ಪುಟ:Kannadigara Karma Kathe.pdf/೧೮೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ಒಳಸಂಚು
೧೬೫
 

ಬರುತ್ತೇನೆ” ಎಂದು ಹೇಳಿದಳು. ತನ್ನ ತಾಯಿಯ ಕೈಯಿಂದ ಇನ್ನು ಯಾವ ಕೆಲಸವೂ ಆದೀತೆಂದು ರಣಮಸ್ತಖಾನನಿಗೆ ತೋರಲಿಲ್ಲ; ಆದ್ದರಿಂದ ಆತನು ಮಾಸಾಹೇಬರನ್ನು ಕುರಿತು- “ನೀವು ಹೋಗಿ ಮಾಡುವದೇನು? ಬಾದಶಹರು ತಮ್ಮ ಅಪ್ಪಣೆಯನ್ನು ಎಂದೂ ತಿರುಗಿಸುವವರಲ್ಲ. ಒಂದು ಪಕ್ಷದಲ್ಲಿ ಅವರು ತಮ್ಮ ಅಪ್ಪಣೆಯನ್ನು ತಿರುಗಿಸಿದರೆ, ಅದರಿಂದ ವಿಶೇಷ ಪ್ರಯೋಜನವಾಗದು. ಇದಲ್ಲದೆ ಇಲ್ಲಿ ಇರಲಿಕ್ಕೆ ಈಗ ನನ್ನ ಮನಸ್ಸೂ ಒಡಂಬಡುವದಿಲ್ಲ” ಅನ್ನಲು, ಮಾಸಾಹೇಬರು-ಏನೇ ಆಗಲಿ, ನಾವು ವಿಜಾಪುರಕ್ಕೆ ಹೋಗಿ ಬರುವತನಕ ನೀನು ಸ್ವಸ್ಥವಾಗಿರು, ಕೆಲಸವಾಗುವದಿಲ್ಲೆಂದು ಕಂಡುಬಂದರೆ, ಏನು ಮಾಡಬೇಕೆಂಬುದನ್ನು ನಾವಿಬ್ಬರೂ ಕೂಡಿ ಆಲೋಚಿಸೋಣ, ಎಂದು ಬಹಳ ಪ್ರಕಾರವಾಗಿ ಹೇಳಿ, ವಿಜಾಪುರಕ್ಕೆ ಹೋಗಲಿಕ್ಕೆ ಮಗನ ಅನುಮತಿಯನ್ನು ಪಡೆದರು. ರಣಮಸ್ತಖಾನನು ಸಂಗಡ ತಕ್ಕಷ್ಟು ಜನರನ್ನು ಕೊಡಲು, ಆ ನಿಶ್ಚಯದ ಸ್ವಭಾವದ ಹೆಣ್ಣುಮಗಳು ಲೈಲಿಯೊಡನೆ ವಿಜಾಪುರಕ್ಕೆ ಹೋದಳು.

ಮಾಸಾಹೇಬರು ವಿಜಾಪುರಕ್ಕೆ ಹೋದಬಳಿಕ ಇತ್ತ ರಣಮಸ್ತಖಾನನನ್ನು ಕೇಳುವವರೇ ಇಲ್ಲದಾಯಿತು. ಅವರು ಹೋದ ಮೂರು-ನಾಲ್ಕು ದಿನಗಳ ಮೇಲೆ ರಾಮರಾಜನು, ಹಿಂದಕ್ಕೆ ಒಮ್ಮೆ ಬಂದಂತೆ ನಸುಕಿನಲ್ಲಿ ಕುಂಜವನಕ್ಕೆ ಬಂದನು. ಆತನು ತಾನು ಬಂದ ಸುದ್ದಿಯನ್ನು ರಣಮಸ್ತಖಾನನಿಗೆ ಹೇಳಿಕಳಿಸುಲು ಖಾನನು ಎದುರಿಗೆ ಬಂದು ರಾಮರಾಜನನ್ನು ವಿನಯದಿಂದ ಕರಕೊಂಡು ಹೋದನು. ಆಗ ರಾಮರಾಜನು ರಣಮಸ್ತಖಾನನಿಗೆ- “ಖಾನಸಾಹೇನ, ಪುನಃ ಕುಂಜವನವನ್ನು ನೋಡುವ ಹಾಗಾದ್ದರಿಂದ ಮತ್ತೆ ಬಂದೆನು; ಅದ್ರೆ ನಿಮ್ಮ ಒಪ್ಪಿಗೆ ಇರುವದಷ್ಟೇ ?” ಎಂದು ಕೇಳಲು, ರಣಮಸ್ತಖಾನನು ಅತ್ಯಂತ ವಿನಯದಿಂದ-ಕುಂಜವನವು ತಮ್ಮದು, ನನ್ನ ಪರವಾನಿಗೆಯೇತಕ್ಕೆ ? ಅವಶ್ಯವಾಗಿ ಒಳಗೆ ಹೋಗಬಹುದು, ಎಂದು ಹೇಳಿದನು. ಅದಕ್ಕೆ ರಾಮರಾಜನು-ನಡೆಯಿರಿ, ನಾವಿಬ್ಬರೂ ಪುಷ್ಕರಣಿಯ ಕಡೆಗೆ ಹೋಗೋಣ. ನಿಮ್ಮೊಡನೆ ನಾನು ಕೆಲವು ಮಾತುಗಳನ್ನು ಆಡಬೇಕಾಗಿದೆ. ಏಕಾಂತಕ್ಕೆ ತಕ್ಕ ಸ್ಥಳವಿದ್ದರಿಂದ ಅತ್ತ ನೀವು ಬಂದರೆ ಎರಡೂ ಕೆಲಸಗಳಾಗುವವು, ಅನ್ನಲು ರಣಮಸ್ತಖಾನನು- “ನನ್ನೊಡನೆ ಯಾವ ಮಾತುಗಳನ್ನಾಡುವನೋ” ಎಂದು ಆಲೋಚಿಸುತ್ತ ರಾಮರಾಜನೊಡನೆ ಹೊರಟನು. ಆತನನ್ನು ಕಟ್ಟಿಕೊಂಡು ರಾಮರಾಜನು ಸಂದಿಗೊಂದಿಗಳು ಕೂಡ ಉಳಿಯದಂತೆ ಕುಂಜವನವನ್ನೆಲ್ಲ ತಿರುಗಿದನು. ಇವರಿಬ್ಬರು ಹೀಗೆ ತಿರುಗುವದನ್ನು ನೋಡಿ ರಣಮಸ್ತಖಾನನಿಗೆ ಜನರು ಆಶ್ಚರ್ಯಪಟ್ಟು, ತಮ್ಮೊಳಗೆ