ಪುಟ:Kannadigara Karma Kathe.pdf/೨೦೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೧೮೬
ಕನ್ನಡಿಗರ ಕರ್ಮಕಥೆ
 

ಹೋಗುವ ಸಪ್ಪಳವು ಕಿವಿಗೆ ಬಿದ್ದರೆ ಕೇಳಬೇಕೆಂತಲೂ ಅವರು ಆತುರಪಡುತ್ತಿದ್ದರು. ಅಂದು ಅವರ ಮನಸ್ಸಿನ ಸ್ಥಿತಿಯು ವಿಲಕ್ಷಣವಾಗಿತ್ತು.

ಇತ್ತ ಅದೇ ರಾತ್ರಿ ರಣಮಸ್ತಖಾನನು ತನ್ನ ಕೋಣೆಯಲ್ಲಿ ಅಸಮಾಧಾನದಿಂದ ಹಾಸಿಗೆಯ ಮೇಲೆ ಹೊರಳಾಡುತ್ತಿದ್ದನು. ಇಂದು ಮುಂಜಾನೆ ಮಾಸಾಹೇಬರ ಸಂಗಡ ಬಹು ನಿಷ್ಠುರತನದಿಂದ ನಡೆದುಕೊಂಡೆನೆಂಬ ಬಗ್ಗೆ ಆತನಿಗೆ ಬಹಳ ಪಶ್ಚಾತ್ತಾಪವಾಗಿತ್ತು. ಆದರೂ ತಾನು ಹೀಗೆ ನಡೆಯದಿದ್ದರೆ ನಿರ್ವಾಹವೇ ಇದ್ದಿಲ್ಲೆಂದು ಆತನು ಸಮಾಧಾನ ಮಾಡಿಕೊಳ್ಳುತ್ತಿದ್ದನು. ನೂರಜಹಾನಳ ವೃತ್ತಾಂತವೆಲ್ಲ ಆತನ ಕಣ್ಣುಮುಂದೆ ಕಟ್ಟಿದಂತೆ ಆಗಿ, ತಾನು ಯಾವ ಉಪಾಯದಿಂದ ನೂರಜಹಾನಳ ಲಗ್ನವಾಗಬೇಕಾದೀತೆಂದು ಆತನು ಆಲೋಚಿಸತೊಡಗಿದನು. ಆ ಕಾರ್ಯಕ್ಕೆ ತಾನು ಈಗ ರಾಮರಾಜನೊಡನೆ ನಡೆಸುವ ಒಳಸಂಚೇ ಅನುಕೂಲವಾದದ್ದೆಂದು ಆತನು ನಿರ್ಧರಿಸಿದನು. ಅಷ್ಟರಲ್ಲಿ ರಾತ್ರಿಯು ಐದು ತಾಸಿಗೆ ಬಂದಿತ್ತು. ಕೂಡಲೆ ರಣಮಸ್ತಖಾನನು ತನ್ನ ಸೇವಕನಾದ ನಜೀರನನ್ನು ಕರೆದು-ಹೋಗು, ಅಲ್ಲಿ ಖಾನನಿಗೆ ನನ್ನ ಕುದುರೆಯನ್ನು ಜೇನು ಹಾಕಿಕೊಂಡು ನಿನ್ನಿನ ಸ್ಥಳದಲ್ಲಿ ನಿಲ್ಲಿಸೆಂದು ಹೇಳು. ನಾನು ಇಂದೂ ನಿನ್ನಿನಂತೆಯೇ ಹೊರಗೆ ಹೋಗುತ್ತೇನೆ. ಬೆಳಗುಮುಂಜಾನೆ ಬರುವೆನು, ಮಾಸಾಹೇಬರು ಕದಾಜಿತ್ ಇಂದು ನನ್ನ ಶೋಧ ಮಾಡಬಹುದು. ಅವರಿಗೆ ನಾನು ಮಲಗಿಕೊಂಡಿರುವೆನೆಂದು ಹೇಳು. ಅವರು ನನ್ನನ್ನು ಎಬ್ಬಿಸಹೇಳಿದರೆ, 'ಯಾರು ಎಬ್ಬಿಸೆಂದರೂ ಎಬ್ಬಿಸಬೇಡೆಂದು' ತಕ್ಕ ತಾಕೀತುಮಾಡಿ ಮಲಗಿರುತ್ತಾರೆಂದು ಹೇಳಿಬಿಡು, ಎಂದು ಹೇಳಿದನು. ನಜೀರನಿಗೆ ಇಷ್ಟೆ ಬೇಕಾಗಿತ್ತು. ಅವನು ಅಲಿಖಾನ್‌ನ ಬಳಿಗೆ ಓಡುತ್ತ ಹೋಗಿ ರಣಮಸ್ತಖಾನನ ಅಪ್ಪಣೆಯನ್ನು ತಿಳಿಸಿದನು. ಈ ಸುದ್ದಿಯನ್ನು ಮಾಸಾಹೇಬರ ಮುಂದೆ ಯಾವಾಗ ಹೇಳೇನೆನ್ನುವ ಹಾಗೆ ನಜೀರನಿಗೆ ಆಗಿತ್ತು. ಆತನು ಈಗಲೇ ಈ ಸುದ್ದಿಯನ್ನು ಮಾಸಾಹೇಬರಿಗೆ ತಿಳಿಸಿ ಹೋಗಬೇಕೆಂಬ ಉಬ್ಬಿನಿಂದ, ರಣಮಸ್ತಖಾನನ ಬಂಗಲೆಯ ಕಡೆಗೆ ಹೋಗದೆ, ಮಾಸಾಹೇಬರ ಮನೆಯ ಕಡೆಗೆ ತಿರುಗಿದನು. ಅವನು ಹೋಗುವದರೊಳಗೆ ಮಾಸಾಹೇಬರ ಬಾಗಿಲು ಹಾಕಿಕೊಂಡು ಕುಳಿತ್ತಿದ್ದರು. ಲೈಲಿಯು ಹೊರಗೆ ಗೊರಕೆ ಹೊಡೆಯುತ್ತ ಮಲಗಿಕೊಂಡಿದ್ದಳು. ಮಾಸಾಹೇಬರು ಕೋಣೆಯಲ್ಲಿರುವಾಗ ಕರೆಯಲಾಗದೆಂದು ನಜೀರನಿಗೆ ಗೊತ್ತಿದ್ದರೂ, ಆತನು ಗೌರವದಿಂದ ಮಾಸಾಹೇಬರ ಬಾಗಿಲನ್ನು ನೂಕಿದನು. ಕೂಡಲೆ ಮಾಸಾಹೇಬರು “ಯಾರವರು” ಎಂದು ಕೇಳಲು, “ನಾನು ನಜೀರನು” ಎಂಬ ಉತ್ತರವು