ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಿಗ್ಗರದ ಉತ್ತರ
೨೩೫

ಯುದ್ಧಕ್ಕೆ ಅಣಿಯಾದ್ದರಿಂದ ನಿರ್ವಾಹವಿಲ್ಲದೆ, ನಾವೂ ಯುದ್ಧಕ್ಕೆ ಹೊರಡುವ ಪ್ರಸಂಗ ಬಂದಿದೆ. ಆದರೆ ಈ ಸಾರೆಯ ಕಾಳಗವು ಯಾವ ಮನೆಗೆ ಬಂದೀತೆಂಬದನ್ನು ನಾವು ಹೇಳಲಾರೆವು. ನಾವು ಕ್ಷಮೆ, ದಯೆ ಮೊದಲಾದವುಗಳನ್ನು ಕಟ್ಟಿ ಇಟ್ಟು, ವಿಜಾಪುರವನ್ನು ಪ್ರವೇಶಿಸಿ, ಕುರಿಗಳಂತೆ ಅಲ್ಲಿಯ ಪ್ರಜೆಗಳನ್ನು ಸಂಹರಿಸಿ, ನಗರವನ್ನು ಸುಟ್ಟು ಸೂರೆಗೈದವು; ಇನ್ನು ಹಿಂದುಮುಂದು ನೋಡಲಿಕ್ಕಿಲ್ಲ. ಆದರೆ ಒಬ್ಬ ನೂರಜಹಾನಳನ್ನು ಕಳಿಸಿಕೊಡುವದರಿಂದ, ಈ ಪ್ರಸಂಗವು ಹಿಂಗಬಹುದಾದ್ದರಿಂದ, ಆಕೆಯನ್ನು ಕೂಡಲೇ ಕಳಿಸಿಕೊಡಬೇಕು ಎಂಬ ಸಂಗತಿಯನ್ನು ಬರೆದು ಪತ್ರವನ್ನು ರಣಮಸ್ತಖಾನನಿಗೆ ತೋರಿಸಿ, ಆತನ ಸಮಕ್ಷಮ ರಾಮರಾಜನು ಅದನ್ನು ಒಬ್ಬ ದೂತನ ಕೈಯಲ್ಲಿ ಕೊಟ್ಟು ವಿಜಾಪುರಕ್ಕೆ ಕಳಿಸಿದನು.


****