ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬ನೆಯ ಪ್ರಕರಣ

ರಾಮರಾಜನ ಸ್ವಚ್ಛಂದವೃತ್ತಿಯು

ರಣಮಸ್ತಖಾನನನ್ನು ತಮ್ಮ ಕಡೆಗೆ ಕಳಿಸಬೇಕೆಂದು ರಾಮರಾಜನಿಗೆ ಬರೆದ ಪತ್ರಕ್ಕೆ ಆತನು ಏನು ಉತ್ತರ ಬರೆಯುವನೆಂಬುವದು ವಿಜಾಪುರದ ಬಾದಶಹನಿಗೆ ಗೊತ್ತಾಗದ ಹಾಗೆ ಆಗಿತ್ತು. ಬಾದಶಹನು ರಾಮರಾಜನ ಉತ್ತರಕ್ಕೆ ಮಹತ್ವಕೊಡದೆ, ತನ್ನ ಸಮರ ಸನ್ನಾಹವನ್ನು ಮಾಡುವಹಾಗೆ ಮಾಡುತ್ತಲೇ ಇದ್ದನು. ಇಬ್ಬರು ಬಾದಶಹರೊಡನೆ ನಡೆಸಿದ ಆತನ ಒಳಸಂಚು ಪೂರ್ಣಸಿದ್ದವಾದ ಹಾಗೆ ಆಗಿತ್ತು. ಬಹಮನಿ ಬಾದಶಹರಲ್ಲಿ ನಾಲ್ಕು ಶಾಖೆಗಳಾಗಿ ಅವರಲ್ಲಿ ಪರಸ್ಪರ ಮಾತ್ಸರ್ಯವು ಹೆಚ್ಚಿದ್ದರಿಂದ ಪರಸ್ಪರರು ಹೊಡೆದಾಡಿ ಎಲ್ಲರೂ ಬಲಹೀನರಾದಂತೆ ಆಗಿತ್ತು. ಈ ಬಾದಶಹರು ಒಬ್ಬರು ಮತ್ತೊಬ್ಬರನ್ನು ಮುರಿಯುವದಕ್ಕಾಗಿ ಪರಧರ್ಮದ ಅರಸರನ್ನು ಪ್ರಾರ್ಥಿಸಿ ತಮ್ಮ ಸಹಾಯಕ್ಕೆ ಕರಕೊಳ್ಳಲಿಕ್ಕೆ ಹೇಸುತ್ತಿಲ್ಲ. ವಿಜಾಪುರದ ಆದಿಲಶಹನು ತನ್ನ ಶತ್ರುಗಳನ್ನು ಹಣ್ಣು ಮಾಡುವದಕ್ಕಾಗಿ ಎರಡುಸಾರೆ ರಾಮರಾಜನ ಸಹಾಯವನ್ನು ಕೇಳಿಕೊಂಡು, ಅವನ ಕಡೆಯಿಂದ ತನ್ನ ಶತ್ರುಗಳ ಮೇಲೆ ದಾಳಿ ಮಾಡಿಸಿದನು, ಈ ದಾಳಿಯಲ್ಲಿ ರಾಮರಾಜನು ಸಂಪೂರ್ಣ ಜಯಶಾಲಿಯಾದದ್ದನ್ನು ನೋಡಿ ಮೊದಮೊದಲು ಅಲ್ಲಿ ಆದಿಲಶಹನಿಗೆ ಬಹಳ ಸಂತೋಷವಾಯಿತು. ಆದರೆ ಈ ಸಮಾಧಾನವು ಬಹಳ ಹೊತ್ತು ನಿಲ್ಲಲಿಲ್ಲ. ರಾಮರಾಜನು ಈ ಜಯದಿಂದ ಬಹಳ ಉನ್ಮತ್ತನಾದನು. ತುಂಗಭದ್ರೆಯಿಂದ ರಾಮೇಶ್ವರದವರೆಗೆ ಈಗ ಆತನ ರಾಜ್ಯವು ವಿಸ್ತ್ರತವಾಗಿ, ಎಲ್ಲ ಮುಸಲ್ಮಾನ ಬಾದಶಹರು ಆತನಿಗೆ ಅಂಜಿ ನಡೆಯಹತ್ತಿದರು. ಈ ಸ್ಥಿತಿಯಲ್ಲಿ ರಾಮರಾಜನು ಜಾಗರೂಕನಾಗಿ ಕಣ್ಣು ತೆರೆದು ನಡೆದಿದ್ದರೆ ಬಹಳ ನೆಟ್ಟಗಾಗುತ್ತಿತ್ತು! ಆದರೆ, ಮದ ಮೋಹಗಳೆಂಬ ಇಬ್ಬರು ಪ್ರಬಲ ವೈರಿಗಳ ಇರುಕಿನಲ್ಲಿ ಸಿಕ್ಕು ಆತನು ತೀರ ಅಂಧನಾಗಿದ್ದನು. ತಾನು ಬಾಯಿಂದ ಅಂದಂತೆ ಆಗುವದೆಂತಲೂ, ಕೈಯಿಂದ ಮಾಡತೊಡಗಿದ್ದು ಸಾಧಿಸುವದೆಂತಲೂ ಆತನು ನಂಬಿದ್ದನು. ಈ ನಂಬಿಗೆಯು ಆತನ ಉನ್ಮತ್ತತನಕ್ಕೆ ಕಾರಣವಾಗದಿದ್ದರೆ, ಆತನ, ಹಾಗೂ ವಿಜಯನಗರದ ರಾಜ್ಯವು ವಿಜಯವೂ, ವಿಸ್ತಾರವೂ ಯಾವಾಗಲೂ ಆಗುತ್ತಲೇ