ಪುಟ:Kannadigara Karma Kathe.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕನ್ನಡಿಗರ ಕರ್ಮಕಥೆ

ಗುದುಮುರಿಗೆಯು ನಡೆದಿರಲು, ರಾಮರಾಜನ ಕಠಾರಿಯ ಇರಿತಗಳಿಂದ ಹುಲಿಯು ನೆಲಕ್ಕೆ ಉರುಳಿತು. ಹುಲಿಯ ಕಾಟ ತಪ್ಪುವವರೆಗೆ ರಾಮರಾಜನಿಗೆ ಆ ಸುಂದರಿ ಯೋಗಕ್ಷೇಮಕ್ಕೆ ಅನುಕೂಲವಾಗಲಿಲ್ಲ. ನೆಲಕ್ಕುರುಳಿ ಆಕ್ರೋಶಮಾಡುವ ಹುಲಿಯು ಇನ್ನು ಮೇಲಕ್ಕೇಳಲಾರದೆಂದು ಮನಗಂಡು, ರಾಮರಾಜನು ಸುಂದರಿಯ ಕಡೆಗೆ ಹೊರಳಿದನು. ಆಗ ಆಕೆಯು ಮೂರ್ಛಿತಳಾಗಿ ಭೂಮಿಯಲ್ಲಿ ಒರಗಿದ್ದಳು. ಮೊದಲು ಹುಲಿಯನ್ನು ಪೂರಾ ಕೊಲ್ಲಬೇಕೋ, ಸುಂದರಿಯನ್ನು ಎಚ್ಚರಗೊಳಿಸಬೇಕೋ ಎಂಬ ವಿಚಾರವು ರಾಮರಾಜನ ಮನಸ್ಸಿನಲ್ಲಿ ಉತ್ಪನ್ನವಾಯಿತು. ಆದರೆ ವಿಚಾರ ಮಾಡುತ್ತ ಕುಳಿತುಕೊಳ್ಳಲಿಕ್ಕೆ ಆಗ ಸಮಯವಿದ್ದಿಲ್ಲ. ಆತನು ತೀರ ನಿತ್ರಾಣವಾಗಿದ್ದ ಹುಲಿಯ ಗೊಡವೆಯನ್ನು ಬಿಟ್ಟು, ಆ ಮನೋಹರಳಾದ ಯೌವನ ಸುಂದರಿಯನ್ನು ಜಾಗ್ರತಗೊಳಿಸುವ ಉಪಾಯವನ್ನು ನಡೆಸಿದನು.

ರಾಮರಾಜನು ಮೂರ್ಛಿತಳಾದ ಆ ತರುಣಿಯನ್ನು ದೂರ ಎತ್ತಿಕೊಂಡು ಹೋಗಿ, ತನ್ನ ಸೆಲ್ಲೆಯ ಸೆರಗನ್ನು ನದಿಯಲ್ಲಿ ಅದ್ದಿಕೊಂಡು ಬಂದು ಶೀತೋಪಚಾರ ಮಾಡಹತ್ತಿದನು. ಕಣ್ಣಿಗೆ ನೀರು ಹಚ್ಚಿ ನೆತ್ತಿಗೆ ನೀರು ತಟ್ಟಿ ಗಾಳಿಹಾಕಹತ್ತಿದ ಸ್ವಲ್ಪ ಹೊತ್ತಿನ ಮೇಲೆ ಆ ತರುಣಿಯು ಸ್ವಲ್ಪ ಚೇತರಿಸಿ ಕಣ್ಣು ತೆರೆದಳು; ಆದರೆ ಅಷ್ಟರಲ್ಲಿ ರಾಮರಾಜನ ಮನಸ್ಸಿಗೆ ಏನೋ ಹೊಳೆದು, ಆತನು ಅರ್ಧ ಎಚ್ಚತ್ತಿದ್ದ ಆ ಸುಂದರಿಯನ್ನು ತನ್ನ ಕುದುರೆ ಕಟ್ಟಿದ ಗಿಡದ ಬಳಿಗೆ ಎತ್ತಿಕೊಂಡು ಹೋಗಿ, ಆಕೆಯನ್ನು ಕುದುರೆಯ ಮೇಲೆ ಅಡ್ಡ ಮಲಗಿಸಿ, ತಾನೂ ಕುದುರೆಯನ್ನು ಹತ್ತಿ ವೇಗದಿಂದ ಸಾಗಿದನು. ಇಷ್ಟಾದರೂ ಆ ತರುಣಿಯು ಪೂರ್ಣವಾಗಿ ಎಚ್ಚತ್ತಿರಲಿಲ್ಲ. ಈ ತರುಣನು ಯಾರು, ಈತನು ಏನು ಮಾಡುವನು ಎಂಬುದರ ಪ್ರಜ್ಞೆಯೂ ಆಕೆಗೆ ಇದ್ದಿಲ್ಲ. ಕುದುರೆಯನ್ನು ಒಂದೇ ಸಮನೆ ಓಡಿಸುತ್ತ ಸಾಗಿದ ರಾಮರಾಜನು, ವಿಜಯನಗರದಿಂದ ಕೆಲವು ಹರಿದಾರಿಯ ಮೇಲಿದ್ದ ಕುಂಜವನನೆಂಬ ಮನೋಹರವಾದ ತನ್ನ ಉದ್ಯಾನಕ್ಕೆ ಬಂದೇ ನಿಂತುಕೊಂಡನು. ಆ ಉದ್ಯಾನದ ಮಧ್ಯದಲ್ಲಿ ಒಂದು ಸುಂದರವಾದ ಮಂದಿರವು ಒಪ್ಪುತ್ತಿತ್ತು. ರಾಮರಾಜನು ಆ ಮಂದಿರದಲ್ಲಿಯ ಒಂದು ಕೋಣೆಯಲ್ಲಿ ಮಂಡಿಸಿದ್ದ ಪಲ್ಲಂಗದಲ್ಲಿ ಆ ತರುಣಿಯನ್ನು ಮಲಗಿಸಿ, ಆಕೆಯನ್ನು ಸಂಪೂರ್ಣವಾಗಿ ಎಚ್ಚರಗೊಳಿಸುವ ಉಪಾಯಗಳನ್ನು ನಡೆಸಿದನು. ಕೆಲಹೊತ್ತಿನ ಮೇಲೆ ಆ ತರುಣಿಯು ಎಚ್ಚತ್ತು ಕಣ್ಣೆರೆದು ನೋಡಲು ಮಚ್ಛರದಾನಿಯನ್ನು ಹಾಕಿದ ಒಂದು ಪಲ್ಲಂಗದ ಮೇಲೆ ಮಲಗಿದ್ದು ಬಳಿಯಲ್ಲಿ ಒಬ್ಬ ಸುಂದರನಾದ ತರುಣನು ಕುಳಿತಿರುವನೆಂಬುದು