ಪುಟ:Kannadigara Karma Kathe.pdf/೨೪೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೨೩೪
ಕನ್ನಡಿಗರ ಕರ್ಮಕಥೆ
 

ನಮಗೆ ಇಷ್ಟು ವೈಷಮ್ಯವೇಕೆ ? ನಮ್ಮ ನಿಮ್ಮ ಸ್ನೇಹ ಸಂಬಂಧವೇ ದೃಢವಾಗಿದ್ದ ಪಕ್ಷದಲ್ಲಿ ರಣಮಸ್ತಖಾನನು ನಿಮ್ಮ ವಿರುದ್ಧವಾಗಿ ನಮ್ಮ ಮುಂದೆ ಏನು ಹೇಳುವನು? ಆತನು ಹೇಳಿದ್ದರಿಂದ ಪ್ರಯೋಜನವಾದರೂ ಏನಾಗುವದು ? ಆತನು ನಿಮ್ಮ ವಿಶ್ವಾಸಘಾತವನ್ನಾದರೂ ಹ್ಯಾಗೆ ಮಾಡುವನು ? ನೀವು ಪತ್ರದಲ್ಲಿ ಬರೆದಂತೆ ರಣಮಸ್ತಖಾನನನ್ನಂತು ನಾವು ನಿಮ್ಮ ಕಡೆಗೆ ಕಳಿಸುವದೇಯಿಲ್ಲ. ತಿರುಗಿ ನಾವು ನಿಮ್ಮನ್ನೊಂದು ಮಾತು ಕೇಳಿಕೊಳ್ಳುವೆವು. ನಮ್ಮ ದರ್ಬಾರದಲ್ಲಿ ರಣಮಸ್ತಖಾನನು ಯಾವ ಹುಡುಗಿಯ ಪಕ್ಷವನ್ನು ಕಟ್ಟಿ ತನ್ನ ತೇಜಸ್ವಿತೆಯನ್ನು ತೋರಿಸಿದನೋ, ಆ ಹುಡುಗೆಯನ್ನು ಈ ಪತ್ರ ಮುಟ್ಟಿದಕೂಡಲೆ ನನ್ನ ಕಡೆಗೆ ಕಳಿಸಿಕೊಡಬೇಕು. ರಣಮಸ್ತಖಾನನೊಡನೆ ಆಕೆಯ ಲಗ್ನ ಮಾಡುವದನ್ನು ನಾವು ನಿಶ್ಚಯಿಸಿರುತ್ತೇವೆ. ರಣಮಸ್ತಖಾನನು ಆ ಹುಡುಗೆಯ ಲಗ್ನಮಾಡಿಕೊಳ್ಳಲಿಕ್ಕೆ ಕುಲ-ಶೀಲ-ಶೌರ್ಯದಿಗಳಿಂದ ಯೋಗ್ಯನಿರುತ್ತಾನೆ. ಕುಲ-ಶೀಲಗಳಿಂದಂತು ಆತನು ಆ ಹುಡುಗಿಯ ಮನೆತನಕ್ಕಿಂತ ಎಷ್ಟೋ ಪಾಲು ಹೆಚ್ಚಿನವನಿರುತ್ತಾನೆ ; ಆದ್ದರಿಂದ ತಾವು ಮನಸ್ಸಿನಲ್ಲಿ ಯಾವ ಪ್ರಕಾರದ ಶಂಕೆಗೂ ಆಸ್ಪದ ಕೊಡದೇ ರಣಮಸ್ತಖಾನನು ನಮ್ಮ ನೌಕರಿ ಬಿಟ್ಟು ವಿಜಯನಗರದ ರಾಯರ ನೌಕರನಾದನೆಂಬ ವಿಕಲ್ಪದಿಂದ ಆತನ ಮೇಲೆ ಸಿಟ್ಟಾಗದೆ, ಆ ಹುಡುಗೆಯನ್ನು ನಮ್ಮ ಕಡೆಗೆ ಕಳಿಸತಕ್ಕದ್ದು. ಆ ಹುಡುಗೆಯ ತಂದೆ-ತಾಯಿಗಳನ್ನು ಹುಡುಗೆಯ ಸಂಗಡ ಲಗ್ನ ಸಮಾರಂಭಕ್ಕೆ ಕಳಿಸಿದರೆ ವಿಹಿತವೇ ಆಗುವದು. ಉಭಯತರ ಯೋಗ್ಯತೆಗೆ ಒಪ್ಪುವಂತೆ ನಾವು ರಣಮಸ್ತಖಾನನ ವಿವಾಹವನ್ನು ಮಾಡುವೆವು. ರಣಮಸ್ತಖಾನನು, ನಮ್ಮಲ್ಲಿ ಸಾಧಾರಣ ನೌಕರನಾಗಿರದೆ, ಪ್ರಮುಖ ಸರದಾರನಾಗಿ ನಿಯಮಿಸಲ್ಪಟ್ಟಿರುವನು, ಮುಂದಾದರೂ ಅವನ ಮಾನ-ಮರ್ಯಾದೆಗಳು ಹೆಚ್ಚುತ್ತ ಹೋಗುವವು, ಆತನು ತಮಗೆ ಯಾವ ತರದ ಕೇಡನ್ನೂ ಬಗೆದಿರುವದಿಲ್ಲ. ಅವನಿಗೆ ನಮ್ಮ ನೌಕರಿಯು ನಿಮ್ಮ ನೌಕರಿಗಿಂತ ನೆಟ್ಟಗೆ ಕಂಡದ್ದರಿಂದ, ಅವನು ಪ್ರಸಿದ್ದ ರೀತಿಯಿಂದ ನಿಮ್ಮ ನೌಕರಿಯನ್ನು ಬಿಟ್ಟುಕೊಟ್ಟು ನಮ್ಮಲ್ಲಿ ಇರಹತ್ತಿದನು. ಈ ಅಲ್ಪ ಕಾರಣದ ಮೂಲಕ ಯುದ್ಧಕ್ಕೆ ಸನ್ನದ್ದರಾಗುವದನ್ನು ನೋಡಿದರೆ, ನೀವು ಜಗಳಕ್ಕೆ ಯಾವದಾದರೊಂದು ಕಾರಣವನ್ನು ಹುಡುಕುತ್ತಿದ್ದಿರೆಂಬಂತೆ ನಮಗೆ ತೋರುತ್ತದೆ. ಎಷ್ಟೋ ದಿವಸಗಳಿಂದ ನೀವು ಅಹಮ್ಮದನಗರ ಗೋವಳಕೊಂಡಗಳ ರಾಜರ ಸಂಗಡ ನಡೆಸಿರುವ ಒಳಸಂಚುಗಳು ನಮಗೆ ಗೊತ್ತಿಲ್ಲವೆಂತಿಲ್ಲ; ಆದರೆ ನೀವಾಗಿ ಮೊದಲು ನಿಮ್ಮ ಶಸ್ತ್ರವೆತ್ತುವವರೆಗೆ ನಾವು ನಿಮ್ಮ ಗೊಡವೆಗೆ ಹೋಗಬಾರದೆಂದು ಮಾಡಿದ್ದೆವು. ಈಗ ನೀವೇ ಮೊದಲು