ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯುದ್ಧಪ್ರಸಂಗವು
೨೯೧

ಪಲಟಣದವರು ಯಾವ ಕಡೆಗೆ ನಿಂತುಕೊಳ್ಳಬೇಕು, ಯಾವಾಗ್ಗೆ ಏನು ಮಾಡಬೇಕು ಎಂಬುದನ್ನು ಕುರಿತು ಯಥಾಸ್ಥಿತವಾಗಿ ಅಪ್ಪಣೆಗಳನ್ನು ಕೊಡುತ್ತ, ಆತನು ತನ್ನ ಶಿಬಿರವನ್ನು ಸೇರಿದನು. ಬಹುತರ ಯಾವತ್ತು ಸೈನ್ಯಭಾಗಗಳ ಮುಖ್ಯಸ್ಥರು ರಾಮರಾಜನ ಸಂಗಡ ಆತನನ್ನು ಶಿಬಿರಕ್ಕೆ ಕಳಿಸುವದಕ್ಕಾಗಿ ಆತನ ಸಂಗಡ ಬಂದಿದ್ದರು. ಅವರೆಲ್ಲರನ್ನು ರಾಮರಾಜನನ್ನು ಪ್ರೋತ್ಸಾಹಿಸಿ ಅವರನ್ನು ಕುರಿತು-ವೀರರೇ, ಶತ್ರುಗಳು ಈಗ ಮೈಮೇಲೆ ಏರಿಬಂದರೆಂದರೆ ಅವರನ್ನು ಹಿಂದಕ್ಕೆ ದೂಡುತ್ತ ದೂಡುತ್ತ ವಿಜಾಪುರದವರೆಗೆ ಹೋಗಿ ಆ ಪಟ್ಟಣವನ್ನು ಕೈವಶ ಮಾಡಿಕೊಳ್ಳಬೇಕೆಂಬ ಮಾತನ್ನು ಲಕ್ಷ್ಮದಲ್ಲಿಟ್ಟು, ನೀವು ಯುದ್ಧ ಮಾಡತಕ್ಕದ್ದು. ವಿಜಾಪುರವು ಕೈವಶವಾದ ಬಳಿಕ ಅದನ್ನು ಸುಲಿಯುವದಕ್ಕಾಗಿ ನಿಮಗೆ ಐದು ದಿವಸಗಳವರೆಗೆ ಪರವಾನಿಗೆಯನ್ನು ಕೊಡುವೆವು. ಆ ಸುಲಿಗೆಯಲ್ಲಿ ಅವರವರಿಗೆ ಸಿಕ್ಕ ಪದಾರ್ಥಗಳು ಅವರವರವೇ, ಎಂದು ತಿಳಿಯಲಾಗುವದು; ಎಂದು ನಿಮ್ಮ ನಿಮ್ಮ ಜನರೊಳಗೇ ತಿಳಿಸತಕ್ಕದ್ದು, ಎಂದು ಹೇಳಿದನು. ರಾಮರಾಜನಿಗೆ ಸ್ವಂತದ ಪರಾಕ್ರಮದ ವಿಷಯವಾಗಿಯೂ, ತನ್ನ ಸೈನ್ಯದ ಸಾಮರ್ಥ್ಯದ ವಿಷಯವಾಗಿಯೂ ಒಳಿತಾಗಿ ಅನುಭವವಿತ್ತು. ಇಲ್ಲಿಯವರೆಗೆ ರಾಮರಾಜನ ಪೂರ್ವಜರು ಬಾಹಮನಿಯ ಬಾದಶಹರನ್ನು ಒಬ್ಬೊಬ್ಬರನ್ನಾಗಿ ಹಣಿದು ತಮ್ಮ ರಾಜ್ಯವನ್ನು ಸುರಕ್ಷಿತವಾಗಿ ಇಟ್ಟುಕೊಂಡಿದ್ದರಲ್ಲದೆ, ತಮ್ಮ ರಾಜ್ಯದ ವಿಸ್ತಾರವನೂ, ಮಹತ್ವವನ್ನೂ ಭರದಿಂದ ಹೆಚ್ಚಿಸಿ, ತಮ್ಮ ವರ್ಚಸ್ಸನ್ನು ಎಲ್ಲರ ಮೇಲೆ ಕೂಡಿಸಿದ್ದರು; ಆದರೆ ಈಗ ಆ ಬಾಹಮನಿ ಬಾದಶಹರೆಲ್ಲ ಒಟ್ಟುಗೂಡಿ ಯುದ್ಧಕ್ಕೆ ಬಂದಿರುವದರಿಂದ, ಬಹು ಎಚ್ಚರದಿಂದ ಅವರೊಡನೆ ಯುದ್ಧ ಮಾಡಬೇಕಾಗುವದೆಂಬ ವಿಚಾರವು ರಾಮರಾಜನ ಮನಸ್ಸಿನಲ್ಲಿ ಬರಲೊಲ್ಲದು. ನಾನು ಅವರನ್ನು ಒಂದೇ ಹೊಡೆತಕ್ಕೆ ಹೊಡೆದುಹಾಕೆನೆಂಬ ಮನಸ್ಸಿನಲ್ಲಿಯೇ ಆತನು ತಲೆದೂಗುತ್ತಿದ್ದನು; ಆದ್ದರಿಂದ ತನ್ನ ಎಡಬಲ ಭಾಗಗಳ ರಕ್ಷಕರಾದ ತಿಲುಮಲ-ವೆಂಕಟಾದ್ರಿಗಳು ಈಗ ಬೇರೆ ಕಡೆಗೆ ಹೋಗಿದ್ದರೂ, ತಾನೊಬ್ಬನೇ ಶತ್ರು ಸೈನ್ಯದ ಮೇಲೆ ಬೀಳಬೇಕೆಂದು ರಾಮರಾಜನು ನಿಶ್ಚಯಿಸಿದನು; ಆದರೂ ತನ್ನ ಬಂಧುಗಳನ್ನು ಕರೆಸಿಕೊಂಡರೆ ಯವನರ ಪಾರುಪತ್ಯವು ಬೇಗನೆ ಆಗುವದೆಂದು ತಿಳಿದು, ತನ್ನ ಬಳಿಯಲ್ಲಿ ನಿಂತಿದ್ದ ರಣಮಸ್ತನಿಗೆ ತನ್ನ ಬಂಧುಗಳನ್ನು ಕರೆಯುವದಕ್ಕಾಗಿ ಸವಾರರನ್ನು ಕಳಿಸಲು ಸೂಚಿಸಿದನು; ಆದರೆ ವಿಶ್ವಾಸಘಾತಕಿಯಾದ ರಣಮಸ್ತನು ರಾಮರಾಜನ ಮುಂದೆ ಹಾಗೆ ಮಾಡುವೆನೆಂದು ಒಪ್ಪಿಕೊಂಡರೂ, ತಿರುಮಲ-ವೆಂಕಟಾದ್ರಿಗಳ ಕಡೆಗೆ ಆತನು ಸವಾರರನ್ನು ಕಳಿಸಲಿಲ್ಲ.