ಪುಟ:Kannadigara Karma Kathe.pdf/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೭ನೆಯ ಪ್ರಕರಣ

ಆಶಾಭಂಗ

ಲೈಲಿಯು ಬಂದಾಗ ರಾಮರಾಜನು ಒಬ್ಬನೇ ಕುಳಿತಿದ್ದನು ಲೈಲಿಯು ಬಂದಕೂಡಲೆ ರಾಮರಾಜನು ತನ್ನ ಸೇವಕರಿಗೆ ಹೊರಗೆ ತೋಟದಲ್ಲಿ ಹೋಗಿರೆಂದು ಹೇಳಿ, ಲೈಲಿಯನ್ನು ಕುರಿತು-ಮಾರ್ಜಿನೆ, ಮಾರ್ಜಿನೆ ಹೇಳು ನನಗೆ ಎಲ್ಲ ನಿಜವಾದ ವೃತ್ತಾಂತವನ್ನು ಹೇಳು. ನಿನ್ನ ಗುರುತನ್ನು ನಾನು ಎಷ್ಟೋ ದಿನಗಳ ಹಿಂದೆ ಹಿಡಿದಿರುವೆನು, ಇನ್ನು ಮುಚ್ಚಿಕೊಳ್ಳುವದರಲ್ಲೇನೂ ಅರ್ಥವಿಲ್ಲ. ನೀವು ಇಲ್ಲಿಂದ ಹೋದಬಳಿಕ ಏನಾಯಿತೆಂಬದನ್ನೆಲ್ಲ ನನ್ನ ಮುಂದೆ ಹೇಳು, ಇಂದು ಆಕೆಯ ಮುಖದಿಂದಲೇ ಎಲ್ಲಾ ವೃತ್ತಾಂತವನ್ನು ಕೇಳಬೇಕೆಂದು ನಾನು ಬಹಳವಾಗಿ ಅಪೇಕ್ಷಿಸಿದ್ದೆನು; ಆದರೆ ಆಕೆಯು ಹಾಗೆ ಹೇಳಲಿಚ್ಚಿಸುವದಿಲ್ಲ; ಸದ್ಯಕ್ಕೆ ಆಕೆಯನ್ನು ನಾನು ಬಲಾತ್ಕರಿಸುವದಿಲ್ಲ. ನೀನಂತು ಎಲ್ಲ ವೃತ್ತಾಂತವನ್ನು ಹೇಳಲೇಬೇಕು. ಹೇಳು ಸ್ವಲ್ಪವಾದರೂ ಮುಚ್ಚಬೇಡ. ನೀವು ಇಲ್ಲಿಂದ ಹೋದಬಳಿಕ ಎಲ್ಲಿಗೆ ಹೋದಿರಿ ? ಮುಂದೆ ಏನೇನಾಯಿತು ? ನಾನು ನಿಮ್ಮನ್ನು ಇಲ್ಲಿ ಎಷ್ಟು ಹುಡುಕಿಸಿದೆನು. ನೀವು ಸಿಕ್ಕಿದ್ದರೆ, ನಿಮ್ಮ ಬೆನ್ನ ಹಿಂದೆಯೇ ಬಂದು ನಿಮ್ಮನ್ನು ಕರಕೊಂಡು ಬರುತ್ತಿದ್ದೆನು; ನಿಮ್ಮನ್ನು ಅಡ್ಡ ಹಾದಿಗೆ ಹೋರಗೊಡುತ್ತಿದ್ದಿಲ್ಲ; ಆದರೆ ಏನು ಮಾಡಲಿ ? ನಿಮ್ಮ ಗೊತ್ತೇಹತ್ತಲಿಲ್ಲ; ಆದ್ದರಿಂದ ನಾನು ಹುಡುಕುತ್ತ ಸುಮ್ಮನೆ ಕುಳಿತುಕೊಳ್ಳಬೇಕಾಯಿತು, ನನಗೊಂದು ಮುಖ್ಯ ಮಾತು ಗೊತ್ತಾಗಬೇಕಾಗಿದೆ; ಅದು ನನಗೆ ಗೊತ್ತಾದಂತೆ ಆಗಿದ್ದರೂ, ನಿಮ್ಮ ಮುಖದಿಂದ ಕೇಳಿಕೊಳ್ಳಬೇಕಾಗಿರುವುದು. ನೀವು ನಿಜವಾದ ಸಂಗತಿಯನ್ನು ಹೇಳಿದರೆ, ನನಗೆ ಎಷ್ಟೊಂದು ಆನಂದವಾಗುವಹಾಗಿದೆ ಹೇಳು, ಮಾರ್ಜಿನೇ, ಸುಮ್ಮನೆ ನಿಂತುಕೊಳ್ಳಬೇಡ. ಬಾಯಿ ಬಿಚ್ಚಿ ಮಾತಾಡು ಎಂದನು. ರಾಮರಾಜನ ಮುಖದಿಂದ “ಮಾರ್ಜಿನೆ” ಎಂಬ ಶಬ್ದವು ಹೊರಬಿದ್ದದ್ದನ್ನು ಕೇಳಿ ಲೈಲಿಯು ಬೆಚ್ಚಿಬಿದ್ದಳು. ಆಕೆಗೆ ಏನೂ ತೋಚದ್ದರಿಂದ, ರಾಮರಾಜನ ಮೋರೆಯನ್ನು ನೋಡುತ್ತ ಸುಮ್ಮನೆ ನಿಂತುಕೊಂಡಳು.