ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜರಾಜನ ಹೊಸವಿಚಾರ
೨೦೯

ಅಂತಃಕರಣವು ವಾತ್ಸಲ್ಯ ಪೂರ್ಣವಾದಂತೆ, ಬೇರೆ ಯಾವ ಕಾಲದಲ್ಲಿಯೂ ಆಗಿದ್ದಿಲ್ಲ, ರಾಮರಾಜನು ರಣಮಸ್ತಖಾನನನ್ನು ಬಿಗಯಾಗಿ ಅಪ್ಪಿಕೊಳ್ಳಬೇಕೆಂದು ಮಾಡಿದನು. ಆತನು ವಾತ್ಸಲ್ಯಪೂರ್ಣ ದೃಷ್ಟಿಗಳಿಂದ ರಣಮಸ್ತಖಾನನನ್ನು ಎವೆಯಿಕ್ಕದೆ ನೋಡಹತ್ತಿದನು. ಇದನ್ನು ನೋಡಿ ರಣಮಸ್ತಖಾನನ ಮನಸ್ಸಿಗೆ ಹ್ಯಾಗೆ ಹ್ಯಾಗೋ ಆಯಿತು. ನಾನು ತನ್ನನ್ನು ಬಂದು ಕೂಡಿದ್ದರಿಂದಲೇ ರಾಮರಾಜನಿಗೆ ಇಷ್ಟು ಸಂತೋಷವಾಗಿರುವದೆಂದು ರಣಮಸ್ತಖಾನನು ತರ್ಕಿಸಿದನು. ಅದರ ಹೊರತು ಬೇರೆ ಕಾರಣವು ರಣಮಸ್ತಖಾನನಿಗೆ ತೋಚಲಿಲ್ಲ. ರಾಮರಾಜನು ಈಪರಿ ತನ್ನನ್ನು ಪ್ರೀತಿಸುವದನ್ನು ನೋಡಿ ರಣಮಸ್ತಖಾನನು ಬಹಳ ಸಂತೋಷಪಟ್ಟನು. ರಾಮರಾಜನು ತನ್ನನ್ನು ಪ್ರೀತಿಸಿದಷ್ಟು ಹಿತವೆಂದು ತಿಳಿದು ಆತನು ರಾಮರಾಜನನ್ನ ಕುರಿತು-ತಾವು ಈ ಪರಿ ನನ್ನನ್ನು ಪ್ರೀತಿಸುವದನ್ನು ನೋಡಿ ನನಗೆ ಆಗಾಗ್ಗೆ ಬಹು ಚಮತ್ಕಾರವಾಗುತ್ತದೆ ನಿಜವಾಗಿ ನೋಡಿದರೆ ತನ್ನ ಒಡೆಯನ ಮೇಲೆ ತಿರುಗಿಬಿದ್ದವ, ಶತ್ರುಪಕ್ಷದ ಚಾಕರಿಗೆ ನಿಂತವನ ಸಂಗಡ ಬಹು ಎಚ್ಚರದಿಂದ ನಡೆಯಬೇಕಾಗುವದು ; ಯಾಕೆಂದರೆ ತನ್ನ ಒಡೆಯನ ಮೇಲೆ ತಿರುಗಿಬಿದ್ದವ ಪ್ರಸಂಗದಲ್ಲಿ ತನ್ನ ಮೇಲೆಯೂ ಯಾಕೆ ತಿರುಗಿ ಬೀಳಲಿಕ್ಕಿಲ್ಲೆಂಬದನ್ನು ಆಲೋಚಿಸಬೇಕಾಗುವುದು; ಆದ್ದರಿಂದ ಅಂಥ ಪಿತೂರಿಯ ಮನುಷ್ಯನನ್ನು ಹೇಳಿ ಕೇಳಿ ನಾಲ್ಕು ಮೊಳ ದೂರದಲ್ಲಿಯೇ ಇಡಬೇಕಾಗುತ್ತದೆ. ಹೀಗಿದ್ದು ನೀವು ನನ್ನನ್ನು...... ಎಂದು ನುಡಿಯುತ್ತಿರಲು, ರಾಮರಾಜನು ನಡುವೆ ಬಾಯಿ ಹಾಕಿ ಛೇ, ಛೇ! ಖಾನಸಾಹೇಬ, ನೀವು ಇಂಥ ವಿಚಾರವನ್ನು ಮನಸ್ಸಿನಲಿ ತರಕೂಡದು. ನಾನಂತು ನಿಮ್ಮನ್ನು ನನ್ನ ಅಂಗರಕ್ಷರನ್ನಾಗಿ ನಿಯಮಿಸಬೇಕೆಂದು ಮಾಡಿದ್ದೇನೆ. ಅದು ತಮ್ಮ ಮನಸ್ಸಿಗೆ ಬಂದರೆ ಬಹಳ ನೆಟ್ಟಗಾಗುವದು ತಾವು ಯಾವಾಗಲೂ ನನ್ನ ಬಳಿಯಲ್ಲಿ ಬೇಕೆಂತಲೇ ನಾನು ಇಚ್ಚಿಸುವೆನು. ನೀವು ಒಪ್ಪಿಕೊಳ್ಳುವದೊಂದೇ ತಡ, ನಮ್ಮ ಅಂಗರಕ್ಷಕರಾದಿರೆಂದು ತಿಳಿಯಿರಿ; ಅನ್ನಲು, ರಣಮಸ್ತಖಾನನು-ಸರಿ ಸರಿ ! ಇದೇನು ಕೇಳುವದು? ನಾನು ತಮ್ಮ ನೌಕರನಿರಲು, ತಮ್ಮ ಅಪ್ಪಣೆಗೆ ಹೊರಗಾಗುವೆನೆ? ತಾವು ಒಪ್ಪಿಸಿದ ಕೆಲಸವನ್ನು ಮಾಡಲಿಕ್ಕೆ ನಾನು ಸಿದ್ಧನಿದ್ದೇನೆ. ತಮ್ಮ ಅಪ್ಪಣೆಯಂತೆ ನಾನು ನಡಕೊಳ್ಳತಕ್ಕವನು. ನಾನು ತಮ್ಮವನು, ಅಂದಬಳಿಕ ಹೆಚ್ಚಿಗೆ ನಾನೇನು ಹೇಳಲಿ? ಎಂದು ಕೇಳಿದನು. ಅದಕ್ಕೆ ರಾಮರಾಜನು-ಛೇ, ಛೇ, ಛೇ! ನನ್ನ ನೌಕರನೆಂದು ಯಾಕೆ ಅನ್ನುತೀರಿ; ನೀವು ನನ್ನ ನೌಕರರಲ್ಲ, ತರುಣಮಿತ್ರರಿರುತ್ತೀರಿ. ಲೋಕೋಪಚಾರಾರ್ಥವಾಗಿ ನಿಮ್ಮ ಹೆಸರನ್ನು ಯಾವದಾದರೂ ಅಧಿಕಾರದಲ್ಲಿ ಯೋಜಿಸಬೇಕಾಗಿರುವದು;