ಪುಟ:Kannadigara Karma Kathe.pdf/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬೪

ಕನ್ನಡಿಗರ ಕರ್ಮಕಥೆ

“ಏನನ್ನುವಿರಿ ? ನಾನು ಇಂಥ ಕೃತಘ್ನನಾಗಲಾ ?” ಎಂದು ಕೇಳಿದನು. ಅದಕ್ಕೆ ರಾಮರಾಜನು- “ಇದರಲ್ಲಿ ಕೃತಘ್ನತನವೇನು ? ನಿನ್ನನ್ನು ನಾನು ಬಾದಶಹನಿಗೆ ಒಪ್ಪಿಸಿದ್ರೆ, ಆತನು ನಿನ್ನ ಶಿರಚ್ಛೇದ ಮಾಡಿಸದೆ ಬೀಡುತ್ತಿದ್ದನೋ ? ಅಂದಬಳಿಕ ನನ್ನ ಪಕ್ಷವನ್ನು ವಹಿಸಿದ ನೀನು ಯುದ್ಧದಲ್ಲಿ ನನ್ನ ಸಲುವಾಗಿ ಬಾದಶಹನ ಶಿರಚ್ಛೇದ ಮಾಡಿದರೆ ಕೃತಘ್ನತನವು ಹ್ಯಾಗಾಗುವುದು ? ಅದರಲ್ಲಿ ನಾನು ನಿನಗೆ ಒಮ್ಮೆ ಶಿರಚ್ಛೇದ ಮಾಡೆಂದು ಹೇಳಿದೆನು. ನನ್ನ ಪಕ್ಷ ವಹಿಸಿ ನೀನು ಈ ಕಾರ್ಯ ಮಾಡಿದೆಯೆಂದರೆ, ನಿನ್ನ ಅಖಂಡ ಕಲ್ಯಾಣ ಮಾಡುವೆನು, ನೀನು ವಿಜಾಪುರದ ಬಾದಶಹನು ಸಹ ಆಗಬಹುದು. ಇದಲ್ಲದೆ ನಿನಗೊಂದು ಮಹತ್ವದ ಸುದ್ದಿಯನೂ ಹೇಳುವವನಿದ್ದೇನೆ.

ಈ ಮೇರೆಗೆ ಸಂಭಾಷಣವು ನಡೆದಿರಲು, ಶತ್ರುಗಳು ಕೃಷ್ಣಯ ದಂಡೆಯಲ್ಲಿ ತಳೂರಿದರೆಂಬ ಸುದ್ದಿಯನ್ನು ಚಾರರು ರಾಮರಾಜನ ಮುಂದೆ ಹೇಳಿದರು. ಅದನ್ನು ಕೇಳಿ ರಾಮರಾಜನು ಸಮಾಧಾನಪಟ್ಟು, ತಾನು ಇನ್ನು ಶತ್ರುಗಳ ಮೇಲೆ ಬೀಳುವ ಮೊದಲು ತನ್ನ ಸೈನ್ಯವನ್ನು ವಿಶ್ರಮಿಸಗೊಡಬೇಕೆಂದು ನಿಶ್ಚಯಿಸಿದನು. ಹಾಗೆ ತನ್ನ ಸೈನ್ಯದವರು ವಿಶ್ರಾಂತಿಗೊಳ್ಳದಿದ್ದರೆ, ಈಗ ಬೆನ್ನಟ್ಟುವಾಗ ದಣಿದಿರುವವರಿಗೆ ಶತ್ರುಗಳ ಮೇಲೆ ಬಿದ್ದಾಗ ಶೌರ್ಯದಿಂದ ಕಾದಲಿಕ್ಕೆ ನೆಟ್ಟಿಗಾಗಲಿಕ್ಕಿಲ್ಲೆಂಬ ವಿಚಾರವು ಆತನಲ್ಲಿ ಉತ್ಪನ್ನವಾಯಿತು. ಆಗ ರಾಮರಾಜನು ವಿಶ್ರಮಿಸುವದಕ್ಕಾಗಿ ತನ್ನ ಸೈನ್ಯಕ್ಕೆ ಅಪ್ಪಣೆಯನ್ನಿತ್ತು, ಈವರೆಗೆ ತನ್ನ ಕೈ ಸೇರಿರುವ ವೈರಿಗಳ ದೇಶವನ್ನು ಸುಲಿಯಬಹುದೆಂದು ಅವರಿಗೆ ಹೇಳಿದನು !


****