ತಪ್ಪಿಸುವದು ಯಾರಿಂದಲೂ ಆಗದೆಂಬ ನ್ಯಾಯದಂತೆ, ರಾಮರಾಜನ ರಥವು ರಣಮಸ್ತಖಾನನ ಕಣ್ಣಿಗೆ ಬಿದ್ದಿತು. ಆಗ ದುಷ್ಟ ರಣಮಸ್ತನು ಬಹು ಸಮಾಧಾನ ಪಟ್ಟು ಇಂಥ ಪ್ರಸಂಗದಲ್ಲಿ ಸಾಧಿಸಿದರೇ ತನ್ನ ಪ್ರತಿಜ್ಞೆಯು ಸಾಧಿಸುವದೆಂದು ತಿಳಿದು ಆತನು ನೂರಾಐವತ್ತು ಜನರೊಡನೆ ರಾಮರಾಜನ ರಥವನ್ನು ಬೆನ್ನಟ್ಟಿ ನಡೆದನು. ರಾಮರಾಜನ ಜನರು ತಮ್ಮ ಒಡೆಯನನ್ನು ರಕ್ಷಿಸುವ ವಿಷಯವಾಗಿ ನಿಶ್ಚಯಮಾಡಿಕೊಂಡಿದ್ದರು. ಇತ್ತ ರಣಮಸ್ತಖಾನನೂ ತನ್ನ ಪ್ರತಿಜ್ಞೆಯನ್ನು ನೆರವೇರಿಸಲು ಆತುರಪಡುತ್ತಲಿದ್ದನು. ಮುದಗಲ್ಲಕೋಟೆಯೊಳಗೆ ರಾಮರಾಜನು ಹೋಗುವದರೊಳಗಾಗಿ ಎಲ್ಲಿಯಾದರೂ ಕಂದಕದ ಬಳಿಯಲ್ಲಿ ರಾಮರಾಜನಿಗೆ ಗಂಟುಬಿದ್ದು, ಆತನ ಕುತ್ತಿಗೆ ಕೊಯ್ಯಬೇಕೆಂದೇ ಆ ವಿಶ್ವಾಸಘಾತಕಿಯು ನಿಶ್ಚಯಿಸಿದ್ದು, ರಣಮಸ್ತನು ತನ್ನ ಪರಿವಾರದೊಡನೆ ತೀರ ಸನಿಯಕ್ಕೆ ಬಂದದ್ದನ್ನು ನೋಡಿ, ರಾಮರಾಜನ ರಕ್ಷಕರಾದ ಮುನ್ನೂರು ಜನರಲ್ಲಿ ನೂರಾಐವತ್ತು ಜನರು ರಾಮರಾಜನ ರಥವನ್ನು ಸಾಗಿಸಿಕೊಂಡು ಹೋಗಹತ್ತಿದರು. ಇದನ್ನು ನೋಡಿ ರಣಮಸ್ತನು ತನ್ನ ಸೈನ್ಯವನ್ನು ದ್ವಿಭಾಗಿಸಿ, ಎಪ್ಪತ್ತೈದು ಜನರನ್ನು ಹಿಂದಕ್ಕೆ ಕಾದಲು ಬಿಟ್ಟು, ಉಳಿದ ಎಪ್ಪತ್ತೈದು ಜನರನ್ನು ತನ್ನ ಸಂಗಡ ಕರಕೊಂಡ ರಾಮರಾಜನ ರಥದ ಮೇಲೆ ಸಾಗಿಹೋದನು, ದೈವವು ರಾಮರಾಜನಿಗೆ ತೀರ ಪ್ರತಿಕೂಲವಾಗಿತ್ತು. ರಣಮಸ್ತನ ಜನರ ದಾಳಿಯಲ್ಲಿ ರಾಮರಾಜನ ರಥದ ಒಂದು ಕುದುರೆಯ ಕಾಲು ಕಡಿದುಬಿದ್ದು ರಥವು ನಿಂತು ಬಿಟ್ಟಿತು. ರಾಮರಾಜನ ಜನರು ರಣಮಸ್ತನ ಜನರೊಡನೆ ಕಾದಹತ್ತಿದರು. ತಮ್ಮ ಒಡೆಯನ ದುರವಸ್ಥೆಯಿಂದ ರಾಮರಾಜನ ರಕ್ಷಕರು ಹತಾಶರಾಗಿ, ದಿಕ್ಕುಗೆಟ್ಟು ಓಡಹತ್ತಿದರು. ಆಗ ರಣಮಸ್ತನು ರಾಮರಾಜನ ಬಳಿಗೆ ಹೋದನು; ಆದರೆ ರಾಮರಾಜನು ಹೆದರದೆ ಕಾದುತ್ತಿರುವಾಗ ಆತನದೊಂದು ಕೈಯು ಕತ್ತರಿಸಿಬಿದ್ದಿತು. ಆಗ ರಣಮಸ್ತನು ರಾಮರಾಜನನ್ನು ಹಿಡಿದು ನಿಲ್ಲಿಸಿ-
ರಣಮಸ್ತನ-ನೂರಜಹಾನಳನ್ನು ಎಲ್ಲಿ ಇಟ್ಟಿರುವೆ, ಮೊದಲು ಹೇಳು.
ರಾಮರಾಜ-ತಮ್ಮಾ, ರಣಮಸ್ತ, ನೀನು ನನ್ನ ಮೇಲೆ ತಿರುಗಿ ಬೀಳುವೆಯಾ? ನೀನು ನನ್ನ.........
ರಣಮಸ್ತ-ನನ್ನ ಮುಂದೆ ಬೇರೆ ಯಾವ ಮಾತೂ ಆಡಬೇಡ ನೂರಜಹಾನಳನ್ನು ಎಲ್ಲಿ ಇಟ್ಟಿರುತ್ತೀ ಮೊದಲು ಹೇಳು, ಇಲ್ಲದಿದ್ದರೆ ನಿನ್ನ ಶಿರಚ್ಛೇದ ಮಾಡುವೆನು.
ರಾಮರಾಜ-ನೀನೆ ? ನೀನು ನನ್ನ ಶಿರಚ್ಛೇದ ಮಾಡುವೆಯಾ ?