ಪುಟ:Kannadigara Karma Kathe.pdf/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೦೪

ಕನ್ನಡಿಗರ ಕರ್ಮಕಥೆ


೨೨ನೆಯ ಪ್ರಕರಣ

ರಾಮರಾಜನ ಹೊಸವಿಚಾರ

ರಣಮಸ್ತಖಾನನು ಕರೀಮಬಕ್ಷನ ಸಂಗಡ ತನ್ನ ತಾಯಿಗೆ (ಮಾಸಾಹೇಬರಿಗೆ) ಹಾಗೆ ಸ್ಪಷ್ಟವಾಗಿ ಹೇಳಿಕಳಿಸಿದ್ದನ್ನು ನೋಡಿ ರಾಮರಾಜನಿಗೆ ಪರಮಾನಂದವಾಯಿತು. ರಣಮಸ್ತಖಾನನು ತನ್ನನ್ನು ಕೂಡಿಕೊಂಡದ್ದರಲ್ಲಿ ಮೋಸವೇನೂ ಇಲ್ಲೆಂಬ ನಂಬಿಗೆಯು ಆತನಿಗಾಯಿತು. ತಾನು ದೊಡ್ಡದೊಂದು ವ್ಯೂಹವನ್ನು ರಚಿಸಿ, ಮಹಾಕಾರ್ಯವನ್ನು ಸಾಧಿಸಿದೆನೆಂದು ಆತನು ಆನಂದಪಡಹತ್ತಿದನು. ಅತನು ವ್ಯೂಹರಚನೆಯಲ್ಲಿ ಮಹಾ ಸಮರ್ಥನಿದ್ದು. ತನ್ನ ಆ ಸಾಮರ್ಥ್ಯದ ಬಲದಿಂದ ಆತನು ಈವರೆಗೆ ಹಲವು ಕಾರ್ಯಗಳನ್ನು ಸಾಧಿಸುತ್ತ ಬಂದಿದ್ದನು. ಆ ಕಾರ್ಯಗಳಲ್ಲೆಲ್ಲ ರಣಮಸ್ತಖಾನನನ್ನು ತನ್ನ ಕಡೆಗೆ ಎಳಕೊಂಡದ್ದು ಹೆಚ್ಚಿನದೆಂದು ಆತನು ಭಾವಿಸಹತ್ತಿದನು. ಬಹಮನಿ ಬಾದಶಹರಲ್ಲಿ ಪರಸ್ಪರ ವೈಮನಸ್ಯವೂ, ಮಾತ್ಸರ್ಯವೂ ಇರುವವರೆಗೆ ತನ್ನ ರಾಜ್ಯಕ್ಕೆ ಭಯವಿಲ್ಲೆಂದು ರಾಮರಾಜನು ತಿಳಿದುಕೊಂಡದ್ದು ಆ ವೈಮನಸ್ಯ, ಮಾತ್ಸರ್ಯವೂ ಯಾವಾಗಲೂ ಇರುವಂತೆ ರಾಮರಾಜನು ತಂತ್ರವನ್ನು ಒಡ್ಡುತ್ತ ಬಂದಿದ್ದನು; ಆದರೆ, ಮೂವರು ಬಹಮನೀ ಬಾದಶಹರು ಒಂದಾದರೆ ಹ್ಯಾಗೆ ಮಾಡಬೇಕೆಂಬ ಭಯದಿಂದ ಮುಕ್ತನಾಗಲಿಕ್ಕೆ ಆತನು ಈಗ ಹವಣಿಸಹತ್ತಿದನು. ಮೂವರು ಬಾದಶಹರು ಒಟ್ಟಾಗಿ ಬಂದರೂ ಅವರ ಮಗ್ಗಲು ಮುರಿಯುವಷ್ಟು ಸಾಮರ್ಥ್ಯವನ್ನು ತಾನು ಪಡೆದು, ಒಮ್ಮೆ ಮುಸಲ್ಮಾನ ಬಾದಶಹರಿಗೆ ಚೆನ್ನಾಗಿ ಕೈತೋರಿಸಿದರೆ, ತಾನು ನಿರ್ಭಯನಾಗಿ ಎಲ್ಲರ ಮೇಲೆ ವರ್ಚಸ್ಸು ಕೂಡಿಸಬಹುದೆಂದು ಆತನು ಎಣಿಕೆ ಹಾಕಿದ್ದನು. ಈ ಎಣಿಕೆಯು ಕೈಗೂಡಲಿಕ್ಕೆ ಮುಸಲ್ಮಾನ ಬಾದಶಹರ ಮರ್ಮಸ್ಥಾನಗಳೂ, ಮುಸಲ್ಮಾನ ಸೈನ್ಯದ ಯುದ್ಧ ಮಾಡುವ ರೀತಿಯೂ ಗೊತ್ತಿದ್ದ ಒಬ್ಬ ಮುಸಲ್ಮಾನ ಸರದಾರನು ತನ್ನ ಕಡೆಗೆ ಒಡೆದು ಬರುವ ಅವಶ್ಯವಿತ್ತು, ಈವರೆಗೆ ವಿಜನಗರದ ಅರಸರು ತಮ್ಮ ದಂಡಿನಲ್ಲಿ ಪಠಾಣ, ಅರಬ ಮೊದಲಾದ ಜಾತಿಯ ಮುಸಲ್ಮಾನ ದಂಡಾಳುಗಳನ್ನು