ಪುಟ:Kannadigara Karma Kathe.pdf/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦೨

ಕನ್ನಡಿಗರ ಕರ್ಮಕಥೆ

೩೪ನೆಯ ಪ್ರಕರಣ

ಸರ್ವಸ್ವದ ನಾಶ


ಇದನ್ನು ನೋಡಿ ರಣಮಸ್ತಖಾನನು ದಂಗುಬಡಿದು ಏನೂ ತೋಚದೆ ಒಂದು ಕಲ್ಲಿನ ಗೊಂಬೆಯಂತೆ ಉಲುಕಾಡದೆ ಸುಮ್ಮನೆ ನಿಂತುಬಿಟ್ಟನು ಇಷ್ಟು ಹೊತ್ತಿನತನಕ ಆತನ ಮುಖದಲ್ಲಿ ತೋರುತ್ತಿದ್ದ ಆನಂದ, ವಿಜಯ, ಕೃತ ಕೃತ್ಯತೆ ಮೊದಲಾದ ವಿಕಾರಗಳ ಲಕ್ಷಣಗಳು ಮೆಹೆರ್ಜಾನಳ ಕಟ್ಟಕಡೆಯ ಮಾತಿನಿಂದಲೂ, ಕೃತಿಯಿಂದಲೂ ಲಯ ಹೊಂದಿದವು. ಉಳಿದ ಪ್ರಸಂಗದಲ್ಲಿ ಆತನ ತಾಯಿಯು ಬರಿಯ ಪುಷ್ಕರಣಿಯಲ್ಲಿಯೇ ಏಕೆ, ಒಂದು ದೊಡ್ಡ ಕೊಳ್ಳದಲ್ಲಿ ಹಾರಿಕೊಂಡಿದ್ದರೂ, ಆಕೆಯನ್ನು ಕಡೆಗೆ ತೆಗೆಯುವದಕ್ಕಾಗಿ ರಣಮಸ್ತಖಾನನು ಆಕೆಯ ಹಿಂದೆಯೇ ಹಾರಿಕೊಳ್ಳುತ್ತಿದ್ದು; ಆದರೆ ಈ ಪ್ರಸಂಗದಲ್ಲಿ ಆತನು ಕೇವಲ ನಿರ್ಜೀವನೂ. ನಿಶ್ಚಲನೂ, ನಿರ್ವಿಕಾರನೂ, ನಿರ್ವಿಚಾರಿಯೂ ಆಗಿದ್ದನು. ಆತನು ಕಲ್ಲುಗೊಂಬೆಯಂತೆ ಎಷ್ಟೊಂದು ಹೊತ್ತು ನಿಂತುಬಿಟ್ಟಿದ್ದನು! ಇತ್ತ ನೂರಜಹಾನಳ ಸ್ಥಿತಿಯೂ ಹಾಗೆಯೆ ಆಗಿತ್ತು. ರಾಮರಾಜನು ರಣಮಸ್ತಖಾನನ ತಂದೆಯೆಂಬ ಕಲ್ಪನೆಯು ಆಕೆಯ ಮನಸ್ಸಿನಲ್ಲಿ ಎಂದೂ ಹೊಳದಿದ್ದಿಲ್ಲ. ಈ ವೀರನು ತನ್ನ ಮುಂದೆ ಮಾಡಿದ ಪ್ರತಿಜ್ಞೆಯನ್ನು ನೆರವೇರಿಸಿದ್ದರಿಂದ, ಈತನನ್ನು ಮದುವೆಯಾಗಬೇಕೆಂದು ಆಕೆಯು ನಿಶ್ಚಯಿಸಿದ್ದಳು; ಆದರೆ ರಣಮಸ್ತನು ಒಬ್ಬ ಹಿಂದೂ ರಾಜನ ವ್ಯಭಿಚಾರದಿಂದ ಹುಟ್ಟಿ, ಪಿತೃವಧೆದಂಥ ನೀಚಕಾರ್ಯ ಮಾಡಿದವನೆಂಬ ವಿಚಾರವು ಮನಸ್ಸಿನಲ್ಲಿ ಹೊಳೆದ ಕೂಡಲೇ, ಆಕೆಯು ರಣಮಸ್ತನ ನೆರಳಿಗೆ ನಿಲ್ಲಲಿಕ್ಕೆ ಸಹ ಹೇಸಿಕೊಳ್ಳಹತ್ತಿದಳು. ಆಕೆಯು ಯಾವ ಉಪಾಯದಿಂದ ರಣಮಸ್ತನ ಬಳಿಯಿಂದ ತಪ್ಪಿಸಿಕೊಂಡು ಹೋಗಬೇಕೆಂದು ಯೋಚಿಸುತ್ತಿದ್ದಳು. ಅಷ್ಟರಲ್ಲಿ ರಣಮಸ್ತನು ಎಚ್ಚತ್ತು ನೂರಜಹಾನಳ ಕಡೆಗೆ ನೋಡಿ-ನೂರಜಹಾನ, ನಿನ್ನ ಸಲುವಾಗಿ ನಾನು ಇಂಥ ಪರಾಕ್ರಮವನ್ನೂ, ಸಾಹಸವನ್ನೂ ಮಾಡಿದೆನು; ನಿನ್ನ ಮುಂದೆ ಮಾಡಿದ ಪ್ರತಿಜ್ಞೆಯನ್ನು ಪೂರ್ಣಮಾಡಿರುತ್ತೇನೆ. ಇನ್ನು ವಿಳಂಬವೇಕೆ? ನಮ್ಮಿಬ್ಬರ ಲಗ್ನವಾಗಲಿ, ಎಂದು ನುಡಿದು ನೂರಜಹಾನಳ ಕೈಹಿಡಿಯ ಹೋಗಲು,