ಪುಟ:Kannadigara Karma Kathe.pdf/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಣಮಸ್ತನ ಐಂದ್ರಜಾಲವು

೨೮೧

ಪರಿಣಾಮವಾದೀತೆಂಬದನ್ನು ಹೇಳಲಾಗದು. ಇದರ ಮೇಲೆ ತಮ್ಮ ಇಚ್ಛೆಯು, ಎಂದು ಹೇಳಿದನು. ಅದನ್ನು ಕೇಳಿ ರಾಮರಾಜನು ನಕ್ಕು ರಣಮಸ್ತಖಾನನನ್ನು ಕುರಿತು- “ರಣಮಸ್ತ, ನೀನು ಹೇಳುವದೆಲ್ಲ ಸರಿ; ಆದರೆ ನಾನು ವೈರಿಗಳನ್ನು ಇಲ್ಲಿಂದ ಉಳಕಗೊಟ್ಟರಷ್ಟೇ ಅವರು ಕಾಳಹೊಳೆಯ ಕಡೆಗೆ ಹೋಗುವದು? ನಾನು ಇಲ್ಲಿಯೇ ಅವರ ಮೇಲೆ ಬಿದ್ದು ಅವರ ನಾಶಮಾಡಿಬಿಡುವೆನು; ಅಂದಬಳಿಕ ವೈರಿಗಳು ವಿಜಯನಗರದ ಮೇಲೆ ಸಾಗಿ ಹೋಗುವ ಭಯವೇಕೆ ? ಇಂದು ರಾತ್ರಿ ಅಥವಾ ನಾಳೆರಾತ್ರಿ ವೈರಿಗಳ ಮೇಲೆ ಬೀಳುವದಕ್ಕಾಗಿ ನಮ್ಮ ಸೈನ್ಯಕ್ಕೆ ಅಪ್ಪಣೆ ಕೊಡುವೆನು. ಅಷ್ಟರಲ್ಲಿ ಅವರು ಇಲ್ಲಿಂದ ಓಡಿಹೋದರೆ ಅವರ ಬೆನ್ನಟ್ಟಿ ಹೋಗತಕ್ಕದ್ದು. ರಣಮಸ್ತ, ನೀನು ನಿಶ್ಚಿಂತನಾಗಿರು ! ನೀನು ನಿನ್ನ ಸೈನ್ಯವನ್ನು ಹಿಂಬದಿಯಲ್ಲಿ ಇಟ್ಟಿರುವೆಯಷ್ಟೇ ? ನೆಟ್ಟಗಾಯಿತು ನಿನ್ನ ಸೈನ್ಯವನ್ನು ಆರಂಭಕ್ಕೆ ಶತ್ರುಗಳ ಬಾಯಿಗೆ ಕೊಡತಕ್ಕದ್ದಲ್ಲ. ಕಟ್ಟಕಡೆಯ ಪ್ರಸಂಗದಲ್ಲಿ ಆ ನಿನ್ನ ಸೈನ್ಯವನ್ನು ಉಯೋಗಿಸಿಕೊಳ್ಳತಕ್ಕದ್ದು. ಎಂದು ಹೇಳಿದನು. ಅದನ್ನು ಕೇಳಿ ರಣಮಸ್ತಖಾನನಿಗೆ ಅಂತರಂಗದಲ್ಲಿ ಅಸಮಾಧಾನವಾದರೂ ಅದನ್ನು ಬಹಿರಂಗದಲ್ಲಿ ತೋರಗೊಡದೆ, ರಾಮರಾಜನ ಅನುಮತಿಯನ್ನು ಪಡೆದು, ಆತನು ಅಲ್ಲಿಯೇ ಸಮೀಪದಲ್ಲಿದ್ದ ತನ್ನ ಬಿಡಾರಕ್ಕೆ ಹೋದನು.

ರಾಮರಾಜನ ಸೈನ್ಯದ ದೊಡ್ಡ ಭಾಗವನ್ನು ಬೇರೆಕಡೆಗೆ ಕಳಿಸಿಬೇಕೆಂದು ಮಾಡಿದ ತನ್ನ ಹಂಚಿಕೆಯು ವ್ಯರ್ಥವಾದದ್ದರಿಂದ ರಣಮಸ್ತಖಾನನಿಗೆ ಬಹಳ ಅಸಮಾಧಾನವಾಯಿತು. ಅದರಲ್ಲಿ, ನೂರಜಹಾನಳನ್ನು ರಾಮರಾಜನು ಎಲ್ಲಿ ಇಟ್ಟಿರುವನೋ ಎಂಬದೊಂದು ಸಂಶಯವು ಅವನನ್ನು ವಿಶೇಷವಾಗಿ ಬಾಧಿಸಹತ್ತಿತು. ನೂರಜಹಾನಳು ಅನ್ನಸಾಮಗ್ರಿಯ ಬಂಡಿಗಳೊಳಗೆ ಪುರುಷವೇಷದಿಂದ ಬಂದು ರಾಮರಾಜನ ಕೈಸೇರಿದ್ದನ್ನು ರಣಮಸ್ತನು ತನ್ನ ವಿಶ್ವಾಸದ ಸೇವಕನ ಮುಖದಿಂದ ಕೇಳಿಕೊಂಡಿದ್ದನು. ರಾಮರಾಜನು ಸ್ತ್ರೇಣನಾದ್ದರಿಂದ, ನೂರಜಹಾನಳನ್ನು ತನ್ನ ಅಂತಗೃಹದಲ್ಲಿ ಸೇರಿಸಿಕೊಂಡಿರಬಹುದೆಂದು ಆತನು ಶಂಕಿಸಹತ್ತಿದನು. ಹೀಗೆ ಇತ್ತ ಈತನ ಶಂಕೆ ಪ್ರತಿ ಶಂಕೆಗಳಿಗೆ ಗುರಿಯಾಗಿ ತಳಮಳಿಸುತ್ತಿರಲು, ಅತ್ತ ರಾಮರಾಜನು ರಣಮಸ್ತನ ಮೇಲಿನ ಪುತ್ರ ವಾತ್ಸಲ್ಯದಿಂದ ಮೋಹಿತನಾಗಿ, ರಣಮಸ್ತನಿಗೆ “ನಾನು ನಿನ್ನ ತಂದೆ” ಎಂದು ಈಗ ಹೇಳಿಬಿಡುವದು ನೆಟ್ಟಗೆಂದು ಆಲೋಚಿಸತೊಡಗಿದನು. ನಾನು ತನ್ನ ತಂದೆಯೆಂಬದು ರಣಮಸ್ತಖಾನನಿಗೆ ಗೊತ್ತಾದರೆ, ಆತನು ಯುದ್ಧದಲ್ಲಿ ಅಭಿಮಾನದಿಂದ ಕಾಣಬಹುದೆಂದು ರಾಯನು ಭಾವಿಸಿದನು. ಕೂಡಲೆ ಆತನು ಮಧ್ಯರಾತ್ರಿಯಲ್ಲಿಯೇ ರಣಮಸ್ತಖಾನನನ್ನು