ಪುಟ:Kannadigara Karma Kathe.pdf/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆತ್ಮಹತ್ಯೋಪಕ್ರಮ

೨೧೭

ಸುದ್ದಿಯೂ ಬೇಡ” ಎಂದು ಆಕೆಯು ನಿರಾಕರಿಸಬಹುದಾಗಿತ್ತು. ಅಂದಬಳಿಕ ಈಕೆಯು ಇಲ್ಲಿಗೆ ಈಗ ಯಾಕೆ ಬಂದಿರಬಹುದು ? ಎಂಬ ವಿಚಾರದಲ್ಲಿ ರಾಮರಾಜನು ಮಗ್ನನಾಗಿದ್ದರೂ, ಆತನು ಆ ಶುಭಮೂರ್ತಿಯನ್ನು ಎವೆಯಿಕ್ಕದೆ ನೋಡುತ್ತಿದ್ದನು. ಇಷ್ಟು ರಾತ್ರಿಯಲ್ಲಿ ಈಕೆಯು ಇಲ್ಲಿಗೆ ಬಂದು ಏನು ಮಾಡುತ್ತಾಳೆಂಬದನ್ನು ನೋಡಿ, ಆಮೇಲೆ ಈಕೆಯ ಎದುರಿಗೆ ನಿಂತುಕೊಂಡು ತನ್ನ ಸಂಶಯವನ್ನು ದೂರಮಾಡಿಕೊಳ್ಳತಕ್ಕದ್ದು, ಎಂದು ಯೋಚಿಸಿದನು. ಇತ್ತ ಆ ಶ್ವೇತಮೂರ್ತಿಯು, ಅಥವಾ ಮಾಸಾಹೇಬರು ಪುಷ್ಕರಣಿಯ ತೀರದಲ್ಲಿ ನಿಂತು ತಟಸ್ಥವೃತ್ತಿಯಿಂದ ಜಲ ರಾಶಿಯನ್ನು ನೋಡತೊಡಗಿದರು. ಆ ಕಾಲದಲ್ಲಿ ಮಾಸಾಹೇಬರಿಗೆ ಅವರ ಆಯುಷ್ಯದೊಳಗಿನ ಇತಿಹಾಸವೆಲ್ಲ ನೆನಪಾಯಿತು. ತಾವು ಹಿಂದಕ್ಕೆ ರಾಮರಾಜನೊಡನೆ ನೌಕೆಯಲ್ಲಿ ಕುಳಿತು ದಂಡೆಯ ಕಡೆಗೆ ಬರುತ್ತಿವಾಗ ಆತನನ್ನು ಕುರಿತು- “ನಾನೂ ನೀವೂ ಒಮ್ಮೆಲೆ ಈ ಪುಷ್ಕರಣಿ ಮುಳುಗಿಹೋದರೆ ಎಷ್ಟು ನೆಟ್ಟಗಾದೀತಲ್ಲ” ಎಂದು ನುಡಿದದ್ದು ಈಗ ಅವರಿಗೆ ನೆನಪಾಯಿತು. ಮಹೆರಜಾನಳ ಆಯುಷ್ಯದಲ್ಲಿ ಸುಖದ ಪ್ರಸಂಗಗಳು ಮಿಂಚಿನಂತೆ ಹೊಳೆದು ಹೋಗಿ, ದುಃಖದ ಪ್ರಸಂಗಗಳಲ್ಲಿ ಈಗ ಬಹು ದಿವಸಗಳಿಂದ ಆಕೆಯು ಮುಳುಗಿಹೋದಂತೆ ಆಗಿತ್ತು, ಮಗನ ಕೈಯಿಂದ ರಾಮರಾಜನ ಸೇಡು ತೀರಿಸಿಕೊಳ್ಳಬೇಕೆಂದು ಆಕೆಯು ಹವಣಿಸುತ್ತಿರಲು, ಈಗ ಮಗನು ರಾಮರಾಜನನ್ನೇ ಕೂಡಿಬಿಟ್ಟಿದ್ದರಿಂದ ಆಕೆಗೆ ಜೀವನವು ಬೇಡಾಯಿತು. ಇನ್ನು ಹೋದಲ್ಲಿ ತನ್ನ ಅಪ್ರತಿಷ್ಠೆಯಾಗುವದೆಂದು ಆಕೆಯು ಭಾವಿಸಿದ್ದಳು. ಪುಷ್ಕರಣಿಯಲ್ಲಿ ಹಾರಿಕೊಂಡು ಪ್ರಾಣ ಕೊಡುವದೊಂದೆ ಉಪಾಯವು ಆಕೆಯು ಕೈಯೊಳಗಿದ್ದಂತೆಯಿತ್ತು. ಆ ಉಪಾಯದಿಂದ ತನ್ನ ದುಃಖವಿಮೋಚನೆ ಮಾಡಿಕೊಳ್ಳಬೇಕೆಂದು ಆಕೆಯು ಪುಷ್ಕರಣಿಗೆ ಬಂದಿದ್ದಳು. ತನ್ನ ಈ ಘೋರ ಕಾರ್ಯಕ್ಕೆ ವಿಘ್ನ ಒದಗುವದೆಂದು ತಿಳಿದು, ಆಕೆಯು ತನ್ನ ದಾಸಿಯಾದ ಮಾರ್ಜೀನೆಯನ್ನು ರಣಮಸ್ತಖಾನನ ಕಡೆಗೆ ಕಳಿಸಿಕೊಟ್ಟಿದ್ದಳು. ಈಗ ಮೆಹೆರಜಾನಳ ಪ್ರಾಣ ವಿಘಾತಕ ಕಾರ್ಯಕ್ಕೆ ವಿಘ್ನ ಮಾಡುವವರು ಯಾರೂ ಇದ್ದಿಲ್ಲ. ಆಕೆಯು ತನ್ನ ಅಂಗವಸ್ತ್ರವನ್ನು ಸಾವರಿಸಿಕೊಂಡು ಪರಮೇಶ್ವರನ ಜಪ ಮಾಡಹತ್ತಿದಳು. ಆಮೇಲೆ ಮುಸಲ್ಮಾನ ಧರ್ಮದ ಪದ್ಧತಿಯಂತೆ ನಮಾಜು ಮಾಡಹತ್ತಿದಳು. ಇದನ್ನೆಲ್ಲ ನೋಡುತ್ತ ರಾಮರಾಜನು ಸ್ತಬ್ಧವಾಗಿ ಮರೆಗೆ ನಿಂತುಕೊಂಡಿದ್ದನು. ಈ ಪ್ರಸಂಗದಲ್ಲಿ ತಾನು ಒಮ್ಮೆಲೆ ಮುಂದಕ್ಕೆ ಹೋಗಿ “ಪ್ರಿಯ ಮೆಹೆರಜಾನ” ಎಂದು ಸಂಬೋಧಿಸಿ, ಆಕೆಯನ್ನು ಅಪ್ಪಿಕೊಳ್ಳಬೇಕೆಂದು