ಪುಟ:Kannadigara Karma Kathe.pdf/೨೦೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೧೯೨
ಕನ್ನಡಿಗರ ಕರ್ಮಕಥೆ
 

೨೧ನೆಯ ಪ್ರಕರಣ

ಕಡೆಯ ಉಪಾಯ

ನಜೀರನ ಈ ಮಾತನ್ನು ಕೇಳಿ ಮಾಸಾಹೇಬರು ಅತ್ಯಂತ ಚಕಿತರಾಗಿ ಸುಮ್ಮನೆ ನಿಂತುಕೊಂಡುಬಿಟ್ಟರು. ಅವರು ಯಾವದೋ ವಿಚಾರದಲ್ಲಿ ಮಗ್ನರಾಗಿರುವಂತೆ ತೋರಿತು. ಅವರು ಕೆಲಹೊತ್ತಿನ ಮೇಲೆ ನಜೀರನನ್ನು ಕುರಿತು- ನಜೀರ, ನೀನು ಹೊರಡು, ವಿಜಯನಗರದ ಹಾದಿಯ ತಿರುಮಲನ ಧರ್ಮಶಾಲೆಯಿರುವದು. ಅಲ್ಲಿಗೆ ಹೋಗಿ ಅಲ್ಲಿ ಕರೀಮಬಕ್ಷನು ಇದ್ದರೆ ನೋಡಿ ಬಾ. ಯಾರದಾದರೂ ಕುದುರೆಯನ್ನು ತೆಗೆದುಕೊಂಡು ಹೋಗು, ಹಾದಿಯಲ್ಲಿ ಎಲ್ಲಿಯೂ ನಿಲ್ಲಬೇಡ, ನೆಟ್ಟಗೆ ಹೋಗು. ಅಲ್ಲಿ ಕರೀಮಬಕ್ಷನು ನಿಮಗೆ ಸಿಗಬಹುದು; ಅಥವಾ ಹಾದಿಯಲ್ಲಿ ನಿನಗೆ ಅವನು ಎದುರಾಗಬಹುದು. ನಡೆ, ನನ್ನ ಮೋರೆಯನ್ನು ನೋಡುತ್ತ ನಿಲ್ಲಬೇಡ, ಈಗಲೇ ಮುಂದಕ್ಕೆ ಸಾಗು, ಎಂದು ಹೇಳಲು ನಜೀರನು ಕೂಡಲೇ ಹೊರಟುಹೋದನು. ಇದನ್ನೆಲ್ಲ ನೋಡುತ್ತ ನಿಂತಿದ್ದ ಲೈಲಿಗೆ ಏನೂ ಗೊತ್ತಾಗಲಿಲ್ಲ. ಅತ್ತ ನಜೀರನು ಹೋದಬಳಿಕ ಆಕೆಯು ಮಾಸಾಹೇಬರನ್ನು ಕುರಿತು- “ಕರೀಮನು ಆ ಧರ್ಮ ಶಾಲೆಗೆ ಯಾತಕ್ಕೆ ಹೋದನು ? ಯಾವಾಗ ಹೋದನು ? ಇದರ ಸಂಗತಿಯೇನೂ ನನಗೆ ತಿಳಿಯದಲ್ಲ ! ನಿಮ್ಮ ಸ್ಥಿತಿಯು ಇಂದು ಹೀಗೇಕೆ ಆಗಿದೆ ?” ಎಂದು ಕೇಳಲು ಮಾಸಾಹೇಬರು-ನೀನು ಇನ್ನು ಒಂದೆರಡು ದಿವಸ ನನ್ನನ್ನು ಏನೂ ಕೇಳಬೇಡ. ನನ್ನ ಜೀವಕ್ಕಾಗುವ ವ್ಯಥೆಯಷ್ಟೇ ಸಾಕು. ಮತ್ತೆ ನಿನ್ನ ಜೀವವನ್ನೇಕೆ ವ್ಯಥೆಗೆ ಈಡು ಮಾಡುತ್ತಿ ? ನನಗೆ ಇನ್ನು ಹುಚ್ಚು ಹಿಡಿಯುವದು. ಈಗ ಕಳೆದು ಹೋಗಿರುವ ದಿನಗಳೇ ಒಳ್ಳೆಯದೆಂದು ತಿಳಿ. ಇನ್ನು ಬರುವ ದಿನಗಳು ಬಹಳ ಕೆಟ್ಟವು. ಇರಲಿ, ನೀನು ನನಗಿಷ್ಟು ಹಾಲು ತಂದುಕೊಡು ಹೋಗು ನಿನ್ನಿಂದ ನಾನು ಭ್ರಮಿಷ್ಠಳಂತೆ ಆಗಿದ್ದೇನೆ. ಪ್ರಸಂಗ ಒದಗಿತೆಂದರೆ ನಿನಗೆಲ್ಲ ಸಂಗತಿಗಳು ಗೊತ್ತಾಗುವವು. ನಿನಗೆ ಗೊತ್ತಾಗದೆ ಯಾವ ಕೆಲಸವಾಗುವ ಹಾಗಿದೆ ? ನನಗಿಷ್ಟು ಕುಡಿಯಲಿಕ್ಕೆ ಹಾಲು ತಂದುಕೊಡುತ್ತೀಯಷ್ಟೇ ?