ಪುಟ:Kannadigara Karma Kathe.pdf/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾಸಾಹೇಬರ ದುರವಸ್ಥೆ

೨೬೭

ನಿನ್ನನ್ನು ಕರೆಯುತ್ತಾರೆ. ತಟ್ಟನೆ ಹೋಗು; ಅವರು ಏನು ಹೇಳುತ್ತಾರೆಂಬುದನ್ನು ಕೇಳಿಕೋ. ಅವರ ಸಂಗಡ ಹುಚ್ಚು ಹುಚ್ಚು ಬಡಿಯಬೇಡ, ಎಬಡತನದಿಂದ ನಡಕೊಳ್ಳಬೇಡ, ಇವೊತ್ತಿನವರೆಗೆ ಅವರು ನಿನ್ನನ್ನು ಪ್ರತ್ಯಕ್ಷ ಕರಿಸಿ ಏನೂ ಹೇಳಿರುವದಿಲ್ಲ. ಈವೊತ್ತು ಏನೋ ಹೇಳುತ್ತಾರೆ, ಅವರ ಮನಸ್ಸನ್ನು ನೋಯಿಸಬೇಡ, ನನಗೆ ಸಹ ಅವರು- “ನೀನು ಆತನ ಸಂಗಡ ಬರಬೇಡ, ಆತನೊಬ್ಬನನ್ನೇ ಕಳಿಸಿಕೊಡು” ಎಂದು ಹೇಳಿದ್ದಾರೆ; ಆದ್ದರಿಂದ ಬೇಗನೆ ಹೋಗು ಎಂದು ಹೇಳಿದಳು. ಅದನ್ನು ಕೇಳಿದ ಕೂಡಲೆ ಧನಮಲ್ಲನ ಮುಖಮುದ್ರೆಯು ಪ್ರಫುಲ್ಲಿತವಾಯಿತು. ಆ ಮುಖದಲಿ ಮುಗುಳುನಗೆಯು ಒಪ್ಪಿತು. ಆತನು ಆಶ್ಚರ್ಯಮಗ್ನನಾದ್ದರಿಂದ ಮಾರ್ಜೀನೆಯನ್ನು ಕೆಕ್ಕರಿಸಿ ನೋಡಹತ್ತಿದನು. ಆಗ ಮಾರ್ಜಿನೆಗೆ ಸ್ವಲ್ಪ ಧೈರ್ಯ ಬಂದಂತಾಗಿ, ಆಕೆಯು ಆತನಿಗೆ- ಹೋಗು-ಹೋಗು, ನನ್ನನ್ನು ಕೆಕ್ಕರಿಸಿ ನೋಡಬೇಡ. ಮಾಸಾಹೇಬರು ಒಳ್ಳೇ ಉತ್ಕಂಠಯಿಂದ ನಿನ್ನ ಹಾದಿಯನ್ನು ನೋಡುತ್ತಿರುವರು ಹೋಗು, ಎಂದು ಹೇಳಿದಳು. ಕೂಡಲೆ ಧನಮಲ್ಲನು ಮೆಹೆರಜಾನಳ ಬಳಿಗೆ ಹೋಗಿ ಆಕೆಯನ್ನು ಎವೆಯಿಕ್ಕದೆ ನೋಡುತ್ತ ನಿಂತುಕೊಂಡನು. ಮೆಹೆರಜಾನಳ ಸರ್ವಾಂಗವು ಬುರುಕಿಯಿಂದ ಮುಚ್ಚಿಹೋಗಿತ್ತು, ಆಕೆಯು ಧನಮಲ್ಲನು ಬಂದ ಸುಳಿವನ್ನರಿತು, ತಟ್ಟನೆ ತನ್ನ ಮೊರೆಯ ಮೇಲಿನ ನುರುಕೆಯನ್ನು ತೆಗೆದು ಒಮ್ಮೆಲೆ ಆತನನ್ನು ಕುರಿತು-ಧನಮಲ್ಲ, ಇಲ್ಲಿಯವರೆಗಿನ ಮೆಹೆರ್ಜಾನ ಬೇರೆ, ಇನ್ನು ಮೇಲಿನ ಮೆಹೆರ್ಜಾನಳು ಬೇರೆಯೆಂದು ತಿಳಿ. ಇಲ್ಲಿಯವರೆಗೆ ನಾನುನಿನಗೆ ಹೆದರುತ್ತಿದ್ದೆನು. ಈಗ ನೀನು ನನಗೆ ಒಡಹುಟ್ಟಿದ ಅಣ್ಣನಂತೆ ಇರುತ್ತೀ, ನೀನಾದರೂ ನಿನ್ನ ಒಡಹುಟ್ಟಿದ ತಂಗಿಯೆಂತಲೇ ತಿಳಿದು ನನ್ನ ಮಾನವನ್ನು ಕಾಯಿ ನಿನಗೆ ನಾನು ಶರಣು........

ಈ ಮೇರೆಗೆ ನುಡಿಯುವಾಗ ಮೆಹೆರಜಾನಳ ಕಂಠವು ಬಿಗಿದು, ಮಾತುಗಳು ಹೊರಡದಾದವು. ಆಕೆಯ ಕಣ್ಣುಗಳಿಂದ ನೀರುಗಳು ಸುರಿಯಹತ್ತಿದವು. ಆಕೆಯು ಕೆಳಗೆ ನೋಡುತ್ತ ಸುಮ್ಮನೆ ಕುಳಿತುಕೊಂಡಳು. ಧನಮಲ್ಲನು ಆಕೆಯನ್ನು ಚಮತ್ಕಾರ ದೃಷ್ಟಿಯಿಂದ ನೋಡಹತ್ತಿದನಲ್ಲದೆ, ಬಾಯಿಂದ ಪಿಟ್ಟೆಂದು ಮಾತಾಡಲಿಲ್ಲ. ಆಗ ಮೆಹೆರ್ಜಾನಳು-ಧನಮಲ್ಲಾ, ನಿನಗೆ ಮಾತಾಡಲಿಕ್ಕೆ ಬರುತ್ತದೆಂಬುದು ನನಗೆ ಗೊತ್ತಿರುತ್ತದೆ; ಆದ್ದರಿಂದ ನನ್ನ ಮುಂದೆ ನಿಜವಾದ ಸ್ವರೂಪವನ್ನು ಮುಚ್ಚಬೇಡ, ಈವೊತ್ತಿನವರೆಗೆ ಆದದ್ದನ್ನೆಲ್ಲ ಮರೆತುಬಿಡು. ನನ್ನನ್ನು ಒಡಹುಟ್ಟಿದ ತಂಗಿಯೆಂದು ತಿಳಿದು, ನನ್ನ ಮಾನವನ್ನು ಕಾಯಿ, ನನಗೆ ಈ