ಪುಟ:Kannadigara Karma Kathe.pdf/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಣಮಸ್ತಖಾನನ ಕಪಟನಾಟಕವು

೨೫೯

ಆಜ್ಞಾಪಿಸಿದನು. ಅವರಾದರೂ ತಟ್ಟನೆ ಅಲ್ಲಿಂದ ಹೊರಟು ಹೋದರು. ಅವರು ರಾಮರಾಜನಿಗೆ ಪ್ರಶ್ನೆಮಾಡಲಿಕ್ಕೆ ಆಸ್ಪದವನ್ನೇ ಕೊಡಲಿಲ್ಲ. ಅವರಿಬ್ಬರು ಚಾರರು ಹೋದಕೂಡಲೆ ರಣಮಸ್ತಖಾನನು ರಾಮರಾಜನನ್ನು ಕುರಿತು “ಹುಜೂರ್,.......” ಎಂದು ಮಾತಾಡುತ್ತಿರಲು, ರಾಮರಾಜನು ನಡುವೆ ಬಾಯಿಹಾಕಿ-ಎಲಾ, ನಾನು ನಿನ್ನನ್ನು ಮಗನೆಂದು ಭಾವಿಸಿರಲು ನೀನು “ಹುಜೂರ್” “ಸರಕಾರ್” ಎಂದು ಕರೆಯುತ್ತೀಯಲ್ಲ ! ಇನ್ನು ಮೇಲೆ ಹಾಗೆ ಕರೆಯಬೇಡ, ಎಂದು ಹೇಳಿದನು. ರಣಮಸ್ತನು ತಂದ ಸುದ್ದಿಯಿಂದ ರಾಮರಾಜನಿಗೆ ಪ್ರೇಮೋದ್ರೇಕವಾದಂತಾಗಿತ್ತು. ರಣಮಸ್ತನ ಕಪಟವು ಆತನಿಗೆ ಹೊಳೆಯಲಿಲ್ಲ. ರಾಮರಾಜನ ಪ್ರೇಮೋದ್ಧಾರಗಳನ್ನು ಕೇಳಿ ರಣಮಸ್ತಖಾನನು ನಕ್ಕು-ತಾವು ನನ್ನನ್ನು ಮಗನೆಂದು ಭಾವಿಸುತ್ತಿದ್ದರೂ, ನಾನು ನಿಮ್ಮ ನೌಕರನೆಂಬುದನ್ನು ನಾನು ಹ್ಯಾಗೆ ಮರೆಯಬೇಕು? ಅದಿರಲಿ, ನಾನು ಹ್ಯಾಗೆ ಕರೆದರೇನು ? ನನ್ನ ಮೇಲೆ ತಮ್ಮ ಪ್ರೇಮವಿರುವದೊಂದು ಮುಖ್ಯ ಮಾತು. ನನಗೆ ಈಗ ತೋರುವದೇನೆಂದರೆ, ಚಾರರು ಹೇಳಿರುವ ಸುದ್ದಿಯ ಉಪಯೋಗವನ್ನು ನಾವು ಬೇಗನೆ ಮಾಡಿಕೊಂಡರೆ ಪ್ರಯೋಜನವಾಗುವದು. ನೀವು ಈಗ ಸೈನ್ಯವನ್ನು ವಿಭಾಗಿಸಿದ್ದು ಶತ್ರುಗಳಿಗೆ ಅನಾಯಾಸವಾಗಿ ಅನುಕೂಲಿಸಿದಂತೆ ಕಾಣುತ್ತದೆ. ತಾವು ಆಜ್ಞಾಪಿಸಿದರೆ ನಾನು ನನ್ನ ಸೈನ್ಯದೊಡನೆ ಆ ಉತ್ತರದಿಕ್ಕಿನ ಕಾಳ ಹೊಳೆಯ ಕಡೆಗೆ ಹೋಗಿ ಶತ್ರುಗಳ ಸಮಾಚಾರವನ್ನು ತಕ್ಕೊಳ್ಳುವೆನು. ಆ ಸ್ಥಳದ ಗುರತು ನನಗೆ ಚೆನ್ನಾಗಿರುತ್ತದೆ. ಅಲ್ಲಿ ಕಾಳ ಹೊಳೆಯು ಸುಲಭವಾದದ್ದಿದ್ದರೂ, ಹಾದಿಯು ಬಹು ಕಿರಿದು ಇರುತ್ತದೆ. ಬಹಳವಾದರೆ ನಾಲ್ಕು ಜನರು ಮಾತ್ರ ಸಾಲಾಗಿ ಆ ಹಾದಿಯಲ್ಲಿ ಬರಬಹುದು. ಹಾದಿಯ ಎಡಬಲಗಳಲ್ಲಿ ಮಡುವುಗಳು ಇರುವವು, ಹಾದಿಯು ಸುಲಭವಾದದ್ದೆಂದು ತಿಳಿದು ದಂಡಾಳುಗಳು ಕುರಿಯ ಹಾಗೆ ನುಗ್ಗಬಹುದು. ಆಗ ನಾವು ಅಲ್ಲಿ ಇರದಿದ್ದರೆ ಕಷ್ಟಪಟ್ಟಾದರು ಅವರು ಹೊಳೆಯನ್ನು ದಾಟಿ ಬರಬಹುದು. ಆದರೆ ನಾವು ಅಲ್ಲಿ ಹಿತ್ತಿಗೆ ಹೋಗಿ ಮುಗಿಬಿದ್ದರೆ, ಶತ್ರುಗಳಿಗೆ ಜಲಸಮಾಧಿಯು ದೊರೆಯುವದು. ಇದರ ಮೇಲೆ ತಮ್ಮ ಅಪ್ಪಣೆಯಂತೆ ನಡೆದುಕೊಳ್ಳುವೆನು, ಎಂದು ಹೇಳಿದನು. ಅದಕ್ಕೆ ರಾಮರಾಜ ರಣಮಸ್ತನ ಬೆನ್ನಮೇಲೆ ಕೈಯಾಡಿಸಿ

ರಾಮರಾಜ-ನೀನು ನನ್ನನ್ನು ಆಗಲಿ ದೂರ ಹೋಗಲಾಗದು. ನನ್ನ ಮೇಲೆ ಶತ್ರುಗಳು ಏರಿಬಂದ ಪಕ್ಷದಲ್ಲಿ ನೀನುಹತ್ತರ ಇರಬೇಕು, ನನ್ನ ಎಡಬಲದಲ್ಲಿ ನನ್ನ ಇಬ್ಬರು ಬಂಧುಗಳೂ, ಮಧ್ಯದಲ್ಲಿ ನನ್ನ ಬಳಿಯಲ್ಲಿ ನೀನೂ ಇರಲೇಬೇಕು.