ಕತ್ತೆ ಮುಂತಾದ ವಾಹನಗಳು ಯುದ್ಧಕ್ಕೆ ಹೋದದ್ದರಿಂದ, ಅವರಿಗೆ ವಾಹನಗಳೇ ಸಿಗದಾದವು. ಅವರು ತಮ್ಮ ಸಂಪತ್ತನ್ನೆಲ್ಲ ಹೂಳಿಕೊಂಡು ಕುಳಿತರು. ಪಟ್ಟಣದೊಳಗಿನ ಸಶಸ್ತ್ರರಾದ ತರುಣರು ಆತ್ಮ ರಕ್ಷಣವನ್ನು ಮಾಡಿಕೊಳ್ಳಲು ಸಜ್ಜಾಗಿ ನಿಂತರು. ಈ ಅರಾಜಕ ಸ್ಥಿತಿಯಲ್ಲಿ ಲಮಾಣಿಗಳು, ಕೊರಚರು ಮುಂತಾದ ಕಾಡು ಜನರು ಹಗಲುಹಾಡೆ ಸಾವುಕಾರರ ಮನೆಗೆ ದರವಡೆಗಳನ್ನಿಕ್ಕಹತ್ತಿದರು. ಹೀಗೆ ಒಂದು ದಿವಸದಲ್ಲಿ ವಿಜಯನಗರದ ಅಂತಃಸ್ಥಿತಿಯು ಕೆಟ್ಟುಹೋಗಲು, ಮುಂದೆ ಮೂರು ದಿವಸ ಒಂದೇಸವನೆ ಅಂತಃಶತ್ರುಗಳ ಸುಲಿಗೆಯ ಕೆಲಸವು ನಡೆಯಿತು. ಮುಂದೆ ನಾಲ್ಕನೆಯ ದಿವಸ ಶತ್ರುಗಳು ಪಟ್ಟಣವನ್ನು ಪ್ರವೇಶಿಸಿ ಘೋರ ಕೃತ್ಯಗಳನ್ನು ನಡೆಸಿದರು. ಬರಿಯ ಪಟ್ಟಣವನ್ನು ಸುಲಿದು ಸಂಪತ್ತು ಒಯ್ಯುದರಿಂದಿಷ್ಟೇ ಅವರ ತೃಪ್ತರಾಗುವಂತೆ ಇದ್ದಿಲ್ಲ. ವಿದ್ಯಾನಗರವನ್ನು ಸಮೂಲ ನಾಶಮಾಡಲು, ಅವರು ಪ್ರತಿಜ್ಞೆ ಮಾಡಿರುವಂತೆ ತೋರಿತು. ಅವರು ಮೊದಲು ನಿರ್ದಯತನದಿಂದ ಕೈಗೆ ಸಿಕ್ಕವರನ್ನು ಕೊಂದುಹಾಕಿದರು. ತೋಪುಗಳನ್ನು ಹೂಡಿ ಅರಮನೆಯನ್ನು ನಾಶಮಾಡಿದರು, ದೇವಸ್ಥಾನಗಳನ್ನು ಕೆಡವಿದರು. ನೂರಾರು ಮೂರ್ತಿಗಳನ್ನು ಒಡೆದರು. ನೃಸಿಂಹನ ಪ್ರಚಂಡ ಮೂರ್ತಿಯನ್ನು ಭಿನ್ನ ವಿಚ್ಛಿನ್ನವಾಗಿ ಮಾಡಿದರು. ದೊಡ್ಡದೊಡ್ಡ ಸಭಾಮಂಟಪಗಳನ್ನು ನೆಲಸಮ ಮಾಡಿದರು. ಕೋಟಿ ಗಟ್ಟಲೆ ವೆಚ್ಚಮಾಡಿ
ರಚಿಸಿದ ಕಲಾಕೌಶಲ್ಯಗಳ ನಾಶ ಮಾಡಲಿಕ್ಕೆ ಮುಸಲ್ಮಾನರಿಗೆ ಎಂಟು ದಿನಗಳು ಸಹ ಹತ್ತಲಿಲ್ಲ. ವಿಜಯನಗರವನ್ನು ರಕ್ಷಿಸುವವರು ಯಾರೂ ಉಳಿಯಲಿಲ್ಲ. ಈ ಐಶ್ವರ್ಯಯುಕ್ತ ನಗರದಲ್ಲಿ ಸಂಪತ್ತು ಎಷ್ಟು ತುಂಬಿರುವದೆಂಬದರ ಕಲ್ಪನೆಯು, ಈ ಸುಲಿಗೆಯ ಪ್ರಸಂಗವು ಒದಗುವರೆಗೂ ಯಾರಿಗೂ ಆಗಿದ್ದಿಲ್ಲೆಂದು ಹೇಳಬಹುದು. ಕೋಟೆ ಎಂಬ ಹೆಸರಿನ ಇತಿಹಾಸಕಾರನು ಹೇಳುವದೇನಂದರೆ- “ಈ ಸುಲಿಗೆಯಲ್ಲಿ ಅಗಣಿತ ಸಂಪತ್ತು ಸುಲಿಯಲ್ಪಟ್ಟಿತು. ಅರದಲ್ಲಿ ಸಿಕ್ಕ ಒಂದು ರತ್ನವು ಕೋಳಿಯ ತತ್ತಿಯಷ್ಟು ಇತ್ತು. ಈ ರತ್ನವನ್ನು ರಾಮರಾಜನು ತನ್ನ ಕುದುರೆಯ ಶಿರೋಭೂಷಣದಲ್ಲಿ ಕೂಡ್ರಿಸಿದ್ದನು. ಈ ರತ್ನವು ಮುಂದೆ ಆದಿಲಶಹನ ವಶವಾಯಿತು. ಕುದುರೆಯ ಶಿರೋಭೂಷಣದಲ್ಲಿಯೇ ಇಷ್ಟು ದೊಡ್ಡ ರತ್ನವಿದ್ದ ಬಳಿಕ ರಾಜಗೃಹದಲ್ಲಿಯೂ, ಧನಿಕರ ಮನೆಗಳಲ್ಲಿಯೂ ಎಷ್ಟು ಸಂಪತ್ತು ಕೂಡಿಬಿದ್ದಿತ್ತೆಂಬದನ್ನು ನಮ್ಮಂಥ ದರಿದ್ರರು ಕಲ್ಪಿಸುವದು ಅಸಾಧ್ಯವೇ ಸರಿ ! ಅರಸರೇನು, ದರಿದ್ರರೇನು, ಕರ್ಮಫಲವನ್ನು ಭೋಗಿಸಿಯೇ ತೀರಬೇಕು !