ಕಡೆಯಿಂದ ದಾಳಿಯಾಡಬೇಕೆಂಬದನ್ನು ಆ ಪತ್ರದಲ್ಲಿ ರಾಯನು ಸ್ಪಷ್ಟವಾಗಿ ಕಾಣಿಸಿದ್ದನು. ರಾಮರಾಜನು ಪತ್ರಗಳನ್ನು ರಣಮಸ್ತಖಾನನಿಗೆ ಓದಿತೋರಿಸಿಯೇ ಕಳಿಸಿದ್ದನಲ್ಲದೆ, ಅದರೊಳಗೆ ಆತನ ಬಂಧುಗಳ ಕಡೆಗೆ ಹೋದ ಸ್ವಲ್ಪ ಹೊತ್ತಿನಲ್ಲಿಯೇ, ರಣಮಸ್ತಖಾನನು ಆ ಸುದ್ದಿಯನ್ನೆಲ್ಲ ಬರೆದಿದ್ದ ಪತ್ರವನ್ನು ತನ್ನ ಇಬ್ಬರು ಸೇವಕರ ಕೈಯಲ್ಲಿ ಕೊಡಲು ಅವರು ತುಂಗಭದ್ರೆಯನ್ನು ದಾಟಿ ಬಾದಶಹನ ಠಾಣ್ಯದ ಕಡೆಗೆ ನಡೆದರು. ಹೀಗೆ ವಿಜಯನಗರದಲ್ಲಿ ನಡೆದ ಪ್ರತಿ ಒಂದು ಮಹತ್ವದ ಸುದ್ದಿಯನ್ನು ರಣಮಸ್ತಖಾನನು ಶತ್ರುಗಳಿಗೆ ಗುಪ್ತವಾಗಿ ತಿಳಿಸುತ್ತಿದ್ದನು; ಆದರೆ ಅತ್ಯಂತ ಚಾಣಾಕ್ಷನಾದ ರಾಮರಾಜನು ಸಹ ಪ್ರೇಮಾಂಧನಾದ್ದರಿಂದ ರಣಮಸ್ತನ ಈ ಘಾತಕವನ್ನು ಅರಿಯದೆ ಹೋದನು. ಆತನು ಹಾಗೆ ಅಂಧನಾಗದೆ, ತನ್ನ ಸ್ವಾಭಾವಿಕವಾದ, ಧೂರ್ತತನದಿಂದ ನಡೆದಿದ್ದರೆ, ಕನ್ನಡಿಗರ ಈ ಕರ್ಮಕಥೆಯನ್ನು ಬರೆಯುವ ಪ್ರಸಂಗವು ಬರುತ್ತಿತ್ತೋ ಇಲ್ಲವೋ ಯಾರಿಗೆ ಗೊತ್ತು !
ರಾಮರಾಜನ ಪತ್ರಗಳು ತಿರುಮಲ-ವೆಂಕಟಾದ್ರಿಗಳಿಗೆ ಮುಟ್ಟಲು, ಅವನ್ನು ಓದಿ ಅವರಿಗೆ ಬಹಳ ಸಮಾಧಾನವಾಯಿತು. ಶತ್ರುಗಳ ಮೈಮೇಲೆ ಬರುವವರೆಗೆ ತಾವು ಕೈಮುಚ್ಚಿಕೊಂಡು ಹಾದಿಯನ್ನು ನೋಡುತ್ತ ಕುಳಿತುಕೊಳ್ಳುವದು ಹೇಡಿತನದ ಲಕ್ಷಣವೆಂದು ತಿಳಿದು, ತಾವು ಮುಂದಕ್ಕೆ ಸಾಗಿ ಹೋಗುವ ಬಗ್ಗೆ ತಿರುಮಲನು ರಾಮರಾಜನಿಗೆ ಪತ್ರವನ್ನು ಬರೆಯತಕ್ಕವನಿದ್ದನು. ಅಷ್ಟರಲ್ಲಿ ರಾಮರಾಜನ ಈ ಪತ್ರವು ಆತನ ಕೈಸೇರಿತು. ಆದ್ದರಿಂದ ಆತನ ಆನಂದವು ಹೊಟ್ಟೆಯಲ್ಲಿ ಹಿಡಸದಾಯಿತು. ಆತನು ತನ್ನ ಸೈನ್ಯಕ್ಕೆ ಇಷ್ಟು ಹೊತ್ತಿಗೆ ತುಂಗಭದ್ರೆಯನ್ನು ದಾಟಿಹೋಗಬೇಕೆಂದು ಆಜ್ಞಾಪಿಸಿ, ಆ ಸುದ್ದಿಯನ್ನು ವೆಂಕಟಾದ್ರಿಗೆ ತಿಳಿಸಿ ಅದೇ ಹೊತ್ತಿಗೇ ಆತನು ತುಂಗಭದ್ರೆಯನ್ನು ದಾಟಿಬರುವಂತೆ ಮಾಡಿದನು. ತಿರುಮಲನು ರಾಮರಾಜನಿಗೂ ತಾನು ಮಾಡಿದ ವ್ಯವಸ್ಥೆಯನ್ನು ತಿಳಿಸಿ, ಅದೇ ಕಾಲದಲ್ಲಿಯೇ ತಮ್ಮ ಸೈನ್ಯವನ್ನು ನಿರ್ಬಂಧವಾಗಿ ಮುಂದಕ್ಕೆ ನೂಕಬೇಕೆಂದು ರಾಮರಾಜನಿಗೆ ಹೇಳಿಕೊಂಡನು. ಇದರಿಂದ ರಾಯರ ಮೂರೂ ದಂಡುಗಳೂ ನಿಯಮಿತ ವೇಳೆಯಲ್ಲಿ ತುಂಗಭದ್ರೆಯನ್ನು ದಾಟಲನುವಾದವು. ಈ ಸುದ್ದಿಯೂ ರಣಮಸ್ತನ ಮುಖಾಂತರ ಶತ್ರುಗಳಿಗೆ ಮುಟ್ಟಿತು. ಈ ಮೂವರ ಸೈನ್ಯಗಳ ಸಂಖ್ಯೆಯು ಅಪಾರವಾಗಿತ್ತು, ಸೈನಿಕರು- “ಜಯ ನರಹರಿ ! ಜಯ ವಿಠ್ಠಲಸ್ವಾಮಿ! ಜಯವಿರೂಪಾಕ್ಷ ! ಜಯ ನರಸಿಂಹ” ಎಂದು ಜಯ ಘೋಷ ಮಾಡುತ್ತ ತುಂಗಭದ್ರೆಯನ್ನು ಪ್ರವೇಶಿಸಿದರು. ಕಾಳಹೊಳೆಯೂ ಅವರ ಗೊತ್ತಿನದಾದ್ದರಿಂದ,