ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಶಾಭಂಗ
೨೫೫

ನೀನು ನನ್ನು ಹೊಟ್ಟೆಯ ಮಗನು” ಎಂದು ಹೇಳಿ, ಎಲ್ಲ ವೃತ್ತಾಂತವನ್ನು ಆತನಿಗೆ ತಿಳಿಸಬೇಕೆಂದು ಮಾಡಿದ್ದನು. ಆದರೆ ಯಾರಿಗೆ ಗೊತ್ತು ? ತನ್ನ ವೃತಾಂತವನ್ನು ಕೇಳಿ ಆತನಿಗೆ ಸಮಾಧಾನವಾಗುವದೊತ್ತಟ್ಟಿಗುಳಿದು, ಆತನು ಸಿಟ್ಟಿಗೆದ್ದರೆ ಮಾಡುವದೇನು ? ಎಂದು ಶಂಕಿಸಿ, ರಾಮರಾಜನು ಅಷ್ಟಕ್ಕೆ ಸುಮ್ಮನಾಗುತ್ತಿದ್ದನು. ವಿಜಯನಗರದ ರಾಜ್ಯದಲ್ಲಿ ಅರಬ ಹಾಗು ಪಠಾಣ ಜನರ ವರ್ಚಸ್ಸು ವಿಶೇಷವಾಗಿತ್ತು. ಹಿಂದೂಜನರು ಬಹುದಿನ ಸಾಮ್ರಾಜ್ಯ ಸುಖವನ್ನು ಅನುಭವಿಸಿದ್ದರಿಂದ ಡೌಲಿಗೆ ಬಿದ್ದಿದ್ದರು. ಅವರಿಗೆ ಆಹಂಭಾವ ಬಹಳ. ಯುದ್ಧಪ್ರಸಂಗ ಒದಗಿದಾಗ ಅವರನ್ನು ಒಟ್ಟುಗೂಡಿಸಬೇಕಾದರೆ ಸಾಕುಬೇಕಾಗುತ್ತಿತ್ತು. ಅದರಿಂದ ಯುದ್ಧಾರಂಭಕ್ಕೆ ಮುಸಲ್ಮಾನ ಸೈನಿಕರೇ ವೈರಿಗಳಿಗೆ ಎದುರಾಗಬೇಕಾಗುತ್ತಿತ್ತು. ಹಿಂದಿನಿಂದ ಹಿಂದೂ ಸೈನ್ಯದ ಯೋಜನೆಯಾಗುವ ಪ್ರಸಂಗ ಬರುತ್ತಿತ್ತು. ಈವರೆಗಾದ ಅನೇಕ ಕಾಳಗಗಳಲ್ಲಿ ಕೇವಲ ಮುಸಲ್ಮಾನ ದಂಡಾಳುಗಳ ಸಹಾಯದಿಂದಲೇ ವಿಜಯನಗರದವರಿಗೆ ಜಯವು ದೊರೆತಿತ್ತು. ಇದರಿಂದ ಮುಸಲ್ಮಾನ ಸೈನಿಕರ ವರ್ಚಸ್ಸು ವಿಜಯನಗರದ ರಾಜ್ಯದಲ್ಲಿ ಹೆಚ್ಚಲಿಕ್ಕೆ ಕಾರಣವಾಗಿತ್ತು; ಅದರಿಂದ ಮುಸಲ್ಮಾನ ಸೈನ್ಯದ ಮುಖ್ಯಸ್ಥನಾಗಿರುವ ರಣಮಸ್ತಖಾನನ ಮನಸ್ಸನ್ನು ನೋಯಿಸುವದು ಈ ಪ್ರಸಂಗದಲ್ಲಿ ಹಿತಕರವಲ್ಲೆಂದು ತಿಳಿದು, ರಣಮಸ್ತಖಾನನ ಜನ್ಮವೃತ್ತಾಂತವನ್ನು ಮತ್ತೆ ಯಾವಾಗಾದರೂ ಅವನಿಗೆ ಹೇಳೋಣವೆಂದು ರಾಮರಾಜನು ಸ್ಮರಿಸುತ್ತ ಬಂದಿದ್ದನು.


****