ಪುಟ:Kannadigara Karma Kathe.pdf/೨೯೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ನೂರಜಹಾನಳ ಸಾಹಸ
೨೭೫
 

ಅಂಥ ಸಾಹಸವನ್ನೇ ಮಾಡಿರುವದರಿಂದ ನೀನು ಎಷ್ಟು ಹೇಳಿದರೂ, ನನಗೆ ಎಷ್ಟು ಹೆಸರಿಟ್ಟರೂ ನಾನು ನಿನಗೆ ಬೇಡೆನ್ನುವದಿಲ್ಲ. ನಾನು ವಿಜಯನಗರದ ಹಾದಿಯನ್ನು ಹಿಡಿದು ಮುಂದಕ್ಕೆ ಸಾಗಿದೆನು. ನನ್ನನ್ನು ಮಾರ್ಗಸ್ಥರು ಕೌತುಕದಿಂದ ನೋಡುತ್ತಲಿದ್ದರು; ಆದರೆ ಸುದೈವದಿಂದಲೋ ದುರ್ದೈವದಿಂದಲೋ ಯಾರೂ ನನ್ನ ಗುರುತು ಹಿಡಿಯಲಿಲ್ಲ. ಕೆಲವು ಮಾರ್ಗವನ್ನು ಕ್ರಮಿಸಿ ಹೋದಬಳಿಕ ನನಗೆ ಹಾದಿಯಲ್ಲಿ ಮುಸಲ್ಮಾನ ಸೈನಕ್ಕೆ ಸಾಮಗ್ರಿಗಳನ್ನು ಒಯ್ಯುವ ಕೆಲವು ಬಂಡಿಗಳು ಭೆಟ್ಟಿಯಾದವು. ಆ ಬಂಡಿಗಳನ್ನು ಮುಸಲ್ಮಾನ ಸೈನಿಕರು ರಕ್ಷಿಸುತ್ತಲಿದ್ದರು. ಪ್ರಾಯಸ್ಥರೆಲ್ಲ ಯುದ್ಧಕ್ಕೆ ಹೋದದ್ದರಿಂದ ಮುದುಕರು ಬಂಡಿಗಳ ಸಂರಕ್ಷಣದ ಕಾರ್ಯವನ್ನು ಮಾಡಬೇಕಾಗಿತ್ತು. ಮುದುಕರಾದ ಮುಸಲ್ಮಾನ ರಕ್ಷಕರಿಬ್ಬರು ನನ್ನನ್ನು ನೋಡ ಕೌತುಕಪಟ್ಟು- “ನೀನು ಯಾರು ? ಇಷ್ಟು ಹುಡುಗತನದಲ್ಲಿ ನಿನಗೆ ಯುದ್ಧವು ಯಾಕೆ ಬೇಕಾಯಿತು ? ನೀನು ಮನೆಯಲ್ಲಿ ಹೇಳಿಕೇಳೀ ಹೊರಟಿರುವೆಯೋ ? ಕೇಳದೆ ಹೊರಟಿರುವೆಯೋ?” ಎಂದು ಪ್ರಶ್ನೆ ಮಾಡಿದರು. ಅದಕ್ಕೆ ನಾನು- “ನಮ್ಮ ಮನೆಯೊಳಗಿನವರೆಲ್ಲರು ಮೊದಲೇ ಯುದ್ಧಕ್ಕೆ ಹೋದರು. ನನಗೆ ಯುದ್ಧಕ್ಕೆ ಹೋಗುವ ಇಚ್ಛೆಯಾದ್ದರಿಂದ ನಾನೇ ಹೊರಟು ಬಂದಿದ್ದೇನೆ. ನಾನು ವಿಜಾಪುರದೊಳಗಿನವನೊಬ್ಬ ಸರದಾರನ ಮಗು” ಎಂದು ಹೇಳಿದನು. ಅದನ್ನು ಕೇಳಿ ಆ ವೃದ್ದರಿಗೆ ಆಶ್ಚರ್ಯವಾದಂತೆ ತೋರಿತು. ನನ್ನ ದನಿಯಿಂದ ಅವರಿಗೆ ನಾನು ಹೆಂಗಸೆಂಬ ಸಂಶಯ ಬಂದಂತೆ ತೋರಿತು. ಅದನ್ನರಿತು ನಾನು ಅವರೊಡನೆ ಮಾತಾಡುವದನ್ನೇ ಕಡಿಮೆ ಮಾಡಿದೆನು. ಮುಂದೆ ಅವರೂ ಅಷ್ಟು ಲಕ್ಷ್ಯಗೊಡಲಿಲ್ಲ. ಸಂಜೆಯವರೆಗೆ ಹಾದಿಯನ್ನು ನಡೆದು ಹೋದಬಳಿಕಾ ಕಾವಲುಗಾರರು ನನ್ನನ್ನು ಕುರಿತು- “ಬಚ್ಚಾ, ನೀನು ಬಹಳ ದಣಿದಂತೆ ತೋರುತ್ತದೆ; ಆದ್ದರಿಂದ ಯಾವುದಾದರೂ ಒಂದು ಬಂಡಿಯಲ್ಲಿ ಮಲಗಿಕೋ” ಎಂದು ಹೇಳಿದರು. ನನಗೂ ಅಷ್ಟೇ ಬೇಕಾಗಿತ್ತು. ಮುಂಜಾವಿನಿಂದ ಒಂದೇಸವನೆ ಕುದುರೆಯ ಮೇಲೆ ಕುಳಿತು ನನ್ನ ಟೊಂಕವು ನೋಯುತ್ತಿತ್ತು. ನಾನು ಸ್ವಲ್ಪ ಸಂಕೋಚಿಸಿದಂತೆ ತೋರಿಸಿ ಕಡೆಗೆ ಒಂದು ಬಂಡಿಯಲ್ಲಿ ಮಲಗಿಕೊಂಡೆನು ಬಂಡಿಗಳು ಮಧ್ಯರಾತ್ರಿಯವರೆಗೆ ಹಾದಿಯನ್ನು ನಡೆದು ಹೋದವು. ಬಂಡಿಯನ್ನು ಹೊಡೆಯುವವರು ತೂಕಡಿಸುತ್ತ ಸಾಗಿದರು. ಅವರು ಹಾದಿಯನ್ನು ಕ್ರಮಿಸುತ್ತಿರುವಾಗ ಹಾದಿಯು ತಪ್ಪಿದಂತೆ ಕಾಣುತ್ತದೆಂದು ಯಾರೋ ಒಬ್ಬರು ಶಂಕಿಸಿದರು. ಆದರೂ ಅತ್ತಿತ್ತ ಹಾದಿಯನ್ನು ನೋಡುತ್ತಿರಲು. ಅಷ್ಟರಲ್ಲಿ ಯಾರೋ ಒಬ್ಬನು ಅವರಿಗೆ ಭೆಟ್ಟಿಯಾಗಿ, ನಿಮಗೆ ಹಾದಿಯನ್ನು