ಪುಟ:Kannadigara Karma Kathe.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಎಲ ! ಇದೇನು?

೧೫

ಮಾರ್ಜೀನೆಯನ್ನು ಕುರಿತು ಮಾರ್ಜೀನೆ, ಮೆಹರ್ಜಾನಳು ನಡೆದ ಸಂಗತಿಯನ್ನೆಲ್ಲ ನಿನ್ನ ಮುಂದೆ ಹೇಳಿರಬಹುದು. ಆಕೆಗೆ ನನ್ನ ಹೃದಯವನ್ನು ಒಪ್ಪಿಸಿರುವೆನು. ಆಕೆಯ ಹೊರತು ನನ್ನ ಪ್ರಾಣವು ನಿಲ್ಲುವ ಹಾಗಿಲ್ಲ. ಆಕೆಯ ಸಲುವಾಗಿ ನನ್ನ ಪ್ರಾಣವನ್ನು ಗಂಡಾಂತರಕ್ಕೆ ಗುರಿಮಾಡಿ ಪಾರಾಗಿರುವೆನು : ಆದ್ದರಿಂದ ಮೆಹರ್ಜಾನಳು ನನ್ನ ಪ್ರತಾಪದ ಫಲವಾಗಿರುವಳು. ಮಾರ್ಜೀನೇ ನೀನೇ ಹೇಳು ; ಮುಸಲ್ಮಾನರು ಬಹುಜನ ಹಿಂದೂ ಕುಲೀನ ತರುಣಿಯರನ್ನು ಅಪಹರಿಸಿ, ಸರ್ವಸಾಧಾರಣ ಸ್ತ್ರೀಯರಂತೆ ಅವರನ್ನು ನಡೆಸಿಕೊಳ್ಳುತ್ತಿರಲು, ನಾನು ಮೆಹರ್ಜಾನಳನ್ನು ಪ್ರಾಣೇಶ್ವರಿಯೆಂದು ಸ್ವೀಕರಿಸಿ ಜನ್ಮವಿರುವತನಕ ಆಕೆಯನ್ನು ಪ್ರಾಣೇಶ್ವರಿಯೆಂತಲೇ ಭಾವಿಸಿ ನಡೆದುಕೊಂಡರೆ ತಪ್ಪೇನು ? ಯಾವ ಮುಸಲ್ಮಾನ ಸರದಾರನು ಹಿಂದೂ ತರುಣಿಯರನ್ನು ಅಪಹರಿಸುವ ವಿಷಯದಲ್ಲಿ ಇಷ್ಟು ಸೌಜನ್ಯವನ್ನು ತೋರಿಸಿರಬಹುದು ? ಬಲಾತ್ಕಾರದಿಂದ ನಿಜವಾದ ಪ್ರೇಮೋದಯವಾಗದು ; ಆದ್ದರಿಂದ ಸ್ವಸಂತೋಷದಿಂದಲೇ ಮೆಹರ್ಜಾನಳು ನನ್ನ ಮನೋದಯವನ್ನು ಪೂರ್ಣ ಮಾಡುವಂತೆ ನೀನು ಯತ್ನಿಸತಕ್ಕದ್ದು. ಎಂದು ಬಡಬಡ ಮಾತಾಡಿ ಬಿಡಲು, ಮಾರ್ಜೀನೆಯು ಮುಗುಳುನಗೆ ನಗುತ್ತ-ಮಹಾರಾಜ, ನಿಮ್ಮ ಸೌಜನ್ಯವನ್ನೂ ಸದ್ಗುಣವನ್ನೂ ಮೆಹರ್ಜಾನಳು ನನ್ನ ಮುಂದೆ ವರ್ಣಿಸಿದ್ದಾಳೆ. ನೀವಂತೂ ಆಕೆಯನ್ನು ಪ್ರಾಣೇಶ್ವರಿಯ ಪದವಿಗೇರಿಸಿ, ಆಕೆಗಿಂತ ಒಂದು ಹೆಜ್ಜೆಯನ್ನು ಮುಂದಕ್ಕೆ ಇಟ್ಟಿರುತ್ತೀರಿ. ನೀವಿಬ್ಬರೂ ತರುಣರಿರುವದರಿಂದ ಒಂದೆರಡು ದಿನದ ಸಹವಾಸದಲ್ಲಿ ಪರಸ್ಪರರ ವಿಷಯವಾಗಿ ನೀವು ವಹಿಸಿದ ಸದಭಿಪ್ರಾಯದ ಬಗ್ಗೆ ನನಗೆ ಸಂಶಯವು ಉತ್ಪನ್ನವಾಗುತ್ತದೆ. ಕನ್ನಡ ವೀರರೇ, ನಿಜವಾದ ಪ್ರೇಮವು ಬಹುಜನರ ಹೃದಯದಲ್ಲಿ ಅವರ ಜನ್ಮದೊಳಗೆ ಉದಯವಾಗುತ್ತಿರುವುದಿಲ್ಲ. ಅಂಥ ಪ್ರೇಮವು ಸುದೈವದಿಂದ ನಿಮ್ಮಬ್ಬರ ಹೃದಯದಲ್ಲಿರದಿದ್ದರೆ, ಅದನ್ನು ಅಯೋಗ್ಯ ಸ್ಥಾನದಲ್ಲಿಟ್ಟು ನೀವಿಬ್ಬರೂ ಹಿಂದಿನಿಂದ ಪಶ್ಚಾತ್ತಾಪ ಪಡಬೇಡಿರೆಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ ಮಹಾರಾಜ ಮೆಹರ್ಜಾನಳು ಅಬಲೆಯು, ಮೇಲೆ ಅಪ್ರಬುದ್ಧಳೂ ವ್ಯವಹಾರ ಜ್ಞಾನವಂತು ಆಕೆಗೆ ಇರುವುದೇ ಇಲ್ಲ. ಆಕೆಯು ಬೆಳ್ಳಗಿದ್ದದ್ದನ್ನೆಲ್ಲ ಹಾಲೆಂದು ತಿಳಿಯುವಳು ಆದರೆ ನಿಮ್ಮ ಮಾತು ಹಾಗಲ್ಲ. ನೀವು ಪುರುಷರು, ಮೇಲೆ ಪ್ರಬುದ್ಧರು : ಚಿಕ್ಕಂದಿನಲ್ಲಿ ಓದಿ ಬರೆದು, ಪ್ರಾಯದಲ್ಲಿ ರಾಜಕಾರಣಾದಿ ಕಾರಣಗಳಿಂದ ವ್ಯವಹಾರ ಜ್ಞಾನವನ್ನು ಪಡೆದವರು. ಅಂದಬಳಿಕ ಯೋಗ್ಯಾಯೋಗ್ಯಗಳ ವಿಚಾರವನ್ನು ನೀವು ಸಮಾಧಾನದಿಂದ ಮಾಡತಕ್ಕದ್ದು;