ಈಗ ಮೂವತ್ತು ವರ್ಷಗಳ ಹಿಂದೆಯೇ ಮಾಡಬೇಕಾಗಿದ್ದ ಕೆಲಸವನ್ನು ಈಗ ಮಾಡಬೇಕು. ಆಗ ನನ್ನ ಹೊಟ್ಟೆಯಲ್ಲಿ ಮತ್ತೊಂದು ಜೀವವಿದ್ದದ್ದರಿಂದ ಅದರ ಮೋಹವು ಬಾಧಿಸಲು ಪ್ರಾಣವನ್ನು ಅರ್ಪಿಸುವದು ನನ್ನಿಂದಾಗಲಿಲ್ಲ. ಆಗ ನನ್ನ ಆಸೆಯೇ ಬೇರೆ ಇತ್ತು. ಯಾವ ಮಗನಿಂದ ರಾಮರಾಜನ ಶಾಸನ ಮಾಡಿಸಬೇಕೆಂದು ನಾನು ಮಾಡಿದ್ದೆನೋ, ಆ ಮಗನೇ ಹೀಗೆ ನನ್ನ ಶಾಸನ ಮಾಡಿದ ಬಳಿಕ ಇನ್ನು ಮೇಲೆ ನನಗೆ ಯಾತರ ಆಸೆ ? ಅಥವಾ ನನ್ನನ್ನು ಶಿಕ್ಷಿಸಲಿಕ್ಕೆ ಮಗನಾದರೂ ಎಷ್ಟರವನು ? ಪರವರದಿಗಾರ ಖುದಾನೇ ನನ್ನ ಅಪರಾಧಕ್ಕಾಗಿ ನನ್ನನ್ನು ಶಿಕ್ಷಿಸಿರುವನು. ನಾನು ಪ್ರತ್ಯಕ್ಷ ಪತಿಯ ಸೇಡನ್ನು ಭಯಂಕರ ರೀತಿಯಿಂದ ತೀರಿಸಲು ಯೋಚಿಸಿದ್ದು ಅಪರಾಧವಲ್ಲವೇ ? ಅಲ್ಲಾನಿಗೆ ಅನ್ಯಾಯವಾಗಿ ತೋರಿದರೆ ರಾಮರಾಜನನ್ನು ಆತನೇ ಶಿಕ್ಷಿಸುತ್ತಿದ್ದನು. ಶಿಕ್ಷಿಸುವುದು ರಕ್ಷಿಸುವುದು ಆತನ ಕೆಲಸವಿದ್ದು, ಅದರಲ್ಲಿ ನಾನು ಯಾಕೆ ಕೈ ಹಾಕಬೇಕು ? ಮೊದಲು ನನ್ನ ಮನಸ್ಸಿನಲ್ಲಿ ಪ್ರೇಮದ ಹೊರತು ಎರಡನೆಯ ವಿಕಾರವೇ ಇದ್ದಿಲ್ಲ, ಅಂದಬಳಿಕ ಅದರ ಸ್ಥಳದಲ್ಲಿ ನಾನು ಈರ್ಷೆಯನ್ನು ಯಾಕೆ ಬರಗೊಡಬೇಕು? ನನ್ನ ಈ ಅಪರಾಧಕ್ಕಾಗಿ ನನಗೆ ದೇಹಾಂತ ಶಿಕ್ಷೆಯಾಗುವುದೇ ನ್ಯಾಯವು.
ಈ ಮೇರೆಗೆ ಮಾಸಾಹೇಬರ ಮನಸ್ಸಿನಲ್ಲಿ ಹಲವು ವಿಚಾರಗಳು ಉತ್ಪನ್ನವಾದವು. ಅವರು ಏನೂ ತೋಚದೆ, ಸ್ತಬ್ದವಾಗಿ ಕುಳಿತುಕೊಂಡುಬಿಟ್ಟರು. ತಮಗೆ ಸುದ್ದಿಯನ್ನು ಹೇಳಿದ ಕರೀಮನು ಯಾವಾಗ ಹೋದನೆಂಬದು ಅವರಿಗೆ ಗೊತ್ತೇ ಆಗಲಿಲ್ಲ. ಅದರಂತೆ ಅವರ ಬಳಿಯಲ್ಲಿ ಲೈಲಿಯು ನಿಂತಿದ್ದ ಅವರಿಗೆ ಗೊತ್ತಾಗಲಿಲ್ಲ. ಮಾಸಾಹೇಬರ ಈ ವಿಚಿತ್ರ ಸ್ಥಿತಿಯನ್ನು ನೋಡಿ ಲೈಲಿಗೆ ಅವರನ್ನು ಮಾತಾಡಿಸುವ ಧೈರ್ಯವಾಗದೆ ಆಕೆಯು ಸುಮ್ಮನೆ ಒತ್ತಟ್ಟಿಗೆ ಆಲೋಚಿಸುತ್ತ ನಿಂತುಬಿಟ್ಟಿದ್ದಳು. ಮಾಸಾಹೇಬರಾದರೂ ಹೀಗೆ ಎಷ್ಟು ಹೊತ್ತು ವಿಚಾರಮಾಡುತ್ತ ನಿಂತುಕೊಳ್ಳುವರು ? ಶರೀರಕ್ಕಿರುವಂತೆ ಮನಸ್ಸಿಗಾದರೂ ದಣುವಿಕೆಯು ಇದ್ದೇ ಇರುವುದು. ಅವರು ಮುಂದೆ ಸ್ವಲ್ಪ ಹೊತ್ತಿನಲ್ಲಿ ಎಚ್ಚತ್ತು ಲೈಲಿಯ ಕಡೆಗೆ ನೋಡಿದರು. ಆಗ ಅವರು ಶಾಂತಮುದ್ರೆಯಿಂದ ಲೈಲಿಯನ್ನು ಕುರಿತು-ಲೈಲೀ. ಇನ್ನು ಇಲ್ಲಿಯ ನಮ್ಮ ಅವತಾರವು ಮುಗಿದಂತಾಯಿತು. ನಮ್ಮ ಮನಸ್ಸಿನಲ್ಲಿದ್ದದು ಒಂದು, ಖುದಾನ ಮನಸ್ಸಿನಲ್ಲಿದ್ದದ್ದು ಮತ್ತೊಂದು, ಖುದಾನು ತನ್ನ ಮನಸ್ಸಿನಂತೆ ಮಾಡಿಬಿಟ್ಟನು. ಇನ್ನುಮುಂದೆ ನಾವು ಏನು ಮಾಡಬೇಕೆಂಬುದನ್ನು ಗೊತ್ತುಮಾಡಿಕೊಂಡು ಇನ್ನು ಒಂದೆರಡುತಾಸಿನೊಳಗೆ