ಪುಟ:Kannadigara Karma Kathe.pdf/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆತ್ಮಹತ್ಯೋಪಕ್ರಮ

೨೧೩

“ರಣಮಸ್ತಖಾನನು ಎಲ್ಲಿ ಇರುವನೆಂಬದವರು ಶೋಧ ಮಾಡುತ್ತ ಒಬ್ಬ ಮುಸಲ್ಮಾನ ಮುದುಕಿಯೂ, ಆಕೆಯ ಸಂಗಡ ಒಬ್ಬ ಮುಸಲ್ಮಾನ ಸೇವಕನೂ ಬಂದಿದ್ದಾರೆ. ಸದ್ಯಕ್ಕೆ ಅವರು ಊರ ಹೊರಗಿನ ಧರ್ಮಶಾಲೆಯಲ್ಲಿ ಇರುವರು” ಎಂದು ಹೇಳಿದನು. ಅದನ್ನು ಕೇಳಿದ ಕೂಡಲೆ ರಾಮರಾಜನು ಆ ಮುದುಕಿಯ ಲಕ್ಷಣವನ್ನು ಕೇಳಿಕೊಂಡು ಮಾರ್ಜೀನೆಯೇ ಬಂದಿರುವಳೆಂದು ತಿಳಿದು, ಆ ಚಾರನಿಗೆ- “ನೀನು ಇದೇ ಕಾಲಿನಲ್ಲಿ ತಿರುಗಿ ಹೋಗು. ಅವರಿಬ್ಬರನ್ನು ಇನ್ನು ಎರಡು ದಿನ ಧರ್ಮಶಾಲೆಯ ಹೊರಗೆ ಬಿಡಬೇಡೆಂದು ನಾನು ಹೇಳಿರುತ್ತೇನೆಂದು ಸುಬ್ರಹ್ಮಣ್ಯನಿಗೆ ತಿಳಿಸು; ಆತನು ಹಾಗೆ ಮಾಡಲಿಕ್ಕೆ ಒಂದು ಪಕ್ಷದಲ್ಲಿ ಹಿಂದುಮುಂದು ನೋಡಿದರೆ ಆತನಿಗೆ ಈ ಉಂಗರವನ್ನು ತೋರಿಸು. ಉಂಗುರವನ್ನು ಆತನಿಗೆ ಕೊಡಬೇಡ, ತಿರುಗಿ ತಕ್ಕೊಂಡುಬಾ, ಉಂಗುರವನ್ನು ನೋಡಿದ ಕೂಡಲೆ ಆತನು ಎಲ್ಲ ವ್ಯವಸ್ಥೆಯನ್ನು ಮಾಡುವನು, ನಿನಗೆ ಅವರ ಚಿಂತೆ ಬೇಡ, ನಡೆ ನಡೆ” ಎಂದು ಹೇಳಿ ಆತನನ್ನು ಕಳಸಿಕೊಟ್ಟನು. ಚಾರನು ಅತ್ತ ಹೋದ ಕೂಡಲೆ ರಾಮರಾಜನು ತನ್ನ ಮನಸ್ಸಿನಲ್ಲಿ- “ಒಟ್ಟಗೆ ನನ್ನದೊಂದು ತರ್ಕವು ನಿಜವಾದಂತಾಯಿತು. ಆಕೆಯು ಮಾರ್ಜೀನೆಯೇ ನಿಶ್ಚಯವು. ರಣಮಸ್ತಖಾನನಿಗೆ ಎಲ್ಲ ಸುದ್ದಿಯನ್ನು ಹೇಳುವದಕ್ಕಾಗಿ ತನ್ನೊಡೆಯಳ ಕಡೆಯಿಂದ ಬಂದಿರುವಳು. ಆಕೆಗೂ ರಣಮಸ್ತಖಾನನಿಗೂ ಭೆಟ್ಟಿಯಾಗದಂತೆ ವ್ಯವಸ್ಥೆಯನ್ನು ಮಾಡಿರುವೆನು. ಇನ್ನು ಇಂದೇ ರಾತ್ರಿ ನಾನು ಕುಂಜವನಕ್ಕೆ ಹೋಗಲೇಬೇಕು” ಎಂದು ಯೋಚಿಸಿ, ರಾತ್ರಿಯು ಯಾವಾಗ ಆದೀತೆಂದು ಆತನು ಉತ್ಸುಕತೆಯಿಂದ ಹಾದಿಯ ನೋಡಹತ್ತಿದನು. ಮೂವತ್ತು ವರ್ಷಗಳ ಹಿಂದೆ ಕುಂಜವನಕ್ಕೆ ರಾತ್ರಿಯಲ್ಲಿ ಹೋಗುವಾಗಿನ ಉತ್ಸುಕತೆಯ ಸ್ಮರಣವು ಈಗ ಆತನಿಗೆ ಆಯಿತು; ಆದರೆ ಆಗಿನ ಔತ್ಸುಕ್ಯದ ಕಾರಣವೂ, ಈಗಿನ ಔತ್ಸುಕ್ಯದ ಕಾರಣವೂ ಭಿನ್ನವಾಗಿದ್ದವೆಂಬದು ಸ್ಪಷ್ಟವು ಮೆಹೆರಜಾನಳನ್ನು ಕಂಡು ತನ್ನ ಅಪರಾಧವನ್ನು ಕ್ಷಮಿಸುವದಕ್ಕಾಗಿ ಆಕೆಯನ್ನು ಪ್ರಾರ್ಥಿಸಬೇಕೆಂದು ರಾಮರಾಜನು ನಿಶ್ಚಯಿಸಿದನು. ರಾತ್ರಿಯಾದ ಕೂಡಲೆ ಆತನು ಹಿಂದಿನಂತೆಯೇ ಸಂಗಡ ಯಾರನ್ನೂ ಕರಕೊಳ್ಳದೆ ಕುಂಜವನಕ್ಕೆ ಒಬ್ಬನೇ ಹೊರಟನು.

ಕುಂಜವನದ ಬಾಗಿಲ ಸನಿಯಕ್ಕೆ ಬರಲು, ಇಷ್ಟು ರಾತ್ರಿಯಲ್ಲಿ ತನ್ನನ್ನು ಕುಂಜವನದೊಳಗೆ ಬಿಡಲಿಕ್ಕಿಲ್ಲೆಂಬ ಶಂಕೆಯು ರಾಮರಾಜನಿಗೆ ಉತ್ಪನ್ನವಾಯಿತು. ಆದರೆ ಇಷ್ಟು ದೂರ ಬಂದು ಹಿಂದಿರುಗಿ ಹೋಗುವದು ನೆಟ್ಟಗಲ್ಲೆಂದು ತಿಳಿದು ವೇಷಾಂತರಿಸಿದ್ದ ಆತನು ಆದದ್ದಾಗಲೆಂದು ದ್ವಾರರಕ್ಷನನ್ನು ಕೂಗಿ ಕೂಗಿ