ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೯೪
ಕನ್ನಡಿಗರ ಕರ್ಮಕಥೆ

ಸಿಟ್ಟುಮಾಡಿ ಒಳಗೆ ಕರಕೊಂಡು ಹೋದಳು. ಮಾಸಾಹೇಬರು ಬಹು ಅಶಕ್ತರಾಗಿದ್ದರು. ತಮ್ಮ ಕೋಣೆಯೊಳಗೆ ಹೋದ ಕೂಡಲೇ ಅವರು ಹೊರಸಿನ ಮೇಲೆ ಕಣ್ಣುಮುಚ್ಚಿ ಸುಮ್ಮನೆ ಮಲಗಿಕೊಂಡರು. ಹೀಗಿರುವಾಗ ಹೊತ್ತು ಮುಳುಗಿತು, ಕತ್ತಲಾಗಹತ್ತಿತು. ರಣ ಮಸ್ತಖಾನನೂ ಇಲ್ಲ, ಆತನನ್ನು ನೋಡಲಿಕ್ಕೆ ಹೋದವನೂ ಇಲ್ಲ. ಇನ್ನು ತಾವು ಸ್ವತಃ ಹೋದಹೊರತು ಎರಡನೆಯ ಮಾರ್ಗವಿಲ್ಲೆಂದು ಮಾಸಾಹೇಬರು ನಿಶ್ಚಯಿಸಿದರು; ಆದರೆ ಅವರು ಎಲ್ಲಿಗಂತ ಹೋಗಬೇಕು ? ರಣಮಸ್ತಖಾನನು ಇಂಥಲ್ಲಿ ಇರುವನೆಂದು ಗೊತ್ತಾದರೆ ಹೋಗುವದು ನೆಟ್ಟಗೆ, ಏನೂ ಗೊತ್ತಿಲ್ಲದೆ ಹೋಗಿ ಫಲವೇನು? ಎಂಬ ಪ್ರಶ್ನೆಯು ಉತ್ಪನ್ನವಾಗಿ ಅವರು ನಿರಾಶೆಪಡುತ್ತಿರಲು, ನಜೀರನು ಬಂದ ಸುದ್ದಿಯನ್ನು ಲೈಲಿಯು ಹೇಳಿ, ಆತನನ್ನು ಮಾಸಾಹೇಬರ ಎದುರಿಗೆ ಬಂದು ನಿಲ್ಲಿಸಿದಳು. ನಜೀರನು ಬಂದವನು ಏದುಸಿರು ಬಿಡುತ್ತಲೇ ಬಂದಿದ್ದನು. ಅವನಿಗೆ ತಟ್ಟನೆ ಮಾತಾಡಲಿಕ್ಕೆ ಬರಲೊಲ್ಲದು. ಮಾಸಾಹೇಬರು ಆತನನ್ನು ನೋಡಿ, “ಏನು ಸುದ್ದಿಯನ್ನು ತಂದಿರುವೆ ?” ಎಂದು ಕಣ್ಣುಸನ್ನೆಯಿಂದಲೇ ಕೇಳಿದರು. ಅದನ್ನು ನೋಡಿ ಏದುಸಿರು ಬಿಡುತ್ತಲೇ ನಜೀರನು ಮಾಸಾಹೇಬರನ್ನು ಕುರಿತು-

ನಜೀರ-ಮಾಸಾಹೇಬ, ನನ್ನ ಬೆನ್ನ ಹಿಂದೆಯೇ ಕರೀಮನು ಬರುತ್ತಾನೆ. ಆತನು ಎಲ್ಲ ಸುದ್ದಿಯನ್ನು ಏಕಾಂತದಲ್ಲಿ ತಮಗೆ ಹೇಳುವನು.

ಮಾಸಾಹೇಬ-(ಹಾಸಿಗೆಯಿಂದ ಎದ್ದು ಕುಳಿತು) ಅವನು ಹೇಳುವದನ್ನು ಹೇಳಲಿ : ಆದರೆ ರಣಮಸ್ತಖಾನನು ಬಂದನೇ ? ಆತನು ಸುರಕ್ಷಿತನಾಗಿರುವನೇ?

ನಜೀರ-ಅದೇನೂ ನನಗೆ ಗೊತ್ತಿಲ್ಲ. ನವಾಬ ಸಾಹೇಬರು ಕರೀಮನ ಸಂಗಡವಂತು ಇಲ್ಲ. ಅಂದಬಳಿಕ ಅವನು ಎಲ್ಲಿರುವನೋ ಏನೋ ಯಾರಿಗೆ ಗೊತ್ತು !

ಈ ಮೇರೆಗೆ ಅವರಿಬ್ಬರೂ ಮಾತನಾಡುತ್ತಿರಲು ಕರೀಮನು ಬಂದನೆಂಬ ಸುದ್ದಿಯು ಮಾಸಾಹೇಬರಿಗೆ ಹತ್ತಿತು. ಆಗ ಅವರು ಎಲ್ಲರನ್ನು ಹೊರಗೆ ಕಳಿಸಿ, ಕರೀಮನನ್ನು ಏಕಾಂತದಲ್ಲಿ ಕರೆದರು. ಆಗ ಕರೀಮನು ಮಾಸಾಹೇಬರ ಬಳಿಗೆ ಬಂದು ಮೂರುಸಾರೆ ಕುರ್ನಿಸಾತ ಮಾಡಿ ಕೈ ಜೋಡಿಸಿಕೊಂಡು *ಗರೀಬಪರವರ” ಈ ಗುಲಾಮನಿಂದ ದೊಡ್ಡ ಅಪರಾಧವಾಗಿದೆ; ಕ್ಷಮೆಯ ಬಗ್ಗೆ ಆಶ್ವಾಸನೆ ದೊರೆತರೆ ಎಲ್ಲ ಸಂಗತಿಯನ್ನು ಅರಿಕೆ ಮಾಡಿಕೊಳ್ಳುವೆನು, ಅನ್ನಲು, ಮಾಸಾಹೇಬರು- “ಹೇಳು ಹೇಳು, ಎಂದು ಆತುರಪಡಹತ್ತಿದರು. ಆಗ ಕರೀಮನು ರುಮಾಲದಿಂದ ಕೈಯನ್ನು ಕಟ್ಟಿಕೊಂಡು ದೈನ್ಯಭಾವದಿಂದ