ಪುಟ:Kannadigara Karma Kathe.pdf/೨೧೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ಕಡೆಯ ಉಪಾಯ
೧೯೭
 

ಆಮೇಲೆ ಖಾನಸಾಹೇಬರು ಪುನಃ ತಮ್ಮ ಬಳಿಗೆ ನನ್ನನ್ನು ಕರಿಸಿಕೊಂಡು ನನಗೆ- “ಲುಚ್ಚಾ ನಿನ್ನನ್ನು ಒಂದು ಗಿಡಕ್ಕೆ ತೂಗರಟ್ಟಿಸಿ ಈಗ ಹೊಡೆಸುತ್ತಿದ್ದೆನು; ಆದರೆ ನಿನ್ನಿಂದ ಒಂದು ಮಹತ್ವದ ಕೆಲಸ ಮಾಡಿಸಿಕೊಳ್ಳಬೇಕಾಗಿರುತ್ತದೆ. ಆದ್ದರಿಂದ ಬಿಟ್ಟಿದ್ದೇನೆ. ಹೀಗೆ ಮುಂದಕ್ಕೆ ಬಾ. ನಾನು ಹೇಳುವದನ್ನು ಚೆನ್ನಾಗಿ ಲಕ್ಷ್ಯದಲ್ಲಿಟ್ಟುಕೋ ಮಾಸಾಹೇಬರ ಮುಂದೆ ಹೇಳುವಾಗ ಒಂದು ಶಬ್ದವನ್ನಾದರೂ ತಪ್ಪಬೇಡ. ನಾನು ಹೇಳಿದಂತೆ ಒಂದು ಅಕ್ಷರ ಬಿಡದೆ ಅವರ ಮುಂದೆ ಹೇಳು. ಇನ್ನು ಮೇಲೆ ಅವರಿಗೂ ನನಗೂ ಭೇಟಿಯಾಗಲಾರದೆಂದು ಸ್ಪಷ್ಟವಾಗಿ ಅವರಿಗೆ ಹೇಳು. ನಾನು ಅವರಿಗೆ ಎರವಾದೆನು. ಅವರು ನನಗೆ ಎರವಾದರು. ನಾನು ವಿಜಾಪುರದ ಬಾದಶಹನ ಚಾಕರಿಯನ್ನು ಬಿಟ್ಟೆನು ಈಗ ಹಿಂದೂ ರಾಮರಾಜನ ನೌಕರನಾಗಿರುತ್ತೇನೆ. ನಾನು ಇನ್ನು ವಿಜಾಪುರದವರ, ಅದೇಕೆ ಎಲ್ಲಾ ಮುಸಲ್ಮಾನ ರಾಜರ ಸೇಡು ತೀರಿಸಿಕೊಳ್ಳತಕ್ಕವನು. ನೀವು ಗುಪ್ತರೀತಿಯಿಂದ ಶೋಧಮಾಡಿಸಿ ತಿಳಕೊಳ್ಳುವುದಕ್ಕಿಂತ ಹೆಚ್ಚು ಸ್ಪಷ್ಟವಾಗಿ ನಾನು ತಿಳಿಸಿರುತ್ತೇನೆಂದು ಮಾಸಾಹೇಬರಿಗೆ ಹೇಳು, ಎಂದು ನನ್ನ ಮುಂದೆ ಖಾನಸಾಹೇಬರು ಹೇಳಿದರು.

ಕರೀಮನ ಈ ಮಾತುಗಳನ್ನು ಕೇಳಿದ ಕೂಡಲೇ ಮಾಸಾಹೇಬರಿಗೆ ದಶದಿಕ್ಕುಗಳು ಶೂನ್ಯವಾದವು. ಇತ್ತ ಕರೀಮನು ತಾನು ಹೇಳುವ ಈ ಎಲ್ಲ ಸುದ್ದಿಯನ್ನು ಕೇಳಿದ ಬಳಿಕ ಮಾಸಾಹೇಬರು ತನಗೆ ಯಾವ ಶಿಕ್ಷೆಯನ್ನು ವಿಧಿಸುವರೋ ಏನೋ. ಅಷ್ಟರಲ್ಲಿ ತಾನು ಕಾಲಿಗೆ ಬುದ್ದಿಯನ್ನು ಹೇಳಿಸಬೇಕೆಂದು ಯೋಚಿಸಿ, ಆತನು ಅಲ್ಲಿಂದ ಪಲಾಯನ ಸೂಕ್ತವನ್ನು ಪಠಿಸಿದನು. ಮಾಸಾಹೇಬರು ತಮ್ಮೊಳಗೆ ವಿಚಾರಮಗ್ನರಾಗಿದ್ದರು. ಅವರು ಮನಸ್ಸಿನಲ್ಲಿ-ಇದೇನು ! ಇದೆಲ್ಲಿಯ ಬಡಿಗಲ್ಲು ಬಂದಿತು ? ನಾನು ಎಚ್ಚತ್ತಿರುವೆನೋ, ಕನಸಿನಲ್ಲಿರುವೆನೋ ! ಈತನು ನನ್ನೆದುರಿಗೆ ನಿಂತು ಹೇಳುವುದೇನು, ನಾನು ಜಾಗೃತಾವಸ್ಥೆಯಲ್ಲಿ ಕೇಳುವೆನೋ, ಸ್ವಪ್ನಾವಸ್ಥೆಯಲ್ಲಿ ಕೇಳುವೆನೋ ? ನನ್ನ ಮಗನು. ಯಾವನನ್ನು ಒಂದು ಉದ್ದಿಷ್ಟ ಕಾರ್ಯವನ್ನು ಮಣ್ಣುಗೂಡಿಸಿ, ನನ್ನ ಆಶಾತಂತುವನ್ನು ಹರಿದು ನನ್ನನ್ನು ದೂರ ದಬ್ಬಿಕೊಟ್ಟು ಯಾರ ಕಡೆಗೆ ಹೋದನು, ಆತನು ಯಾರ ಸ್ನೇಹವನ್ನು ಬಳಿಸಿದನು ? ಯಾರನ್ನು ದ್ವೇಷಿಸುತ್ತಿದ್ದನು ? ಯಾರಿಗೆ ಇಂಥ ನಿಷ್ಠುರ ಮಾತುಗಳನ್ನು ಹೇಳಿಕಳಿಸಿದನು ? ಇನ್ನು ಮುಂದೆ ನಾನು ಏನು ಮಾಡಲಿ? ಇನ್ನು ನನಗೆ ಬದಕುವ ಆಸೆ ಏತಕ್ಕೆ ? ಪರವರದಿಗಾರ, ಅಲ್ಲಾ ಈವರೆಗೆ ನಿನ್ನನ್ನು ಸೇವಿಸಿದ್ದು ವ್ಯರ್ಥವಾಯಿತೇ ? ಇಷ್ಟು ದಿವಸ ಯಾಕೆ ಆಸೆಯನ್ನು ತೋರಿಸಿದಿ ? ಇಷ್ಟು ದಿವಸ ನನ್ನ ಕೈಯಿಂದ ಆತನ