ಪುಟ:Kannadigara Karma Kathe.pdf/೨೮೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೨೭೪
ಕನ್ನಡಿಗರ ಕರ್ಮಕಥೆ
 

ಚಾಳಿಯನ್ನು ನೋಡಿ ಸಿಟ್ಟಾಗಬೇಡ, ನಗಬೇಡ. ರಣಮಸ್ತಖಾನನು ನನ್ನನ್ನು ವಿಜಾಪುರಕ್ಕೆ ಕಳಿಸಿಹೋದ ಬಳಿಕ, ವಿಶೇಷವಾಗಿ ನೀನೂ ಮಾಸಾಹೇಬರೂ ನಮ್ಮ ಮನೆಗೆ ನನ್ನನ್ನು ರಣಮಸ್ತಖಾನನಿಗೆ ಕೊಡಬೇಕೆಂದು ಕೇಳಲಿಕ್ಕೆ ಬಂದು ಹೋದಬಳಿಕ, ರಣಮಸ್ತಖಾನನ ಆಸೆಯು ನನಗೆ ತಪ್ಪಿದಂತೆ ಆಯಿತು; ಯಾಕೆಂದರೆ, ಆತನ ಕುಲ ವೃತ್ತಾಂತವು ಯಾರಿಗೂ ಗೊತ್ತಿಲ್ಲ; ಆತನು ಕುಲೀನನೆಂಬುದು ಗೊತ್ತಾದರೂ, ಆತನು ಮಾಡಿದ ಪ್ರತಿಜ್ಞೆಯು ನೆರವೇರುವದು ಅಸಂಭವವಾಗಿತ್ತು. ಮುಂದೆ ಬರಬರುತ್ತ ರಣಮಸ್ತಖಾನನ ನೆನಪು ಸಹ ನನಗೆ ವಿಶೇಷವಾಗಿ ಆಗದಾಯಿತು; ಆದರೆ ರಾಮರಾಜನ ಸಂಗಡ ಮೂವರು ಬಾದಶಹರೂ ಯುದ್ಧವನ್ನು ಹೂಡಿ ಸೈನ್ಯದೊಡನೆ ವಿಜಯನಗರದ ಮೇಲೆ ಸಾಗಲು, ನನಗೆ ಪುನಃ ರಣಮಸ್ತಖಾನರ, ಅಥವಾ ನಮ್ಮ ನವಾಬ ಸಾಹೇಬರ ನೆನಪಾಯಿತು. ನವಾಬಸಾಹೇಬರು ತಮ್ಮ ಪ್ರತಿಜ್ಞೆಯನ್ನು ಈಡೇರಿಸಬಹುದೆಂಬ ಆಸೆಯು ನನಗೆ ಉತ್ಪನ್ನವಾಯಿತು. ತಮ್ಮ ಪ್ರತಿಜ್ಞೆಯನ್ನು ಕೊನೆಗಾಣಿಸುವದಕ್ಕಾಗಿಯೇ ಅವರು ರಾಮರಾಜನ ಕಡೆಗಾಗಿರುವರೆಂದು ನನ್ನ ಭಾವನೆಯಾಯಿತು. ಹೊತ್ತು ನೋಡಿ ಅವರು ರಾಮರಾಜನ ಕುತ್ತಿಗೆಯನ್ನು ಕೊಯ್ಯದೆ ಬಿಡರೆಂದು ನಾನು ಈಗಲೂ ಪೂರ್ಣವಾಗಿ ನಂಬಿದ್ದೇನೆ. ರಾಮರಾಜನ ಮೇಲೆ ನನ್ನ ಸಿಟ್ಟು ಇದ್ದಷ್ಟೇ ರಣಮಸ್ತಖಾನರ ಮೇಲೆ ನನ್ನ ಪ್ರೇಮವಿರುತ್ತದೆ. ಯುದ್ಧ ಪ್ರಸಂಗವು ಒದಗಿದ್ದರಿಂದ ಆ ಪ್ರೇಮವು ಮತ್ತಷ್ಟು ಜಾಗ್ರತವಾಯಿತು. ನಮ್ಮ ಮನೆಯೊಳಗಿನ ಗಂಡಸರೆಲ್ಲ ಯುದ್ಧಕ್ಕೆ ಹೋದದ್ದರಿಂದ ಬರಿಯ ಹೆಣ್ಣುಮಕ್ಕಳೇ ಮನೆಯಲ್ಲಿ ಉಳಿದೆವು. ನನಗೆ ಯುದ್ಧ ವಾರ್ತೆಗಳೇನೂ ತಿಳಿಯದಾದವು. ರಾಮರಾಜನ ನಾಶವನ್ನು ಕಣ್ಣುಮುಟ್ಟಿ ನೋಡುವ ಇಚ್ಛೆಯು ನನಗೆ ಉತ್ಪನ್ನವಾಯಿತು. ಮಾರ್ಜೀನೆ, ನನ್ನ ಸ್ವಭಾವವು ನಿನಗೆ ಅಲ್ಪಸ್ವಲ್ಪವಾದರೂ ಗೊತ್ತೇ ಇರುತ್ತದೆ. ನನ್ನ ಮನಸ್ಸಿನಲ್ಲಿ ಆ ಇಚ್ಚೆಯು ಉತ್ಪನ್ನವಾದ ಕೂಡಲೆ ಅದನ್ನು ಪೂರ್ಣಮಾಡಿಕೊಳ್ಳುವದನ್ನು ನಾನು ನಿಶ್ಚಯಿಸಿದೆನು; ಮನೆಯಲ್ಲಿ ಗಂಡಸರು ಇಲ್ಲದ್ದರಿಂದ ನನ್ನನ್ನು ಕೇಳುವವರೇ ಇಲ್ಲದಾಯಿತು. ಆಗ ನಾನು ಗಂಡಸರ ಯುದ್ದದ ಉಡುಪು-ತೊಡಪುಗಳನ್ನು ಶಸ್ತ್ರಾಸ್ತ್ರಗಳನ್ನೂ ಸಜ್ಜುಮಾಡಿಕೊಂಡು, ಮನೆಯಲ್ಲಿ ಬಿಟ್ಟುಹೋಗಿದ್ದ ಒಂದು ಕುದುರೆಯನ್ನು ಸಿದ್ದಗೊಳಿಸಿ, ಪುರುಷವೇಷದಿಂದ ನಾನು ಮನೆಯನ್ನು ಬಿಟ್ಟೆನು.

ಮಾರ್ಜೀನೆ, ನನ್ನ ಸಾಹಸಕ್ಕಾಗಿ ನೀನು ಮನಸ್ಸಿನಲ್ಲಿ ನನ್ನನ್ನು ಹಳಿಯುತ್ತಿರಬಹುದು; ನನಗೆ ಹೆಸರೂ ಇಡುತ್ತಿರಬಹುದು; ಆದರೆ ನಾನು