ಪುಟ:Kannadigara Karma Kathe.pdf/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೭೪

ಕನ್ನಡಿಗರ ಕರ್ಮಕಥೆ

ಆಗಹತ್ತಿದನು. ನನ್ನ ತಾಯಿಯು ಒಳ್ಳೆಯ ಚತುರಳು, ತೀಕ್ಷ್ಣ ದೃಷ್ಟಿಯವಳು ಮೇಲಾಗಿ ಅತ್ಯಂತ ಸತ್ ಶೀಲಳು ತಗಲುದಾಟುಗಳನ್ನು ತಡೆಯದವಳು; ಅಂದಬಳಿಕ ವಿಶ್ವಾಸಘಾತದ ಮಜಲಿಗೆ ಬಂದಿರುವ ನನ್ನ ನೀಚ ಒಳಸಂಚನ್ನು ಆಕೆ ಹ್ಯಾಗೆ ಒಪ್ಪಿಕೊಂಡಾಳು? ಆಕೆಯು ಒಪ್ಪಿಕೊಳ್ಳದ ಬಳಿಕ ನನ್ನ ಕಾರ್ಯವು ಸಾಧಿಸುವ ಬಗೆ ಹೇಗೆ? ಆದ್ದರಿಂದ ನನ್ನ ವಿಚಾರಗಳನ್ನೂ, ಉದ್ದೇಶವನ್ನೂ ನನ್ನ ಹೊರತು ಬೇರೆ ಯಾರಿಗೂ ಗೊತ್ತಾಗದಂತೆ ನಾನೇ ಎಚ್ಚರಪಡುವದು ಅವಶ್ಯವು, ಎಂದು ಆತನು ನಿಶ್ಚಯಿಸಿದನು. ನೂರಜಹಾನಳು ಬರುವದಕ್ಕಿಂತ ಮೊದಲು ರಣಮಸ್ತಖಾನನ ಪ್ರೇಮವು ಆತನ ತಾಯಿಯಲ್ಲಿಯೇ ಒಟ್ಟುಗೂಡಿತ್ತು; ಆದ್ದರಿಂದ ಆತನಿಗೆ ತನ್ನ ತಾಯಿಯ ಪ್ರತ್ಯಕ್ಷ ದೇವತಾಸ್ತ್ರೀಯಂತೆ ಕಾಣುತ್ತಿದ್ದಳು. ಆದರೆ ಆತನು ನೂರಜಹಾನಳ ಮುಂದೆ “ರಾಮರಾಜನ ಶೀರಸನ್ನು ತುಂಡರಿಸಿ ನಿನಗೊಪ್ಪಿಸುವೆನೆಂದು ಪ್ರತಿಜ್ಞೆ ಮಾಡಿದ ದಿವಸ, ಆ ಪ್ರೇಮದಲ್ಲಿ ಸಮನಾಗಿ ಎರಡು ಭಾಗವಾಗಿ ಒಂದು ಭಾಗವು ನೂರಜಹಾನಳಲ್ಲಿ, ಒಂದು ಭಾಗವು ಮಾಸಾಹೇಬರಲ್ಲಿ ಹಂಚಲ್ಪಟ್ಟವು. ಮುಂದೆ ರಣಮಸ್ತಖಾನನು ನೂರಜಹಾನಳನ್ನು ಕರಕೊಂಡು ವಿಜಾಪುರಕ್ಕೆ ಹೋದ ಬಳಿಕ, ಅಲ್ಲಿ ತನ್ನ ಕುಲಶೀಲಗಳನ್ನು ಸ್ಪಷ್ಟವಾಗಿ ಹೇಳಿ, ನೂರಜಹಾನಳ ಹಳವಂಡವು ನೂರಜಹಾನಳಲ್ಲಿ ಒಟ್ಟುಗೂಡುತ್ತ ಹೋಗಿ, ತಾಯಿಯ ಮೇಲಿನ ಆತನ ಮಮತೆಯು ಕಡಿಮೆಯಾಗಲು ಆತನ ದೂಷಿತ ಮನಸ್ಸಿನಲ್ಲಿ ಸ್ವಾರ್ಥಮೂಲವಾದ ವಿಶ್ವಾಸಘಾತಾದಿ ದುಗ್ವಿಚಾರಗಳು ಉತ್ಪನ್ನವಾಗ ಹತ್ತಿದವು. ಆಯಾ ಕಾಲದಲ್ಲಿ ಹೀಗೆ ತನ್ನ ಮನಸ್ಸಿನ ರೂಪಾಂತರವಾದದ್ದು ರಣಮಸ್ತಖಾನನ ಅನುಭವಕ್ಕೆ ಬರಲಿಲ್ಲ. ತನ್ನ ತಾಯಿಯು ವಿಜಾಪುರದಿಂದ ತಿರುಗಿ ಬಂದಿದ್ದರೂ ಚಿಂತೆಯಿಲ್ಲೆಂದು ಆತನು ಭಾವಿಸಹತ್ತಿದನು; ಯಾಕೆಂದರೆ ತನ್ನ ಕಪಟಕೃತಿಯು ಫಲಿಸಲಿಕ್ಕೆ ತಾಯಿಯು ಸಾನಿಧ್ಯವು ಆತನಿಗೆ ಘಾತಕವಾಗಿ ತೋರಹತ್ತಿತ್ತು ! ಆದರೆ ರಣಮಸ್ತಖಾನನ ಈ ತೋರಿಕೆಗೂ ಆತನ ತಾಯಿಯ ಬರುವಿಕೆಗೂ ಏನೂ ಸಂಬಂಧವಿದ್ದಿಲ್ಲ. ಆತನ ತಾಯಿಯು ತಾನು ಬರುವ ಹಾಗೆ ವಿಜಾಪುರದಿಂದ ಹೊರಟು ಕುಂಜವನಕ್ಕೆ ಒಂದು ದಿನ ಬಂದುಬಿಟ್ಟಳು.

ಮಾಸಾಹೇಬರು ಬರುವದರೊಳಗಾಗಿ ರಣಮಸ್ತಖಾನನ ಮನಸ್ಸಿನ ನಿಶ್ಚಯವಾಗಿ ಆತನು ತನ್ನ ಒಳಸಂಚಿನಂತೆ ಕೃತಿಗಳನ್ನು ನಡೆಸಹತ್ತಿದನು. ಮಹಮೂದಖಾನನ ಪರವಾನಿಗೆಯನ್ನು ಪಡೆದು ವಿಜಯನಗರದ ದರ್ಬಾರಕ್ಕೆ ದಿನಾಲು, ಇಲ್ಲವೆ ಒಂದು ದಿನ ಬಿಟ್ಟು ಒಂದು ದಿನ ಹೋಗಹತ್ತಿದನು. ಮಧ್ಯರಾತ್ರಿಯಲ್ಲಿ ಸಹ ಆತನು ಅಕಸ್ಮಾತ್ತಾಗಿ ವಿಜಯನಗರಕ್ಕೆ ಹೋಗುತ್ತಲಿದ್ದನು.