ಅನುಭವಕ್ಕೆ ಬಾರದೆ ಹೋಗುವದಿಲ್ಲ. ರಾಮರಾಜನ ಸ್ಥಿತಿಯಾದರೂ ಹೀಗೆಯೇ ಆಯಿತು. ರಾಮರಾಜನ ಸ್ವಭಾವವು ಮಹತ್ವಾಕಾಂಕ್ಷಿಯಾಗಿದ್ದಂತೆ ಶಂಕಾಮಯವೂ ಆಗಿತ್ತು. ಮೊದಮೊದಲಿಗೆ ಎಲ್ಲ ಕೆಲಸವು ಅತ್ಯುತ್ತಮ ರೀತಿಯಿಂದ ಸಾಧಿಸಿತೆಂದು ಆತನಿಗೆ ತೋರಿ ಪರಮಾನಂದವಾಯಿತು; ಆದರೆ ಮುಂದೆ ಒಂದೆರಡು ದಿನಗಳಲ್ಲಿ ಆತನನ್ನು ಎರಡು ಮೂರು ಶಂಕೆಗಳು ಬಾಧಿಸಹತ್ತಿದವು. ಈಗ ನಡದದ್ದರಲ್ಲಿ ಮೋಸವಿರಲಿಕ್ಕಿಲ್ಲವಷ್ಟೆ ? ಈ ರಣಮಸ್ತಖಾನನು ತನಗೆ ಮಂಕುಬೂದಿಯನ್ನು ಹಚ್ಚುತ್ತಿರಲಿಕ್ಕಿಲ್ಲವಷ್ಟೆ ? ಎಂಬ ಶಂಖೆಯು ಒಂದನೆಯದು, ಈತನ ತಾಯಿಯು ಏನಾದರೂ ಬೋಧಿಸಿ ಈತನ ಮನಸ್ಸನ್ನು ತಿರುಗಿಸಲಿಕ್ಕಿಲ್ಲವ ? ಎಂಬ ಶಂಕೆಯು ಎರಡನೆಯದು, ತಾನು ತರ್ಕಿಸಿದಂತೆ ಈತನು ನನ್ನಿಂದ ಮೆಹೆರ್ಜಾನಳಲ್ಲಿ ಹುಟ್ಟಿದ್ದೇ ನಿಜವಾಗಿದ್ದ ಪಕ್ಷದಲ್ಲಿ, ಈತನು ತನ್ನ ನಿಜವಾದ ಕುಲವೃತ್ತಾಂತವನ್ನರಿತ ಬಳಿಕ ನನ್ನನ್ನು ಘಾತಿಸಲಿಕ್ಕಿಲ್ಲವಷ್ಟೆ ? ಎಂಬ ಶಂಕೆಯು ಮೂರನೆಯದು. ಈ ಮೂರು ಶಂಕೆಗಳ ನಿವಾರಣಕ್ಕಾಗಿ ಆತನು ಮೂರು ಉಪಾಯಗಳನ್ನು ಯೋಚಿಸಿದನು. ರಣಮಸ್ತಖಾನನ ನಡತೆಯನ್ನು ಶೋಧಿಸುವದಕ್ಕಾಗಿ ಗುಪ್ತಚಾರರನ್ನಿಡಬೇಕೆಂದು ಮಾಡಿದನು. ತಾಯಿ-ಮಕ್ಕಳ ದರ್ಶನವಾಗದಂತೆ ವ್ಯವಸ್ಥೆಯನ್ನಿಡಬೇಕೆಂದು ನಿಶ್ಚಯಿಸಿದನು ಆತನ ಕುಲ ವೃತ್ತಾಂತವು ಆತನಿಗೆ ತಿಳಿಯದಂತೆ ಜಾಗರೂಕವಾಗಿರಬೇಕೆಂದು ಗೊತ್ತುಮಾಡಿಕೊಂಡನು. ಈ ಮೂರು ಉಪಾಯಗಳು ಚೆನ್ನಾಗಿ ಸಾಧಿಸಬೇಕಾದರೆ, ರಣಮಸ್ತಖಾನನನ್ನು ತನ್ನ ಅಂಗ ರಕ್ಷಕನನ್ನಾಗಿ ನಿಯಮಿಸಿಕೊಳ್ಳಬೇಕೆಂದು ಯೋಚಿಸಿದನು. ಅಂಗರಕ್ಷಕನಾದ ಬಳಿಕ ಯಾವಾಗಲೂ ತನ್ನನ್ನನುಸರಿಸಿಯೇ ಇರಬೇಕಾದದ್ದರಿಂದ, ತಾನು ಒಂದು ಬಗೆಯಿಂದ ರಣಮಸ್ತಖಾನನ ಮೇಲೆ ಕಣ್ಣು ಇಟ್ಟಹಾಗಾಗುತ್ತದೆಂದು ರಾಮರಾಜನು ತಿಳಿದನು. ಇವೆಲ್ಲ ವಿಚಾರಗಳು ಮೊದಲನೆಯ ದಿವಸದ ರಾತ್ರಿಯಲ್ಲಿಯೇ ರಾಮರಾಜನ ಮನಸ್ಸಿನಲ್ಲಿ ಬಂದುಹೋದವು.
ಇವೆಲ್ಲ ವಿಚಾರಗಳು ಬಂದುಹೋದ ಮೇಲೆ ಆಕಸ್ಮಿಕವಾಗಿ ಒಂದು ವಿಚಾರವು ರಾಮರಾಜನ ಮನಸ್ಸಿನಲ್ಲಿ ಉತ್ಪನ್ನವಾಯಿತು. ತಾನು ಕುಂಜವನಕ್ಕೆ ಹೋಗಿ ಮೆಹರ್ಜಾನಳನ್ನು ಕಾಣಬೇಕೆಂಬ ಇಚ್ಛೆಯು ಆತನಲ್ಲಿ ಉತ್ಪನ್ನವಾಯಿತು. ರಣಮಸ್ತಖಾನನ ರೂಪವು ತನ್ನ ರೂಪವನ್ನು ಅಚ್ಚಳಿಯದೆ ಹೋಲುತ್ತಿರುವದನ್ನು ನೋಡಿ, ಈತನು ತನ್ನ ಮಗನಾಗಿರಬಹುದೆಂಬ ಸಂಶಯವು ರಾಮರಾಜನ ಮನಸ್ಸಿನಲ್ಲಿ ಉತ್ಪನ್ನವಾಗಿತ್ತು. ಈ ಸಂಶಯದಿಂದ ರಾಮರಾಜನು ಒಮ್ಮೆ ಕುಂಜವನಕ್ಕೆ ಹೋಗಿರುವಾಗ ಪ್ರತ್ಯಕ್ಷ ಮೆಹರ್ಜಾನಳೇ ಸುಳಿದಾಡಿದ ಹಾಗಾದದ್ದನ್ನು