ಪುಟ:Kannadigara Karma Kathe.pdf/೨೭೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ರಣಮಸ್ತಖಾನನ ಕಪಟನಾಟಕವು
೨೫೭
 

ಹುಚ್ಚು ರಾಮರಾಜನ ತಲೆಗೇರಿದಂತೆ, ರಣಮಸ್ತನ ಇಷ್ಟಾರ್ಥ ಪೂರ್ತಿಯು ಸಮೀಪಿಸಹತ್ತಿತ್ತು. ಧೂರ್ತನಾದ ವಿಜಾಪುರದ ಬಾದಶಹನಂತು ಅಂತರಂಗದಲ್ಲಿ ರಣಮಸ್ತನಿಗೆ ಪೂರ್ಣ ಅನುಕೂಲವಾಗಿ, ಬಹಿರಂಗದಲ್ಲಿ ಆತನನ್ನು ಸಂಪೂರ್ಣ ನಿರಾಕರಿಸುತ್ತಿದ್ದನು. ರಣಮಸ್ತನ ಕೃತಿಗಳೆಲ್ಲ ಬಾದಶಹನ ಅತಿ ಗುಪ್ತವಾದ ಆಲೋಚನೆಯಿಂದಲೇ ನಡೆದಿದ್ದವು. ವಿಜಯನಗರದ ರಾಜಕಾರಣ ಸುದ್ದಿಗಳೆಲ್ಲ ರಣಮಸ್ತಖಾನನ ಮುಖಾಂತರ ಬಾದಶಹನ ಕಿವಿಗೆ ಮುಟ್ಟುತ್ತಿದ್ದವು; ಆದರೆ ಇದರ ಗಂಧವು ಕೂಡ ಯಾರಿಗೂ ಗೊತ್ತಾಗಿದ್ದಿಲ್ಲ. ರಣಮಸ್ತನ ಒಳಸಂಚುಗಳು ಬಾದಶಹನಿಗೂ, ಆತನ ಮುಖಮಂತ್ರಿಗಳಿಗೂ ಮಾತ್ರ ಗೊತ್ತಿದ್ದವು. ಉಳಿದ ಮುಸಲ್ಮಾನರೆಲ್ಲ ರಣಮಸ್ತನನ್ನು ದ್ರೋಹಿಯೆಂತಲೇ ಭಾವಿಸಿದ್ದರು. ಸ್ವತಃ ಮಾಸಾಹೇಬರಿಗೂ ಈ ಗುಪ್ತಸಂಚಿನ ಸುದ್ದಿಯಿದ್ದಿಲ್ಲ.

ಹೀಗಿರುವಾಗ, ರಾಮರಾಜನು ರಣಮಸ್ತಖಾನನನ್ನು ಒಲಿಸಿಕೊಳ್ಳುವದಕ್ಕಾಗಿ ಶುದ್ಧಾಂತಃಕರಣದಿಂದ ಮನಃಪೂರ್ವಕವಾಗಿ ಪ್ರೀತಿಸುತ್ತಿರಲು, ದುಷ್ಟ ರಣಮಸ್ತನು ಆ ರಾಯನನ್ನು ಸಂಪೂರ್ಣವಾಗಿ ಮೋಸಗೊಳಿಸಿದನೆಂದು ಹೇಳಬಹುದು. ವಿಜಾಪುರದ ಎಲ್ಲ ಮುಸಲ್ಮಾನ ಬಾದಶಹರ ಸೈನ್ಯಗಳು ವಿಜಯನಗರದ ಮೇಲೆ ಸಾಗಿಬರುತ್ತಿರುವಾಗ, ಆ ಸೈನ್ಯಗಳಿಗೆ ಅನುಕೂಲವಾಗಿ ವಿಜಯನಗರದ ಸೈನ್ಯದಲ್ಲಿ ಕಪಟವ್ಯೂಹವನ್ನು ರಚಿಸಲಿಕ್ಕೆ ರಣಮಸ್ತನು ಆರಂಭಿಸಿದನು. ರಾಮರಾಜನು ತನ್ನನ್ನು ಅಂಗರಕ್ಷಕನಾಗಿ ನಿಯಮಿಸಿಕೊಂಡದ್ದರಿಂದ, ರಣಮಸ್ತನಿಗೆ ಅಂತರಂಗದಲ್ಲಿ ಸಂತೋಷವಾಗಿತ್ತು. ತಾನು ಹಲವು ಪಠಾಣರ ಹಾಗು ಅರಬರ ಗುಪ್ತಚಾರರನ್ನು ಕಳಿಸಿ, ವೈರಿಗಳ ಕಡೆಯ ಗುಪ್ತಸಂಗತಿಗಳ ಗೊತ್ತು ಹಚ್ಚಿಸತೊಡಗಿರುವೆನೆಂದು ರಣಮಸ್ತನು ರಾಮರಾಜನ ಮುಂದೆ ಹೇಳುತ್ತಲಿದ್ದನು; ಆ ಹೇಳಿಕೆಯಂತೆ ಎರಡು ದಿನಕ್ಕೆ ಮೂರು ದಿನಕ್ಕೆ ಒಮ್ಮೆ ಹೊಸಹೊಸ ಸುದ್ದಿಗಳನ್ನು ಹುಟ್ಟಿಸಿ, ತನ್ನ ಚಾರರ ಮುಖಾಂತರ ರಾಮರಾಜನಿಗೆ ತಿಳಿಸಹತ್ತಿದನು. ಆ ಸುದ್ದಿಗಳಲ್ಲಿ ಎಷ್ಟೋ ಸುದ್ದಿಗಳು ಅಸಂಭವವಾದವುಗಳಿದ್ದರೂ, ಅವು ರಣಮಸ್ತನ ಚಾರರ ಮುಖದಿಂದ ಹೊರಟವಾದ್ದರಿಂದ, ರಾಮರಾಜನಿಗೆ ಸಂಭವವಾಗಿ ತೋರುತ್ತಿದ್ದವು. ವಿಜಯನಗರದ ದೂರದರ್ಶಿಗಳಾದ ಮುತ್ಸದ್ದಿಗಳು, ಈ ಸುದ್ದಿಗಳ ಅಸಂಭವತೆಯನ್ನು ತೋರಿಸಲು ರಾಮರಾಜನ ಸಮಕ್ಷಮ ಅವರ ಮಾತನ್ನು ನಿರಾಕರಿಸಿ, ಉಪಹಾಸ ಮಾಡಹತ್ತಿದನು. ಆದ್ದರಿಂದ ಮುಂದೆ ರಾಮರಾಜನಿಗೆ ಹಿತವಚನಗಳನ್ನು ಹೇಳುವವರೇ ಇಲ್ಲದಾದರು, ಈ ಮೊದಲೆ ರಾಮರಾಜನು ಶತ್ರುಗಳ ಸೈನ್ಯವನ್ನು ತುಂಗಭದ್ರೆಯ ಕಾಳ ಹೊಳೆಯಲ್ಲಿ ತರುಬಬೇಕೆಂದು