ಪುಟ:Kannadigara Karma Kathe.pdf/೨೩೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೨೧೮
ಕನ್ನಡಿಗರ ಕರ್ಮಕಥೆ
 

ಆತನು ಎಷ್ಟೋ ಸಾರೆ ಯತ್ನಿಸಿದನು; ಆದರೆ ಆತನ ಕಾಲುಗಳೇ ಏಳಲಿಲ್ಲ ! ಎಷ್ಟೋ ಸಾಹಸದ ಕಾರ್ಯಗಳನ್ನು ಮಾಡಿದ ರಾಮರಾಜನಿಗೆ, ಇಷ್ಟು ಕೆಲಸ ಮಾಡುವ ಧೈರ್ಯವು ಮಾತ್ರ ಆಗಲಿಲ್ಲ. ಈಗ ಅಪ್ಪಿಕೊಳ್ಳೋಣ. ಇನ್ನೊಂದು ಕ್ಷಣದ ಮೇಲೆ ಅಪ್ಪಿಕೊಳ್ಳೋಣ, ಎಂದು ಹಾದಿಯನ್ನು ನೋಡುತ್ತ ನಿಂತುಕೊಂಡಿದ್ದನು. ಈಕೆಯ ಈ ನಮಾಜು ಆತ್ಮಹತ್ಯೆಯ ಪೂರ್ವಚಿಹ್ನವೆಂಬುದು ರಾಮರಾಜನಿಗೆ ಗೊತ್ತಾಗಲಿಲ್ಲ. ಆಕೆಯ ಮುಖಚರ್ಯವೂ ಆತನಿಗೆ ಕಾಣುತ್ತಿದ್ದಿಲ್ಲ. ಕೇವಲ ಮನೋಮಯ ಸಾಕ್ಷಿಯಿಂದಲೇ ಈಕೆಯು ಮೆಹೆರಜಾನಳೆಂದು ಆತನು ತಿಳಕೊಂಡಿದ್ದನು; ಮತ್ತು ಆಕೆಯ ಕಡೆಗೆ ನೋಡುತ್ತ ಆತನು ಈಗ ಮುಂದಕ್ಕೆ ಹೋಗಲೇನು, ಇನ್ನಿಷ್ಟು ನಿಂತು ಮುಂದಕ್ಕೆ ಹೋಗಲೇನು, ಎಂದು ವಿಚಾರಿಸುತ್ತಿದ್ದು; ಆದರೆ ಒಂದು ಹೆಜ್ಜೆಯನ್ನಾದರೂ ಇಡುವದು ಆತನಿಂದಾಗಲಿಲ್ಲ.

ಇತ್ತ ಮಾಸಾಹೇಬರು ನಮಾಜು ಮಾಡಿದ ಮೇಲೆ ಒಮ್ಮೆಲೆ ಅವರ ಮನಸಿಗೆ ಒಂದು ಪ್ರಕಾರದ ಕ್ರಾಂತಿಯು ಉತ್ಪನ್ನವಾಯಿತು. ಪುಷ್ಕರಣಿಯಲ್ಲಿ ಹಾರಿಕೊಂಡು ಪ್ರಾಣವನ್ನರ್ಪಿಸಬೇಕೆಂಬ ಅವರ ನಿಶ್ಚಯವೂ ಸ್ಥಿರವಾಯಿತು ಅವರು ತಮ್ಮ ಮೈಮೇಲಿನ ಚಾದರವನ್ನು ತೆಗೆದು ಒಗೆದರು. ಬಳಿಕ ತಮ್ಮ ಉಟ್ಟ ಸೀರೆಯನ್ನು ನೆಟ್ಟಗೆ ಮಾಡಿಕೊಂಡು- “ಅಲ್ಲಹೋವನ್ನು ಗಟ್ಟಿಯಾಗಿ ಮಾಡುತ್ತ, ಒಮ್ಮೆಲೆ ಅವರು ಪುಷ್ಕರಣಿಯಲ್ಲಿ ಹಾರಿಕೊಂಡರು. ಕೂಡಲೇ ರಾಮರಾಜನು ಅವರ ಬೆನ್ನ ಹಿಂದೆಯೇ ಹಾರಿಕೊಂಡನೆಂದು ಹೇಳಲವಶ್ಯವಿಲ್ಲ.


****