ಪುಟ:Kannadigara Karma Kathe.pdf/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨೪

ಕನ್ನಡಿಗರ ಕರ್ಮಕಥೆ

ಇಲ್ಲವೆ ಹೀಗೆ ಮಾಡಬಾರದು, ಎಂದು ಒಮ್ಮೆ ನಿರ್ಧಾರವಾದರೆ ತೀರಿತು. ಮುಂದೆ ಎಂಥ ಪ್ರಸಂಗಗಳು ಒದಗಿದರೂ ಅವರ ನಿಶ್ಚಯದಲ್ಲಿ ಅಂತರವಾಗಲಿಕ್ಕಿಲ್ಲ. ಅವರು ಸುರಕ್ಷಿತವಾಗಿರುವರೆಂಬ ಸುದ್ದಿಯಷ್ಟು ಈಗ ನನಗೆ ತಿಳಿದರೆ ಸಾಕು, ಅವರು ಆತ್ಮಹತ್ಯೆ ಮಾಡಿಕೊಂಡಿದ್ದರೂ, ಒಂದು ವಿಧದಿಂದ ನೆಟ್ಟಗಾಯಿತೆಂತಲೇ ನಾನು ತಿಳಿಯುವೆನು ! ಯಾಕೆಂದರೆ, ನನ್ನ ಕೈಯಿಂದ ಇನ್ನು ಏನಾದರೂ ಅನನ್ವಿತ ಕೃತ್ಯಗಳೂ ಘಟಿಸಬೇಕಾಗಿದ್ದರೆ, ಅವನ್ನು ನೋಡುವ ಪ್ರಸಂಗವಾದರೂ ಅವರಿಗೆ ತಪ್ಪಿತು.

ರಾಮರಾಜ- (ಚಮತ್ಕಾರದ ಧ್ವನಿಯಿಂದ) ಅವರು ಇಷ್ಟು ದೃಢನಿಶ್ಚಯದ ಸ್ವಭಾವದವರಿರುತ್ತಾರೆಯೆ ? ಅವರು ತಿರುಗಿ ಮುಖಾವಲೋಕನವನ್ನು ಸಹ ಮಾಡಲಿಕ್ಕಿಲ್ಲೆನ್ನುತ್ತೀರಾ ?

ರಣಮಸ್ತಖಾನ್-ಇಲ್ಲ, ಅವರು ತಿರುಗಿ ನನ್ನ ಮುಖಾವಲೋಕನವನ್ನು ಸಹ ಮಾಡಲಿಕ್ಕಿಲ್ಲ. ನಾನು ತಮ್ಮ ಪಾಲಿಗೆ ಸತ್ತಿರುವೆನೆಂತಲೇ ಅವರು ತಿಳಕೊಂಡಿರುವರು. ತಮಗೆ ಅವರ ಸ್ವಭಾವದ ಪರಿಚಯವಿಲ್ಲ, ಅವರು ಬಹಳ ಕ್ರಿಯಾವಂತರು; ಬಹು ನಿಸ್ಪೃಹಿಗಳು; ಅವರ ಸ್ವಭಾವವು ಪ್ರೇಮವಿದ್ದಷ್ಟೇ ಕಠೋರವು ಆಗಿರುವದು. ಪ್ರೇಮಮಾಡುವ ಪ್ರಸಂಗದಲ್ಲಿ ಅವರು ಅತ್ಯಂತ ಪ್ರೇಮ ಮಾಡುವರು; ಪ್ರೇಮದ ಭರದಲ್ಲಿ ಅವರು ತಮ್ಮ ಜೀವದ ಹಂಗು ಸಹ ತೊರೆಯುವರು; ಆದರೆ ಯಾವದೊಂದು ಕಾರಣದಿಂದ ಅವರು ಒಬ್ಬರನ್ನು ದ್ವೇಷಿಸಹತ್ತಿದರೆಂದರೆ, ತಿರುಗಿ ಅವರ ಮುಖಾವಲೋಕನವನ್ನು ಸಹ ಮಾಡಲಿಕ್ಕಿಲ್ಲ. ನನ್ನ ಮನಸ್ಸಿನೊಳಗಿನ ವಿಚಾರಗಳು ಅನ್ಯರಿಗೆ ಗೊತ್ತಾಗವು ಮಹಾರಾಜ, ನನ್ನ ತಾಯಿಯೆಂದರೆ ನನ್ನ ಸರ್ವಸ್ವವು; ನನ್ನ ತಾಯಿಯು ನನ್ನ ಪಂಚಪ್ರಾಣವು. ನನ್ನ ತಾಯಿಯು ನನ್ನನ್ನು ಸಂರಕ್ಷಿಸುವಾಗ ಮಣ್ಣಿಗೆ ಮಣ್ಣು ಕೂಡಿದಳು. ಅಂಥವಳ ದ್ರೋಹವನ್ನು ಬಗೆದು ನಾನು ನಿಮ್ಮನ್ನು ಕೂಡಿಕೊಂಡೆನು.

ಮುಂದೆ ಆತನಿಂದ ಮಾತಾಡುವದಾಗಲೊಲ್ಲದು, ಆತನು ಸುಮ್ಮನೆ ಕುಳಿತುಕೊಂಡನು. ಆಮೇಲೆ ಮತ್ತೆ ಅವರು ರಾಮರಾಜನನ್ನು ಕುರಿತು-ಸರಕಾರ್-ಇನ್ನು ಹೇಳುವದೇನು ! ನೀವು ವಿಚಾರಮಾಡಿರಿ, ನನ್ನನ್ನು ವಿಜಾಪುರಕ್ಕೆ ಕಳಿಸುವದಾದರೆ ಕಳಿಸಿಬಿಡಿರಿ. ನೀವು ನನಗೆ ಆಶ್ರಯಕೊಟ್ಟು ಇಡಿಯ ರಾಜ್ಯದ ಮೇಲೆ ಸಂಕಟವನ್ನಾದರೂ ಯಾಕೆ ತಂದುಕೊಳ್ಳುತ್ತೀರಿ ! ಸರ್ವಥಾ ತಂದುಕೊಳ್ಳಬೇಡಿರಿ, ನನ್ನಿಂದ ನಿಮಗೆ ಅಷ್ಟು ಪ್ರಯೋಜನವಾಗದು. ಯಾರಿಗೆ ಗೊತ್ತು, ಮುಂದೆ ಎಲ್ಲಿಯಾದರೂ ನನ್ನ ಪ್ರಾಮಾಣಿಕತನದ ಬಗ್ಗೆ ನಿಮಗೆ