ಪುಟ:Kannadigara Karma Kathe.pdf/೧೭೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ಒಳಸಂಚು
೧೬೩
 

ಪ್ರಯತ್ನ ಮಾಡುತ್ತಲಿದ್ದಳು. ಒಮ್ಮೆ ಆಕೆಯು ರಣಮಸ್ತಖಾನನನ್ನು ಕುರಿತು ಸಲಿಗೆಯಿಂದ - “ನೀವು ಇಷ್ಟು ಉದಾಸೀನರಾಗಿರುವ ಕಾರಣವೇನು? ನೂರಜಹಾನಳ ಚಿಂತೆಯು ನಿಮ್ಮನ್ನು ಬಾಧಿಸುವದೋ? ನಾನು ಒಮ್ಮೆ ವಿಜಾಪುರಕ್ಕೆ ಹೋಗಿ ನೂರಜಹಾನಳನ್ನು ಕಂಡು ಆಕೆಯ ಮನಸಿನಲ್ಲಿದ್ದದ್ದನ್ನು ತಿಳಿಕೊಂಡು ಬರಲೇನು? ಅಥವಾ ನೂರಜಹಾನಳದಾದರೂ ಏನು ಪ್ರತಿಷ್ಠೆಯು? ಆಕೆಯಿಲ್ಲದಿದ್ದರೆ ಆಕೆಯಂಥ ನೂರಾರು ಮಂದಿ ತರುಣಿಯರು ನಿಮ್ಮ ಕಾಲಮೇಲೆ ಉರುಳಾಡುತ್ತ ಬಂದಾರು.” ಎಂದು ನುಡಿಯಲು, ರಣಮಸ್ತಖಾನನು ಸುಮ್ಮನೆ ಮುಗುಳುನಗೆ ನಕ್ಕನು ಮಾತ್ರ ; ಬಾಯಿಂದ ಪಿಟ್ಟೆಂದು ಮಾತಾಡಲಿಲ್ಲ ! ಆಗ ಲೈಲಿಯು ನಿರಾಶೆಪಟ್ಟು, ಮಾಸಾಹೇಬರ ಬಳಿಗೆ ಹೋಗಿ-ನಿಮ್ಮ ಮಗನ ಮನಸ್ಸಿನೊಳಗಿದ್ದದ್ದನ್ನು ತಿಳಿಕೊಳ್ಳುವದು ಸುಲಭವಲ್ಲೆಂದು ಹೇಳಿದಳು. ಅದನ್ನು ಕೇಳಿ ಮಾಸಾಹೇಬರಿಗೆ ಬಹಳ ಅಸಮಾಧಾನವಾಯಿತು. ತಾವು ಸ್ವತಃ ಒಮ್ಮೆ ಮಗನನ್ನು ಕೇಳಿ ನೋಡಬೇಕೆಂದು ಅವರು ಮಾಡಿದರು. ಆದರೆ ಹಾಗೆ ಮಾಡಲಿಕ್ಕೆ ಅವರಿಗೆ ಒಮ್ಮೆಲೆ ಧೈರ್ಯವಾಗಲೊಲ್ಲದು. ಮಗನು ಮೊದಲಿನಂತೆ ಈಗ ಸರಳ ಮನಸ್ಸಿನಿಂದ ಮನಸ್ಸು ಬಿಚ್ಚಿ ತಮ್ಮ ಸಂಗಡ ಮಾತಾಡುವದಿಲ್ಲವಾದ್ದರಿಂದ, ಈಗ ತಾವು ಕೇಳಿದರೆ ಆತನು ಏನು ಉತ್ತರಕೊಡವನೋ ಎಂದು ಅವರು ಶಂಕಿಸಹತ್ತಿದರು; ಆದರೂ ತಾಯಿಯ ಕರುಳು ! ಕೇಳದೆ ಸುಮ್ಮನೆ ಹ್ಯಾಗೆ ಬಿಡಬೇಕು? ಮಾಸಾಹೇಬರು ಹಾಗೆಯೇ ನಾಲ್ಕೆಂಟು ದಿನ ಹೋಗಬಿಟ್ಟು, ಆಮೇಲೆ ಒಂದು ದಿನ ಮಗನನ್ನು ಕರಕೊಂಡು ಹೋಗಿ- “ಬಾಳಾ ರಣಮಸ್ತ, ನೀನು ಇಷ್ಟು ಉದಾಸೀನನು ಯಾಕಾಗಿರುವೆ ? ನಿನ್ನ ಮೋರೆಯ ಮೇಲಿನ ಕಳೆಯೇ ಹೋಯಿತಲ್ಲ ! ನಿನ್ನ ಮನಸ್ಸಿನಲ್ಲಿದ್ದದ್ದನ್ನು ನನ್ನ ಮುಂದೆ ಹೇಳುವದಿಲ್ಲವೇ?” ಎಂದು ಅತ್ಯಂತ ಕಾರುಣ್ಯದಿಂದ ಕೇಳಿದರೂ ರಣಮಸ್ತಖಾನನು ಉತ್ತರಕೊಡದೆ ಬಹಳ ಹೊತ್ತು ಸುಮ್ಮನೆ ಕುಳಿತುಕೊಂಡನು. ಅದನ್ನು ನೋಡಿ ಮಾಸಾಹೇಬರ ನೇತ್ರಗಳು ಅಶ್ರುಪೂರ್ಣವಾಗಲು ಅವರು ಗದ್ಗದ ಸ್ವರದಿಂದ ಮತ್ತೆ ಮಗನನ್ನು ಕುರಿತು-"ಮಾತಾಡುವದಿಲ್ಲೇನಪ್ಪಾ ? ರಣಮಸ್ತ, ಮಾತಾಡುವದಿಲ್ಲವೆ ? ನೀನು ಹೀಗೆ ಉದಾಸೀನ ಮಾಡಿದ ಬಳಿಕ ನನ್ನನ್ನು ಕೇಳುವವರಾರು ? ನಿನ್ನ ಸ್ಥಿತಿಯನ್ನು ನೋಡಿ ನನಗೆ ಅನ್ನವು ಸವಿಹತ್ತುವದಿಲ್ಲ. ಅಲ್ಲಾನ ಧ್ಯಾನದಲ್ಲಿಯೂ ಮನಸ್ಸು ನಿಲ್ಲದಾಗಿದೆ.” ಅನ್ನಲು, ರಣಮಸ್ತಖಾನನು ತಟ್ಟನೆ ತಾಯಿಯನ್ನು ಕುರಿತು-ಮಾಸಾಹೇಬ, ನಿಜವಾಗಿಯೆಂದರೆ, ನನ್ನ ಮನಸ್ಸಿನ ಅಸಮಾಧಾನಕ್ಕೆ ಬೇರೆ ಕಾರಣವೇನೂ ಇಲ್ಲವೇ ಇಲ್ಲ. ಅಂದಬಳಿಕ ನಾನೇನು