ಆಕೆಗೆ ಗೊತ್ತಾಯಿತು. ಕೂಡಲೇ ಆಕೆಯು ಮೆಟ್ಟಿಬಿದ್ದು, ಚಟ್ಟನೆ ಎದ್ದು ಪಲ್ಲಂಗದಿಂದ ಇಳಿದು ಕೆಳಗೆ ನಿಂತುಕೊಂಡಳು. ಆಗ ರಾಮರಾಜನು ಅಚ್ಚ ಫಾರಸೀ ಭಾಷೆಯಿಂದ ಆ ತರುಣಿಯನ್ನು ಕುರಿತು- "ತಾವು ಏಳಬಾರದು, ಇನ್ನೂ ನಿಮ್ಮ ಪ್ರಕೃತಿಯು ನೆಟ್ಟಗಾಗಲಿಲ್ಲ, ಸ್ವಸ್ಥ ಮಲಗಿಕೊಳ್ಳಬೇಕು, ಹುಲಿಯ ಭಯವೇನೂ ಇಲ್ಲಿ ಇರುವುದಿಲ್ಲ" ಎಂದು ನುಡಿದ ಕೂಡಲೇ ಆ ತರುಣಿಗೆ ಹೊಳೆಯ ದಂಡೆಯ ನೆನಪು ಆಗಿ, ಅಲ್ಲಿಯ ಭಯಂಕರವಾದ ನೋಟವು ಆಕೆಯ ಕಣ್ಣಿಗೆ ಕಟ್ಟಿತು. ಬಿರುಗಾಳಿಗೆ ತತ್ತರಿಸುವ ಬಳ್ಳಿಯಂತೆ ಆಕೆಯು ಗದಗದ ನಡುಗಹತ್ತಿದಳು, ಸ್ವಲ್ಪ ಹೊತ್ತಿನ ಮೇಲೆ ಆಕೆಯು ಸಮಾಧಾನ ತಾಳಿ ರಾಮರಾಜನನ್ನು ಕುರಿತು-
ತರುಣಿ- ನನ್ನನ್ನು ಆ ಭಯಂಕರವಾದ ಹುಲಿಯ ಬಾಯೊಳಗಿಂದ ಬಿಡಿಸಿದವರು ತಾವೇ ಏನು ?
ರಾಮರಾಜ- ಹೌದು; ಕ್ರೂರ ವ್ಯಾಘ್ರನ ದವಡೆಯೊಳಗಿಂದ ಚಿಗುರೆಯನ್ನು ಬಿಡಿಸಿ, ಬೇಟೆಯಲ್ಲಿ ಎರಡು ಫಲಗಳನ್ನು ಸಂಪಾದಿಸಿದ ಮಹದ್ಭಾಗ್ಯ ಶಾಲಿಯು.
ತರುಣಿ– ಆದರೆ ನನ್ನವರು ಎಲ್ಲಿದ್ದಾರೆ ?
ರಾಮರಾಜ- ನಾನೂ ನಿಮ್ಮವನೇ ಇರುತ್ತೇನೆ ; ಹಾಗೂ ಮರಣ ಪರ್‍ಯಂತರವಾಗಿ ನಿಮ್ಮವನೆನಿಸಿಕೊಳ್ಳುವ ಮಹದ್ಭಾಗ್ಯವು ದೊರೆಯಬೇಕೆಂದು ಮನಃಪೂರ್ವಕವಾಗಿ ನಾನು ಇಚ್ಚಿಸುತ್ತೇನೆ.
ತರುಣಿ- ತಾವು ಯಾರು ?
ರಾಮರಾಜ- ಇಂದಿನವರೆಗೆ ನಾನು ವಿಜಯನಗರದ ರಾಜ್ಯದೊಳಗಿನ ಒಬ್ಬ ದೊಡ್ಡ ಸರದಾನ ಮಗನು ಮಾತ್ರ ಆಗಿದ್ದೆನು, ಇಂದಿನಿಂದ ತಮ್ಮ ದಾಸನೂ ಆಗಿರುವೆನು.
ತರುಣಿ– ಆದರೆ ನಮ್ಮವರು ಎಲ್ಲಿದ್ದಾರೆ.
ರಾಮರಾಜ-ಅವರು ಎಲ್ಲಿರುವರೆಂಬುದನ್ನು ನೋಡಲಿಕ್ಕೆ ಆಗ ನನಗೆ ಕೂಡಲೇ ಆಗಲೇ ಇಲ್ಲ. ಕತ್ತಲಾಗುತ್ತದೆಂದು ತಮ್ಮನ್ನು ಕರಕೊಂಡು ಬಂದುಬಿಟ್ಟೆನು. ಇನ್ನು ನಿಮಗೆ ಪೂರಾ ನೆಟ್ಟಗಾದಮೇಲೆ ನಿಮ್ಮ ಅಪ್ಪಣೆಯಿಂದ ನಿಮ್ಮ ಮನೆಯವರನ್ನು ಹುಡುಕಿಸುವೆನು.
ತರುಣಿ-ನನ್ನನ್ನು ಸಂಗಡ ಕರಕೊಂಡು ಹೋಗಿಯೇ ನನ್ನ ಮನೆಯವರನ್ನು ಹುಡಿಕಿ, ಅವರ ಬಳಿಗೆ ನನ್ನನ್ನು ಕಳಿಸಬೇಕು.
ರಾಮರಾಜ- ಆಮೇಲೆ ನಿನ್ನನ್ನು ಯಾರಿಗೆ ಒಪ್ಪಿಸಲಿ ? ನನ್ನ ಗತಿಯೇನು? ನನ್ನಿಂದ ತಮ್ಮ ಸಂರಕ್ಷಣೆಯಾದಂತೆ. ಇನ್ನು ತಾವು ನನ್ನನ್ನು ರಕ್ಷಿಸಲೇಬೇಕು.
ಪುಟ:Kannadigara Karma Kathe.pdf/೨೨
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ವಿನಾಶಾಂಕುರ
೭