ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೭೩

೧೯ನೆಯ ಪ್ರಕರಣ

ಮಾತೃದ್ರೋಹೋಪಕ್ರಮ

ಈ ಮೇರೆಗೆ ರಾಮರಾಜನು ಸಿಟ್ಟಿನಿಂದ ಹೋಗುವದನ್ನು ರಣಮಸ್ತಖಾನನು ಜನರು ನೋಡಿ ಸಮಾಧಾನ ಪಟ್ಟರು. ಅವರಿಬ್ಬರು ಕೂಗಿ ಕೂಗಿ ಮಾತಾಡಿ ಕಲಹ ಬೆಳಿಸಿದ್ದನ್ನು ಕೆಲವರು ಕೇಳಿದ್ದರು. ಇವರಿಬ್ಬರ ಕಲಹವು ಆ ರಣಮಸ್ತಖಾನನ ಜನರಿಗೆ ಬಹು ಇಷ್ಟವಾಗಿ ತೋರಿತು. ಅವರಲ್ಲಿ ಕೆಲವರು “ನಾನು ಹೀಗೆ ಆಗುವದೆಂದು ಮೊದಲೇ ತರ್ಕಿಸಿದ್ದೆವು” ಎಂದು ಹೇಳಿದರು. ಕೆಲವರು ಹೀಗಾದದ್ದು ಬಹಳ ನೆಟ್ಟಗಾಯಿತು. ರಾಮರಾಜನು ಬಹು ಸವಿಮಾತಿನವನಾದ್ದರಿಂದ ನಮ್ಮ ತರುಣ ಸರದಾರನ ಮನಸ್ಸನ್ನು ಎಲ್ಲಿ ಕೆಡಿಸುವನೋ ಎಂಬ ಅಂಜಿಕೆಯು ನಮಗೆ ಬಹಳವಾಗಿ ಇತ್ತು, ತಾನು ಇಂಥ ದೊಡ್ಡ ರಾಜ್ಯದ ಶ್ರೇಷ್ಠ ಅಧಿಕಾರಿ ಎಂದರೇನು ? ಸಂಗಡ ಯಾರನ್ನು ಕರಕೊಳ್ಳದೆ ತಾನು ಒಬ್ಬನೇ ನಮ್ಮ ಛಾವಣಗೆ ಬರುವದೆಂದರೇನು ? ಇದೆಲ್ಲ ಆತನ ಕಪಟನಾಟಕದ ಆರಂಭವೆಂದು ನಾವು ತಿಳಿದಿದ್ದೆವು; ಆದರೆ ಇಂದಿನ ಅವರ ಜಗಳದಿಂದ ಒಂದು ಅರಿಷ್ಟವು ಹಿಂಗಿದಹಾಗಾಯಿತು ಎಂದು ಮಾತನಾಡಿದರು. ಹೀಗೆ ಒಬ್ಬರು ಒಂದು ವಿಧವಾಗಿ, ಮತ್ತೊಬ್ಬರು ಮತ್ತೊಂದು ವಿಧವಾಗಿ ಮಾತಾಡಿ ಎಲ್ಲರೂ ಸಮಾಧಾನ ಪಟ್ಟರು ; ಆದರೆ ರಣಮಸ್ತಖಾನನಿಗೆ ಮಾತ್ರ ಸಮಾಧಾನವಾಗಿದ್ದಿಲ್ಲ. ರಾಮರಾಜನು ಹೋದಬಳಿಕ ಅವನು ವಿಚಾರಮಗ್ನನಾದನು. ಈಗ ತಾನು ನಡೆಸಿದ ಒಳಸಂಚನ್ನು ತನ್ನ ತಾಯಿಗೆ ಹೇಳಬೇಕೋ ಹೇಳಬಾರದೋ ಎಂಬ ವಿಚಾರವು ಆತನಲ್ಲಿ ಉತ್ಪನ್ನವಾಯಿತು. ಈ ವರೆಗೆ ಆತನು ಹೀಗೆ ಎಂದೂ ಆಲೋಚಿಸದೆ, ನಡೆದ ಸಂಗತಿಗಳನ್ನೆಲ್ಲ ಆಗಾಗ್ಗೆ ಸರಳ ಮನಸ್ಸಿನಿಂದ ತನ್ನ ತಾಯಿಯ ಮುಂದೆ ಹೇಳುತ್ತ, ಆಕೆಯ ಆಲೋಚನೆಗಳನ್ನು ಕೇಳಿಕೊಳ್ಳುತ್ತ ಬಂದಿದ್ದನು. ನೂರಜಹಾನಳೊಡನೆ ಪ್ರೇಮ ಸಲ್ಲಾಪಗಳೂ, ಪ್ರೇಮಸಂಧಿಯೂ ಆದಂದಿನಿಂದ ಆತನ ಈ ಸ್ಥಿತಿಯು ರೂಪಾಂತರಿಸಹತ್ತಿತು. ದಿನದಿನಕ್ಕೆ ಆತನು ಹೆಚ್ಚು ಹೆಚ್ಚು ಮೂಕನೂ ಉದಾಸೀನನೂ