ಆಕೆಯು ನನ್ನನ್ನು ಪ್ರೀತಿಯಿಂದ ರಕ್ಷಿಸುತ್ತಾಳೆ. ಅಂಥವಳು ಇಂದು ನನ್ನನ್ನು ಅಗಲಿದಳು. ಪರವರದಿಗಾರ, ಎಂಥ ಪ್ರಸಂಗವನ್ನು ನನ್ನ ಮೇಲೆ ತಂದೆಯಲ್ಲ! ನಾವು ಯಾವ ಕೆಲಸಕ್ಕೆ ಹೋಗುತ್ತಿದ್ದೆವು, ಇದೇನು ಗತಿ...............
ಈ ಮೇರೆಗೆ ನುಡಿದು ಆ ತರುಣಿಯು ಒಂದೇ ಸಮನೆ ಕಣ್ಣೀರು ಸುರಿಸ ಹತ್ತಿದಳು. ರಾಮರಾಜನು ಆಕೆಯನ್ನು ಸಮಾಧಾನಗೊಳಿಸಹತ್ತಿದನು. ಆತನು ತರುಣಿಗೆ-ಇನ್ನು ನೀವು ಹೀಗೆ ಅಳುತ್ತ ಕುಳಿತುಕೊಂಡರೆ ಆಗುವದೇನು? ನಾನು ನಿಮ್ಮವರನ್ನು ಹುಡುಕಿಸಿ ಕರಕೊಂಡು ಬರುವೆನು. ನಿಮ್ಮ ಮಾರ್ಜೀನೆಯೋ ಯಾರು, ಆಕೆಯನ್ನಂತು ಎಲ್ಲಿದ್ದರೂ ಹುಡುಕಿಸುವೆನು. ಈಗ ನೀವು ಮೋರೆ ತೊಳಕೊಂಡು ಊಟ ಮಾಡಿ ಸ್ವಸ್ಥ ಮಲಗಿಕೊಳ್ಳಬೇಕು. ನಾಳೆ ಬೆಳಗಾದ ಬಳಿಕ ನಿಮ್ಮ ಮಾರ್ಜೀನೆಯ ಶೋಧದ ಕೆಲಸವನ್ನು ಮೊದಲು ಮಾಡುವೆನು; ಆದರೆ ತಾವು ನನ್ನ ಮನಸ್ಸಿನ ಒಲವನ್ನನುಸರಿಸಿ ನಡೆಯಲು ನಿರ್ಧರಿಸಿ ನನ್ನ ಮನಸ್ಸನ್ನು ಸಮಾಧಾನ ಗೊಳಿಸಲೇಬೇಕು.
ಹೀಗೆ ನುಡಿದು ರಾಮರಾಜನು ಆ ತರುಣಿಯ ಕಡೆಗೆ ಆತುರದಿಂದ ನೋಡುತ್ತಿರಲು, ಆ ತರುಣಿಯು ನೆಲವನ್ನು ನೋಡುತ್ತ ಏನೋ ವಿಚಾರ ಮಾಡುತ್ತಿದ್ದಳು. ಆಕೆಯು ಸರ್ವಸಾಧಾರಣ ಮನುಷ್ಯಳಿದ್ದಿಲ್ಲ. ದೊಡ್ಡ ಸರದಾರನ ಮಗಳಿದ್ದಳು. ಒತ್ತಟ್ಟಿಗೆ ಕೃತಜ್ಞತೆ, ಮತ್ತೊತ್ತಟ್ಟಿಗೆ ಪ್ರೇಮ, ಇನ್ನೊತ್ತಟ್ಟಿಗೆ ಕುಲೀನತೆ ಈ ಮೂರರ ಜಗ್ಗಾಟದಲ್ಲಿ ಆಕೆಯು ಗಾಸಿಯಾಗ ಹತ್ತಿದಳು. ಜೀವದ ಹಂಗು ಇಲ್ಲದೆ ತನ್ನನ್ನು ಹುಲಿಯ ಬಾಯೊಳಗಿಂದ ಬಿಡಿಸಿದ ಕೃತಜ್ಞತೆಗೆ, ರಾಮರಾಜನ ಸೌಜನ್ಯ ಸುಂದರರೂಪ-ಶೌರ-ಸಾಹಸಗಳೂ ಜೋಡಾಗಲು, ತಾರುಣ್ಯದ ಸ್ವಾಭಾವಿಕ ಧರ್ಮಕ್ಕನುಸರಿಸಿ ಆ ಸುಂದರಿಯ ಹೃದಯದಲ್ಲಿ ಪ್ರೇಮೋದಯವಾಯಿತು. ಆ ಪ್ರೇಮಕ್ಕೆ ರಾಮರಾಜನ ಸವಿಮಾತುಗಳಿಂದ ಕಳೆಯೇರಿ ಆ ತರುಣಿಯು ರಾಮರಾಜನ ಕೈಸೇರಬೇಕೆನ್ನುವುದರೊಳಗೆ ಕುಲೀನತೆಯು ಆಕೆಯನ್ನು ಹಿಂದಕ್ಕೆ ಜಗ್ಗುತ್ತಿತ್ತು ! ಮುಸುಲ್ಮಾನರೂ ಹಿಂದೂ ಜನರನ್ನು ಬಹಳವಾಗಿ ನಿಂದಿಸಿ, ಅವರನ್ನು ಕಾಫರರೆಂದು ಕರೆಯುತ್ತಿರಲು, ಇಂಥ ಹಿಂದೂ ತರುಣನಿಗೆ ಕುಲೀನಳಾದ ತಾನು ತನ್ನ ದೇಹವನ್ನು ಅರ್ಪಿಸಿ ಅಪವಿತ್ರವಾಗಲಿಕ್ಕೆ ಆ ತರುಣಿಯು ಹಿಂಜರಿದರೆ ಆಶ್ಚರ್ಯವಲ್ಲ. ಆಕೆಯು ಈ ಮೂರರ ಎಳೆತದಿಂದ ಗಾಸಿಯಾಗಿ ರಾಮರಾಜನನ್ನು ಕುರಿತು-ತರುಣವೀರರೇ, ಹಿಂದುಗಳೆನಿಸುವ ನೀವು ನನ್ನ ಸೌಂದರ್ಯಕ್ಕೆ ಮೋಹಿಸಿ, ನಿಮ್ಮ ಧರ್ಮ ವಿರುದ್ಧವಾಗಿ ನನ್ನ ಸಮಾಗಮವನ್ನು ಬಯಸುತ್ತಿರುವಿರಿ ! ಇದು ಸರಿಯಲ್ಲ.