ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೭೦
ಕನ್ನಡಿಗರ ಕರ್ಮಕಥೆ

ಪ್ರಸಿದ್ಧರೀತಿಯಿಂದ ನಿಮ್ಮನ್ನು ಕೂಡಿಕೊಂಡರೆ, ಯಾವ ಕಾಲದಲ್ಲಿ ನನ್ನ ಘಾತವಾದೀತೆಂಬದನ್ನು ಹೇಳಲಾಗುವದಿಲ್ಲ; ಯಾಕೆಂದರೆ ಮೂವರು ಬಾದಶಹರಿಗೂ ಸಂಬಂಧಿಸಿದ ಹಲವು ಸಂಗತಿಗಳು ನನಗೆ ಗೊತ್ತಾಗುತ್ತದೆ. ಅವುಗಳನ್ನು ನಾನು ನಿಮಗೆ ತಿಳಿಸಿದರೆ, ಸರ್‍ವಸ್ವದ ಘಾತವಾದೀತೆಂದು ತಿಳಿದು ಆ ಮೂವರೂ ಬಾದಶಹರೂ ಏನಾದರೂ ಹಂಚಿಕೆ ಮಾಡಿ, ನನ್ನನ್ನು ಕೊಲ್ಲಿಸದೆ ಬಿಡರು ; ಆದ್ದರಿಂದ ಹೀಗಾಗಗೊಡುವದು ಇಷ್ಟವಲ್ಲ. ನಿಷ್ಕಾರಣವಾಗಿ ನನ್ನ ಮಾನ ಖಂಡನ ಮಾಡಿದ್ದಕ್ಕಾಗಿ ನಾನು ಬಾದಶಹನ ಸೇಡು ತೀರಿಸಿಕೊಳ್ಳವದು ಆವಶ್ಯಕವಾಗಿದೆ. ಇದರ ಸಂಗಡ ಬೇರೆ ಸಾಧಿಸಬೇಕಾಗುವ ನನ್ನ ಕಾರ್ಯಗಳನ್ನು ಸಾಧಿಸಿಕೊಳ್ಳಲಿಕ್ಕೆ ಬರಬಹುದು. ಯೋಗ್ಯ ಪ್ರಸಂಗದಲ್ಲಿ ನಾನು ನಿಮ್ಮನ್ನು ಕೂಡಿಕೊಂಡೆನೆಂದರೆ, ಚೆನ್ನಾಗಿ ಅವರ ಹಲ್ಲು ಮುರಿದಂತಾಗುವದು, ಆದ್ದರಿಂದ ಆಗಲೆ ನಿಮಗೆ ಹೇಳಿದಂತೆ, ನಾನು ನಿಮ್ಮ ನೌಕರನೂ ಆಗಿರುವೆನು. ನನಗೆ ಗೊತ್ತಾದ ಗುಪ್ತ ಸಂಗತಿಗಳನ್ನು ನಿಮ್ಮ ಮುಂದೆ ಹೇಳುತ್ತ ಹೋಗುವೆನು. ಅದರಂತೆ ನೀವು ಸಿದ್ದತೆ ಮಾಡಿಕೊಳ್ಳುತ್ತ ಸಾಗಿದರಾಯಿತು. ನನ್ನ ಈ ಕೃತಿಯು ನಮ್ಮ ತಾಯಿಯ ಮನಸ್ಸಿಗೆ ಎಷ್ಟು ಮಾತ್ರಕ್ಕೂ ಬರಲಿಕ್ಕಿಲ್ಲ; ಆಕೆಯು ಇದಕ್ಕೆ ಸರ್ವಥಾ ಒಪ್ಪಿಕೊಳ್ಳಲಾರಳು. ನಾನು ಇಂಥ ಕೃತಿಯಲ್ಲಿ ತೊಡಗಿರುವೆನೆಂಬ ಸುದ್ದಿಯು ಹತ್ತಿದರೆ ಸಾಕು, ಆಕೆಯು ನನ್ನ ಮೂಖಾವಲೋಕನ ಮಾಡಲಿಕ್ಕಿಲ್ಲ. ಆಕೆಯು ಒಳ್ಳೆಯ ನಿರ್ಧಾರದವಳೂ, ಅತ್ಯಂತ ಚತುರಳೂ ಇರುವಳು. ಈ ದಿನ ಆಕೆಯು ಇಲ್ಲಿ ಇಲ್ಲದಿದ್ದರಿಂದಲೇ ನಮಗೆ ಸಮಾಧಾನದಿಂದ ಮಾತಾಡಲಿಕ್ಕೆ ಆಸ್ಪದವುಂಟಾಗಿದೆ. ಆಕೆಯು ಇಲ್ಲಿ ಇರುತ್ತಿದ್ದರೆ, ಇಷ್ಟು ಮಾತಾಡಲಿಕ್ಕೂ ಮಾರ್ಗವಿದ್ದಿಲ್ಲ. ಹೇಳಿರಿ, ನಿಮಗೆ ನನ್ನ ಮಾತು ಮಾನ್ಯವಾಗಿರುವದೋ ಇಲ್ಲವೋ ? ಸದ್ಯಕ್ಕೆ ನನಗೆ ನಿಮ್ಮಿಂದ ಸಂಬಳ ಬೇಕಾಗಿಲ್ಲ, ಅಧಿಕಾರ ಬೇಕಾಗಿಲ್ಲ, ನನಗೆ ಬಾದಶಹನ ಸೇಡು ತೀರಿಸಿಕೊಳ್ಳಲಿಕ್ಕೆ ಆಸ್ಪದ ದೊರೆತರೆ ಸಾಕು. ಯಾಕೆ? ಮಾತಾಡಿರಿ, ಈಗ ಸುಮ್ಮನೆ ಯಾಕೆ ಕುಳಿತುಕೊಂಡಿರಿ ? ಇದರಲ್ಲಿ ನಿಮ್ಮ ಹಾನಿಯೇನೂ ಇರುವದಿಲ್ಲ, ಸಂಪೂರ್ಣ ಲಾಭವೇ ಇರುತ್ತದೆ. ಹೂ! ಯಾಕೆ ಮಾತಾಡಲೊಲ್ಲಿರಿ? ಎಂದು ಆತುರಪಡಹತ್ತಿದನು. ಅದಕ್ಕೆ ರಾಮರಾಜನು ಸಂತೋಷಾತಿಶಯದಿಂದ- ನನಗೆ ಮಾತಾಡಲಿಕ್ಕೆ ನೀವು ಆಸ್ಪದವನ್ನೇ ಇಟ್ಟಿಲ್ಲವೆಂದ ಬಳಿಕ ನಾನೇನು ಮಾತಾಡಲಿ? ಒಂದು ಬೇಡಿದರೆ ಎರಡು ಸಿಕ್ಕಂತಾದವು. ಸಂತೋಷವು ಬಹಳ ಸಂತೋಷವು! ನೆಟ್ಟಗಾಯಿತು, ಬಹಳ ನೆಟ್ಟಗಾಯಿತು! ಇದರಲ್ಲಿ ನನ್ನ ಲಾಭವು