖಿತಳಾಗಿದ್ದಳು. ರಣಮಸ್ತಖಾನನು ವಿಜಾಪುರದ ದರ್ಬಾರದಲ್ಲಿ ನಡೆದ ಸಂಗತಿಗಳನ್ನು ಒಂದುಳಿಯದಂಥೆ ಯಥಾವತ್ತಾಗಿ ತಾಯಿಯ ಮುಂದೆ ಹೇಳಿ, ತನ್ನ ಅಪಮಾನವು ಬಹಳವಾಯಿತೆಂದು ಆಕೆಯ ಮುಂದೆ ಆಡಿತೋರಿಸಿದನು. ಇನ್ನು ಮೇಲೆ ರಾಮರಾಜನು ನನ್ನನ್ನು ನಿರಾಕರಿಸುವನೆಂಬುದನ್ನು ಆತನು ತನ್ನ ತಾಯಿಯ ಮುಂದೆ ಹೇಳದೆಯಿರಲಿಲ್ಲ.

****