ಲೈಲಿಯು ಎಚ್ಚರವಾಗಬೇಕೆಂದು ಬಹಳ ಯತ್ನಿಸಿದಳು; ಆದರೆ ವ್ಯರ್ಥವು ಕಡೆಗೆ ರಣಮಸ್ತಖಾನನನ್ನು ಕರೆಕಳುಹಿಸಿದಳು. ಅವರು ರಾತ್ರಿ ಹೋದವರು ಇನ್ನೂ ಬಂದಿಲ್ಲೊಂದು ಸುದ್ದಿಯು ಬಂದಿತು. ಹೊರಗೆ ತಾಸುಹೊತ್ತು ಏರಿತ್ತು. ಕಡೆಗೆ ಲೈಲಿಯು ತನಗೆ ಗೊತ್ತಿದ್ದ ಬೇರೆಬೇರೆ ಉಪಾಯಗಳನ್ನು ಮಾಡಿದಳು. ಆಗ ಬಹಳ ಹೊತ್ತಿನ ಮೇಲೆ ಮಾಸಾಹೇಬರಿಗೆ ಎಚ್ಚರವಾಯಿತು; ಆದರೆ ಅವರು ಭ್ರಮಿಷ್ಟರಂತೆ ನಾಲ್ಕೂ ಕಡೆಗೆ ನೋಡಹತ್ತಿದರು. ತಾವು ಎಲ್ಲಿ ಇರುತ್ತೇವೆಂಬದರ ನಿಶ್ಚಯವು ಅವರಿಗೆ ಆದಂತೆ ತೋರಲಿಲ್ಲ. ಆವರು ಬಹಳ ಹೊತ್ತು ಲೈಲಿಯನ್ನು ದಿಟ್ಟಿಸಿ ನೋಡಿದರು. ಆದರೆ ತಾವು ಯಾರನ್ನು ನೊಡುತ್ತೇವೆಂಬ ಪ್ರಜ್ಞೆಯೂ ಅವರಿಗೆ ಇದ್ದಿಲ್ಲ. ಅವರಿಗೆ ಇನ್ನೂ ಕನಸಿನ ಗುಂಗು ಇದ್ದಂತೆ ತೋರಿತು. ಲೈಲಿಯು ಈಗ ನಾಲ್ವತ್ತೈದು ವರ್ಷಗಳಿಂದ ಮಾಸಾಹೇಬರ ಬಳಿಯಲ್ಲಿರುತ್ತ ಬಂದಿದ್ದಳು; ಅವಳಿಗೆ ಇಂಥ ಪ್ರಸಂಗವು ಎಂದೂ ಬಂದಿದ್ದಿಲ್ಲ; ಆದರೆ ಈಗ ಸುಮಾರು ಮೂವತ್ತು ವರ್ಷಗಳ ಹಿಂದೆ ಒಮ್ಮೆ ಮಾಸಾಹೇಬರ ಹೀಗೆಯೇ ಚೀರಿ ನೆಲದ ಮೇಲೆ ಬಿದ್ದದ್ದು ಲೈಲಿಗೆ ನೆನಪಾಯಿತು. ಆಗಾದರೂ ಇಷ್ಟು ಹೊತ್ತು ಎಚ್ಚರ ತಪ್ಪಿ ಮಾಸಾಹೇಬರು ಬಿದ್ದಿದ್ದಿಲ್ಲ. ಲೈಲಿಯು ಹ್ಯಾಗಾದರೂ ಮಾಡಿ ಮಾಸಾಹೇಬರನ್ನು ಅವರ ಹೊರಸಿನ ಮೇಲೆ ಮಲಗಿಸಿದಳು. ಆಗ ಮಾಸಾಹೇಬರು ಒಂದೇಸವನೆ ಬಿಕ್ಕಿಬಿಕ್ಕಿ ಅಳಹತ್ತಿದರು. ಅದನ್ನು ನೋಡಿ ಲೈಲಿಯು ಮತ್ತಷ್ಟು ಗಾಬರಿಯಾದಳು. ಹೀಗೆ ಕೆಲಕಾಲ ಕ್ರಮಿಸಿದ ಮೇಲೆ ಮಾಸಾಹೇಬರು ಹೊರಸಿನ ಮೇಲೆ ಎದ್ದು ಕುಳಿತು ಲೈಲಿಯನ್ನು ಕುರಿತು- “ಲೈಲಿ, ಆ ನಜೀರನನ್ನು ಕರೆದುಕೊಂಡು ಬಾ” ಎಂದು ಹೇಳಿದರು. ಹೀಗೆ ಮಾಸಾಹೇಬರು ಎಚ್ಚರಿಕೆಯಿಂದ ಮಾತಾಡಿದ್ದನ್ನು ಕೇಳಿ ಲೈಲಿಗೆ ಪರಮಾನಂದವಾಯಿತು. ಆ ಆನಂದದಲ್ಲಿ ಆಕೆಯು ನಜೀರನನ್ನು ಕರೆಯಹೋಗಲಿಕ್ಕೆ ಸ್ವಲ್ಪ ತಡಮಾಡಲು, ಮಾಸಾಹೇಬರು ಲೈಲಿಗೆ-ನಾನು ಹೇಳಿದ್ದು ನಿನಗೆ ಕೇಳಿಸಲಿಲ್ಲವೇನು? ನಜೀರನ್ನು ಕರಕೊಂಡು ಬಾ, ನಜೀರನನ್ನು, ಎಂದು ಹೇಳಲು, ಲೈಲಿಯು ನಜೀರನನ್ನು ಕರಕೊಂಡು ಬಂದಳು. ಆಗ
ಮಾಸಾಹೇಬ-ನಿಮ್ಮ ಒಡೆಯನು ನಿನ್ನೆ ರಾತ್ರಿ ಯಾವಾಗ ಬಂದನು? ಇನ್ನೂ ಮಲಗಿಯೇ ಇರುವನೋ ಎದ್ದಿರುವನೋ? ಕರಿಂಬಕ್ಷನು ಇನ್ನೂ ಯಾಕೆ ಬರಲಿಲ್ಲ?
ನಜೀರ-ಮಾಸಾಹೇಬ, ಒಡೆಯರು ನಿನ್ನೆ ರಾತ್ರಿ ಹೋದವರು ಇನ್ನೂ ತಿರುಗಿ ಬಂದೇಯಿಲ್ಲ !