ಪುಟ:Kannadigara Karma Kathe.pdf/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೩೨

ಕನ್ನಡಿಗರ ಕರ್ಮಕಥೆ

ಕಾರಣದಿಂದಲೋ ಏನೋ, ನಿನ್ನನ್ನು ನೋಡಿದಕೂಡಲೆ ನನ್ನ ಪ್ರೇಮವು ಹೆಚ್ಚುತ್ತದೆ. ನಿನ್ನನ್ನು ನೋಡಿದಾಗಿನಿಂದ, ನೀನು ನನ್ನ ಬಳಿಯಲ್ಲಿರಬೇಕೆಂಬ ಇಚ್ಚೆಯು ನನ್ನಲ್ಲಿ ಉತ್ಪನ್ನವಾಗುತ್ತದೆ. ನೀನು ನಮ್ಮ ದರ್ಬಾರದಲ್ಲಿ ಅಂದು ಆ ಹುಡುಗಿಯ ಮೇಲುಗಟ್ಟಿ ಸಿಟ್ಟಿನಿಂದ ಮಾತಾಡಿದಾಗಿನಿಂದಂತು, ನಿನ್ನ ಮೇಲಿನ ನನ್ನ ಪ್ರೇಮವು ಹತ್ತುಪಟ್ಟು ಹೆಚ್ಚಾಯಿತು. ನಿನಗೆ ಜನ್ಮಕೊಟ್ಟ ತಂದೆಯೂ, ನಿನ್ನನ್ನು ಹಡೆದ ತಾಯಿಯೂ ಪರಮ ಧನ್ಯರೆಂದು ನಾನು ತಿಳಿಯುವೆನು, ಎಂದು ನುಡಿದನು. ರಾಮರಾಜನು ಇಷ್ಟು ಪ್ರೇಮದಿಂದ ಮಾತಾಡುತ್ತಿರುವಾಗ ದರ್ಬಾರದ ನೆನಪು ಮಾಡಿಕೊಡಲು, ಕೂಡಲೆ ರಣಮಸ್ತಖಾನನ ವೃತ್ತಿಯಲ್ಲಿ ಹೆಚ್ಚು ಕಡಿಮೆಯಾಯಿತು. ಆತನ ಹುಬ್ಬುಗಳು ಗಂಟಿಕ್ಕಿದವು. ಆತನು ತ್ರಸ್ತದೃಷ್ಟಿಯಿಂದ ನೆಲವನ್ನು ನೋಡ ಹತ್ತಿದನು. “ತಾನು ರಾಮರಾಜನ ಶಿರಸ್ಸನ್ನು ತಂದು ನಿನ್ನ ಲಗ್ನಮಾಡಿಕೊಳ್ಳುವೆನೆಂದು” ನೂರಜಹಾನಳ ಮುಂದೆ ಪ್ರತಿಜ್ಞೆ ಮಾಡಿದ್ದು ಆತನಿಗೆ ನೆನಪಾಯಿತು. ಇತ್ತ ರಾಮರಾಜನು ರಣಮಸ್ತಖಾನನ ಮುಖಮುದ್ರೆಯಲ್ಲಿ ಅಂತರವಾದದ್ದನ್ನು ನೋಡಿ, ನೂರಜಹಾನಳ ಪ್ರಾಪ್ತಿಗೆ ಬಾದಶಹನು ಪ್ರತಿ ಬಂಧವಾದನೆಂಬ ಸಿಟ್ಟಿನಿಂದ ಈತನ ಮುಖಮುದ್ರೆಯು ಹೀಗೆ ತ್ರಸ್ತವಾಗಿರುವದೆಂದು ಭಾವಿಸಿ, ನಕ್ಕು ರಣಮಸ್ತನನ್ನು ಕರಿತು- “ನೀವು ಇಷ್ಟು ಸಂತಾಪಗೊಳ್ಳುವ ಕಾರಣವಿಲ್ಲ. ವಿಜಾಪುರದವರೊಡನೆ ಯುದ್ಧಪ್ರಸಂಗವನ್ನು ತಂದುಕೊಳ್ಳಲಿಕ್ಕೆ, ಆ ನಿನ್ನ ಅರಗಿಳಿಯೊಡನೆ ನಿನ್ನ ಲಗ್ನಮಾಡಲು ಆಸ್ಪದದೊರೆಯಬೇಕೆಂಬುದೇ ಮುಖ್ಯ ಕಾರಣವೆಂದು ನೀನು ತಿಳಿದುಕೋ; ಆದ್ದರಿಂದ ವಿಜಾಪುರವನ್ನು ಪ್ರವೇಶಿಸಿದ ಕೂಡಲೆ ನಿನ್ನ ಅರಗಿಳಿಯನ್ನು ಹಿಡಕೊಂಡು ಬರುವದು ನನ್ನ ಮೊದಲನೆಯ ಕೆಲಸವು” ಎಂದು ಹೇಳಿದನು.

ತನ್ನ ಅರಗಿಳಿಯನ್ನು (ನೂರಜಹಾನಳನ್ನು ರಾಮರಾಜನು ಹಿಡಿಕೊಂಡು ಬರುವದು ಅಪಮಾನಾಸ್ಪದವೆಂದು ತಿಳಿದು, ರಣಮಸ್ತಖಾನನು ಸಂತಾಪಗೊಳ್ಳಲು, ಆತನ ಕೈಯು, ಆತನ ಟೊಂಕದಲ್ಲಿ ಅಲೆದಾಡುತ್ತಿದ್ದ ಖಡ್ಗದ ಕಡೆಗೆ ಹೋಯಿತು. ಇದನ್ನು ನೋಡಿ ರಾಮರಾಜನು-ನಾನು ಅರಗಿಳಿಯನ್ನು ಹಿಡಿಯಬೇಕೆಂದು ಕೂಡಲೆ ಈತನು ಇಷ್ಟು ಸ್ಫೂರ್ತಿಗೊಂಡನೆಂದು ತಿಳಿದು- “ಬಹದ್ದೂರ, ಆ ಅರಗಿಳಿಯನ್ನು ಹಿಡಕೊಂಡುಬರುವ ವಿಷಯದಲ್ಲಿ ನೀನು ಇಷ್ಟು ಉತ್ಕಂಠನಾಗಿರುವೆಯೆಂದು ತಿಳಿದೇ ನಾನು ಮಾತಾಡಿದೆನು. ನಿನ್ನ ಈ ಉತ್ಕಂಠಯನ್ನು ನೋಡಿ ನನಗೆ ಬಹಳ ಸಂತೋಷವಾಗುತ್ತದೆ. ನಿನಗೆ ನಿನ್ನ ಅರಗಿಳಿಯ ಚಿಂತೆ ಬೇಡ, ನಾನು ಜೀವದಿಂದಿರುವದರೊಳಗೆ ಅರಗಿಳಿಯೊಡನೆ