೨೩ನೆಯ ಪ್ರಕರಣ
ಆತ್ಮಹತ್ಯೋಪಕ್ರಮ
ರಣಮಸ್ತಖಾನನು ತನ್ನನ್ನು ಬಂದು ಕೂಡಿದ್ದರೂ ಆತನ ತಾಯಿಯು ಆತನ ಮನಸ್ಸನ್ನು ಎಲ್ಲಿ ತಿರುಗಿಸುವಳೋ ಎಂಬ ಭಯವು ರಾಮರಾಜನ ಮನಸ್ಸಿನೊಳಗಿಂದ ಹೋಗಿದ್ದಿಲ್ಲ. ಮೆಹರ್ಜಾನಳು ತಾನು ಸ್ವತಃ ಆ ಕೆಲಸವನ್ನು ಮಾಡಲಿಕ್ಕೆ ಪ್ರವೃತ್ತಳಾಗದಿದ್ದರೂ, ತನ್ನ ವೃದ್ದದಾಸಿಯಾದ ಮಾರ್ಜೀನೆಯ ಮುಖಾಂತರ ಆ ಕಾರ್ಯವನ್ನು ಆಕೆಯು ಮಾಡಿಸಬಹುದೆಂದು ಆತನು ತರ್ಕಿಸಿದ್ದನು. ಮೆಹರ್ಜಾನಳು ಈ ಕಾರ್ಯಕ್ಕೆ ಉಪಕ್ರಮಿಸುವ ಮೊದಲೇ ತಾನು ಒಮ್ಮೆ ಕುಂಜವನಕ್ಕೆ ಹೋಗಿ ಮೆಹರ್ಜಾನಳನ್ನು ಒಲಿಸಿಕೊಳ್ಳಬೇಕೆಂದು ಆತನು ನಿಶ್ಚಯಿಸಿದನು. ತಾನು ವೇಷಾಂತರದಿಂದ ಇಂದಿನ ರಾತ್ರಿಯೇ ಕುಂಜವನಕ್ಕೆ ಹೋಗಿ, ರಣಮಸ್ತಖಾನನು ನನ್ನನ್ನು ಮಾಸಾಹೇಬರ ಕಡೆಗೆ ಕಳಿಸಿರುವದರಿಂದ, ನನಗೆ ಅವರ ದರ್ಶನ ಮಾಡಿಸಿರೆಂದು ಕಾವಲುಗಾರರಿಗೆ ಹೇಳಿ ತನ್ನ ಕಾರ್ಯವನ್ನು ಸಾಧಿಸಬೇಕೆಂದು ಆ ರಾಯನು ಯೋಚಿಸಿದನು. ಮಗನು ಏನೋ ಹೇಳಿಕಳಿಸಿರುವನೆಂದು ತಿಳಿದು ಮೋಹದಿಂದ ಮೆಹರ್ಜಾನಳು ನನ್ನನ್ನು ಕಂಡೇ ಕಾಣುವಳು. ಈ ಹಂಚಿಕೆಯಿಂದ ಆಕೆಯ ಬಳಿಗೆ ಹೋಗಿ, ಬಹು ಗುಪ್ತ ಸುದ್ದಿಯೆಂಬ ನೆವದಿಂದ ಏಕಾಂತದ ಪ್ರಸಂಗವನ್ನು ಒದಗಿಸಿಕೊಂಡು, ಆ ಮೇಲೆ ಮೆಹರ್ಜಾನಳಿಗೆ ತನ್ನ ಗುರುತು ಮಾಡಿಕೊಡಬೇಕೆಂದು ಎಣಿಕೆ ಹಾಕಿದನು. ಮೋಹಾಂಧನೂ, ವಿವೇಕಭ್ರಷ್ಟನೂ ಆದ ರಾಮರಾಜನು ಹೀಗೆ ಯೋಚಿಸಿ ತನ್ನ ನಿತ್ಯ ಕೃತ್ಯಗಳನ್ನು ಮಾಡುವದಕ್ಕಾಗಿ ಏಳುತ್ತಿರಲು, ದ್ವಾರರಕ್ಷಕನು ಬಂದು ಒಬ್ಬಗುಪ್ತಚಾರನು ತಮ್ಮನ್ನು ಕಾಣಲಿಕ್ಕೆ ಬಂದಿದ್ದಾನೆ ಆತನು “ಕೃಪಾ” ಎಂಬದು ಗುರುತಿನ ಶಬ್ದವಿರುತ್ತದೆಂದು ಸೂಚಿಸಲು ಹೇಳಿರುವನು, ಎಂದು ನುಡಿದನು. “ಕೃಪಾ” ಎಂಬ ಶಬ್ದವು ಕಿವಿಗೆ ಬಿದ್ದ ಕೂಡಲೆ ರಾಮರಾಜನು ಕ್ಷಣವಾದರೂ ವಿಳಂಬಮಾಡದೆ ಆ ಚಾರನನ್ನು ಕರೆಸಿಕೊಂಡು, ಏಕಾಂತದಲ್ಲಿ ಅತನನ್ನು ಕುರಿತು “ಏನು ಸುದ್ದಿಯನ್ನು ತಿಂದಿರುವೆ, ಬೇಗನೆ ಹೇಳು” ಎಂದು ಕೇಳಲು ಚಾರನು