ಪುಟ:Kannadigara Karma Kathe.pdf/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯುದ್ಧಪ್ರಸಂಗವು

೨೮೯

ತನಗೆ ಇಲ್ಲವೆಂದು ರಾಮರಾಜನು ತಿಳಿದಿದ್ದನು. ಆ ತಿಳುವಿಕೆಯಂತೆ ಅವನು ಈಗ ಕೇವಲ ನಿರ್ಭೀತನಾಗಿದ್ದನು. ಈ ಪ್ರಕಾರದ ಯುದ್ಧದ ಉಡುಪು-ತೊಡುಪುಗಳಿಂದ ರಾಮರಾಜನು ಸಿದ್ದನಾಗಿ, ತನ್ನ ಡೇರೆಯ ಹೊರಗೆ ನಿಲ್ಲಿಸಿದ್ದ ಕುದುರೆಯನ್ನು ಹತ್ತಿದನು. ಆ ಕುದುರೆಯ ಮೈತುಂಬ ರೇಶಿಮೆಯ ಗಂಟುಗಂಟುಗಳುಳ್ಳ ಝೂಲವನ್ನು ಹಾಕಿದ್ದರಲ್ಲದೆ, ಅದರ ತಲೆಗೆ ಅಂಥಾದ್ದೇ ಒಂದು ಆವರಣವಿದ್ದು ಅದರ ತಲೆಯ ಮೇಲೊಂದು ಮುತ್ತಿನ ತುರಾಯಿಯೂ, ಹಣೆಯಲ್ಲೊಂದು ಬಹು ಬೆಲೆಯುಳ್ಳ ಪದಕವೂ ಒಪ್ಪುತ್ತಿದ್ದವು. ಕುದುರೆಯ ಝೂಲದ ಗಂಟುಗಳು ಬಹು ಸಮಸಮೀಪವಾಗಿದ್ದದ್ದರಿಂದ, ಕತ್ತಿಯ ಕಡತವು ಕುದುರೆಯ ಮೈಗೆಹತ್ತುವಂತೆ ಇದ್ದಿಲ್ಲ.

ಹೀಗೆ ಅಶ್ವಾರೂಢನಾಗಿದ್ದ ರಾಮರಾಜನ ಸವಾರಿಯು ತನ್ನ ಸೈನ್ಯವನ್ನು ನಿರೀಕ್ಷಿಸುವದಕ್ಕಾಗಿ ಹೊರಟಿತು. ಎಲ್ಲಕ್ಕೂ ಮುಂದುಗಡೆಯಲ್ಲಿ ಆನೆಗಳ ಮೇಲೆ ಕುಳಿತು ಯುದ್ಧಮಾಡುವ ಸೈನ್ಯವನ್ನು ಸಾಲಾಗಿ ನಿಲ್ಲಿಸಿದ್ದರು. ಅದರ ಹಿಂದೆ ಕುದುರೆಯ ಸವಾರರನ್ನೂ ಅವರ ಹಿಂದೆ ಕಾಲಾಳುಗಳನ್ನೂ ನಿಲ್ಲಿಸಿದ್ದರು. ಆನೆಗಳ ಮೈತುಂಬ ರೇಶಿಮೆಯ, ಅಥವಾ ತೊಗಲಿನ, ಆದರೆ ನಡನಡುವೆ ಧಾತುಗಳ ಚೂರುಗಳನ್ನು ಕೂಡ್ರಿಸಿದ ಝೂಲಗಳಿದ್ದವು. ಆನೆಗಳ ತಲೆಯಮೇಲೆ ಬಂಗಾರದ ಮುಲಾಮು ಮಾಡಿದ ಧಾತುಗಳ ತಗಡಿನ ಶಿರಸ್ತ್ರಾಣಗಳಿದ್ದವು. ಇದರಂತೆ ಕುದುರೆಯ ಮೈಗಳಾದರೂ ಇಂಥ ಝೂಲಗಳಿಂದ ಸಂಪೂರ್ಣವಾಗಿ ಮುಚ್ಚಿಹೋಗಿದ್ದವು. ಈ ಆನೆ-ಕುದುರೆಗಳ ಮೇಲೆ ಕುಳಿತುಕೊಂಡಿದ್ದ ಯೋಧರು ಕವಚ ಶಿರಸ್ತ್ರಾಣಗಳಿಂದ ಒಪ್ಪುತ್ತಲಿದ್ದರು. ಅವರ ಟೊಂಕದಲ್ಲಿ ಒಂದು ಕಠಾರಿಯೂ ಒಂದು ಚಪ್ಪಕೊಡಲಿಯೂ, ಒಂದು ಖಡ್ಗವೂ, ಕೈಯಲ್ಲಿ ಭರ್ಚಿಯೂ ಇದ್ದು, ಕೆಲವರ ಬೆನ್ನಲ್ಲಿ ಬತ್ತಳಿಕೆಯೂ, ಹೆಗಲಲ್ಲಿ ಹೆದೆಯೇರಿಸಿದ ಧನುಷ್ಯವೂ ಒಪ್ಪುತ್ತಿದ್ದವು. ದಂಡಾಳುಗಳಲ್ಲಿ ಕನ್ನಡಿಗರು, ತೆಲುಗರು, ಮೈಸೂರಿನವರು, ಮಲಿಯಾಳದವರು, ತಮಿಳರು, ಮುಸಲ್ಮಾನರು ಮುಂತಾದವರು ಇದ್ದರು. ಪ್ರತಿಯೊಂದು ದಂಡಿನವರು ತಮ್ಮ ತಮ್ಮ ಪ್ರಾಂತದ ನಾಯಕನ ಕೂಡ ಬಂದಿದ್ದರು. ಒಂದೊಂದು ಆನೆಯ ಮೇಲೆ ಮೂರು-ನಾಲ್ಕು ಜನರು ಕುಳಿತು ಡಾಲು ಭರ್ಚಿಗಳನ್ನು ಧರಿಸಿದ್ದರು. ಕಾಲಾಳುಗಳಲ್ಲಿ ಕೆಲವರು ಬಿಲ್ಲು ಬಾಣಗಳನ್ನೂ, ಕೆಲವರು ತುಬಾಕಿಗಳನ್ನೂ ಹಿಡಿದಿದ್ದರು. ಇವರು ನಡುವಿನಲ್ಲಿ ಕಠಾರಿಯನ್ನೂ ಚಪ್ಪಕೊಡಲಿಯನ್ನೂ ಸಿಗಸಿದ್ದರು. ಹೀಗೆ ಶಸ್ತ್ರಾಸ್ತ್ರಗಳಿಂದ ಸಜ್ಜಾಗಿ ನಿಂತಿದ್ದ, ಹಾಗೂ ಮಹಾ ಸಮುದ್ರದ ಹಾಗೆ ಬಹು ದೂರದವರೆಗೆ ಪಸರಿಸಿದ್ದ ತನ್ನ ಸೈನ್ಯವನ್ನು ನೋಡುತ್ತ ರಾಮರಾಜನು