ಪುಟ:Kannadigara Karma Kathe.pdf/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೩೦

ಕನ್ನಡಿಗರ ಕರ್ಮಕಥೆ

ಹಾಗೆ ಮಾಡದೆ ರಣಮಸ್ತನಿಗೆ ಆಶ್ರಯ ಕೊಟ್ಟಿರಿ; ಇದರ ಇಂಗಿತವೇನಿರಬಹುದೆಂಬದನ್ನು ನೀವೇ ವಿಚಾರಮಾಡತಕ್ಕದ್ದು ! ನಿಮ್ಮ ಉದ್ದೇಶವೇನೇ ಇರಲಿ, ನಮ್ಮ ನಿಮ್ಮ ಸ್ನೇಹ ಸಂಬಂಧಕ್ಕೆ ಲಕ್ಷ್ಮಗೊಟ್ಟು ನಮ್ಮ ಇಸಮನ್ನು ನಮಗೆ ಒಪ್ಪಿಸತಕ್ಕದ್ದು. ನೀವು ಹೀಗೆ ಮಾಡದಿದ್ದರೆ, ನಮ್ಮ ನಿಮ್ಮೊಳಗಾದ ಕರಾರು ನಿಮ್ಮ ಕೃತಿಯಿಂದ ಮುರಿದ ಹಾಗಾದವೆಂದು ತಿಳಿದು, ನಾವೇ ವಿಜಯನಗರದ ತನಕ ಬಂದು, ನಮ್ಮ ಇಸಮನ್ನು ಹಿಡಿಕೊಂಡು ಹೋಗಬೇಕಾಗುವದು. ಆತನನ್ನು ನಿಮ್ಮ ಆಶ್ರಯದಲ್ಲಿರಗೊಟ್ಟರೆ, ನಮ್ಮ ಗೌರವಕ್ಕಷ್ಟೇ ಅಲ್ಲ, ಬೇರೆ ಹಲವು ಸಂಗತಿಗಳ ಗೌರವಕ್ಕೆ ಬಾಧೆ ಬರುತ್ತದೆ. ಹಾಗೆ ಗೌರವಕ್ಕೆ ಬಾಧೆತರಲು ನಾವು ಇಚ್ಚಿಸುವದಿಲ್ಲ. ಆದ್ದರಿಂದ ಈ ಪತ್ರವು ಮುಟ್ಟಿದ ಒಂದು ವಾರದೊಳಗೆ ರಣಮಸ್ತನನ್ನು ನಮಗೆ ಒಪ್ಪಿಸಬೇಕು. ಒಪ್ಪಿಸದಿದ್ದರೆ ನಮ್ಮ ಮನಸ್ಸಿಗೆ ಬಂದಂತೆ ನಾವು ಮಾಡುವೆವು. ನಿಮ್ಮ ಇಷ್ಟವಿದ್ದಂತೆಯಂತೂ ನೀವು ಮಾಡೇಮಾಡುವಿರಿ.

ಈ ಮೇರೆಗೆ ಸ್ಪಷ್ಟವಾಗಿ ಬರೆದ ಪತ್ರವು ರಾಮರಾಜನ ಕೈಸೇರಿತು. ಅದನ್ನು ಓದಿ ರಾಮರಾಜನು ಗಹಗಹಿಸಿ ನಕ್ಕು, ಕೂಡಲೆ ರಣಮಸ್ತಖಾನನನ್ನು ಕರೆಸಿ, ಅದನ್ನು ಆತನ ಕೈಯಲ್ಲಿ ಕೊಟ್ಟನು. ರಣಮಸ್ತನು ಅದನ್ನು ಓದಿ ಅತ್ಯಂತ ಖಿನ್ನನಾಗಿ, ರಾಮರಾಜನನ್ನು ಕುರಿತು-ಸಹಕಾರ್, ನನ್ನಂಥ ಯಃಕಶ್ಚಿತ ಮನುಷ್ಯನ ಸಲುವಾಗಿ ತಾವು ತಮ್ಮ ಮೇಲೆಯೂ, ತಮ್ಮ ರಾಜ್ಯದ ಮೇಲೆಯೂ ಸಂಕಟವನ್ನು ಯಾಕೆ ತಂದುಕೊಳ್ಳುವಿರಿ ! ನನ್ನ ಅಪರಾಧಕ್ಕಾಗಿ ಬಾದಶಹರು ನನಗೆ ದೇಹಾಂತ ಪ್ರಾಯಶ್ಚಿತ್ತ ಕೊಡುವದೇ ಯೋಗ್ಯವಾಗಿರುವದು. ನನ್ನ ಯೋಗದಿಂದ ನಿಮ್ಮ ರಾಜ್ಯದ ಮೇಲೆ ಇಂಥ ಕಠಿಣ ಪ್ರಸಂಗ ಒದಗುವದು ಇಷ್ಟವಾದದ್ದಲ್ಲ. ಬಾದಶಹನಿಗೆ ಏನಾದರೂ ನೆವವು ಬೇಕಾಗಿತ್ತು. ಆತನು ಈವೊತ್ತಿನವರೆಗೆ ಇಬ್ಬರು ಬಾದಶಹರೊಡನೆ ಗುಪ್ತಾಲೋಚನೆಗಳನ್ನು ನಡಿಸಿ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿರುವದರಿಂದ, ನಿಮ್ಮ ಮೇಲೆ ಯುದ್ಧಕ್ಕೆ ಬರಲು ಆತುರಪಡುತ್ತಿರುವನು. ಇಂಥ ಪ್ರಸಂಗದಲ್ಲಿ ಎಲ್ಲ ಗುಟ್ಟನ್ನು ಬಲ್ಲ ನಾನು ನಿಮ್ಮನ್ನು ಕೂಡಿಕೊಳ್ಳಲು, ಬಾದಶಹನು ಹ್ಯಾಗೆ ಸಹಿಸಿಯಾನು ? ಆತನು ನನ್ನ ಮೇಲೆ ಸಿಟ್ಟಾಗದೆ ಯಾಕೆ ಬಿಟ್ಟಾನು ? ಹ್ಯಾಗೂ ನನ್ನ ಯೋಗದಿಂದ ಯುದ್ಧಕ್ಕೆ ಆಸ್ಪದವು ದೊರೆಯುವ ಹಾಗಿದೆ. ಆದ್ದರಿಂದಲೇ ಬಾದಶಹನು ಇಷ್ಟು ನಿಷ್ಠುರತನದಿಂದ ಪತ್ರವನ್ನು ಬರೆದಿದ್ದಾನೆ. ಆದರೆ ನೀವು ಆ ಪತ್ರವನ್ನು ನಿರಾಕರಿಸುವದು ನನಗೆ ನೆಟ್ಟಗೆ ಕಾಣುವದಿಲ್ಲ. ನನ್ನೊಬ್ಬನ ಪ್ರಾಣಹಾನಿಯಿಂದ