ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮
ಕನ್ನಡಿಗರ ಕರ್ಮಕಥೆ

ಇಷ್ಟು ಮಾತಾಡುವ ಯೋಗ್ಯತೆಯು ನನ್ನದಲ್ಲ ; ಯಾರೊ ನಿಮ್ಮ ಗುರುಗಳೇ ನನ್ನ ಮುಖದಿಂದ ಈ ಮಾತುಗಳನ್ನು ಆಡಿಸುತ್ತಾರೆಂದು ತಿಳಿದು, ನನ್ನನ್ನು ಕ್ಷಮಿಸಿರಿ !

ಈ ಮೇರೆಗೆ ಮಾರ್ಜೀನೆಯು ತತ್ವಜ್ಞಾನಿಯಂತೆ ಪ್ರೇಮದ ಸ್ವರೂಪವನ್ನು ಅಸ್ಖಲಿತವಾಗಿ ಪ್ರತಿಪಾದಿಸಿದ್ದನ್ನು ನೋಡಿ ರಾಮರಾಜನು ಬೆರಗಾದನು. ಆತನು ಪಿಟ್ಟೆಂದು ಮಾತಾಡದೆ ಮಾರ್ಜೀನೆಯನ್ನು ಎವೆಯಿಕ್ಕದೆ ನೋಡಹತ್ತಿದನು. "ಯಾರೊ ನಿಮ್ಮ ಪೂಜ್ಯ ಗುರುಗಳೇ ನನ್ನ ಮುಖದಿಂದ ಈ ಮಾತುಗಳನ್ನು ಆಡಿಸುತ್ತಾರೆಂದು ತಿಳಿಯಿರಿ" ಎಂದು ಆಕೆಯು ಆಡಿದ ಮಾತುಗಳನ್ನು ಕೇಳಿ, ಆತನಿಗೆ ನನ್ನ ಸದ್ಗುರುಗಳ ನೆನಪಾಯಿತು. ಔಪಚಾರಿಕವೇ ಆಗಲೊಲ್ಲದೇಕೆ, ಸಮಾಗಮ ಮಾಡಿದ ರಾಮರಾಜನಿಗೆ ಮಾರ್ಜೀನೆಯ ಉಪದೇಶವು ಸಮರ್ಪಕವಾಗಿ ತೋರಿತು ಇನ್ನು ಮೇಲೆ ಮೆಹರ್ಜಾನಳ ಗೊಡವೆಗೆ ಹೋಗದೆ, ಮಾರ್ಜೀನೆಯೊಡನೆ ಆಕೆಯನ್ನು ಆಕೆಯ ಬಳಗದವರ ಬಳಿಗೆ ಕಳಿಸಿಬಿಡಬೇಕೆಂದು ಆತನು ಮಾಡಿದನು ಮತ್ತು ಮಾರ್ಜೀನೆಯ ಮುಂದೆ ಹಾಗೆ ತಟ್ಟನೆ ನುಡಿಯಬೇಕೆನ್ನುತ್ತಿದ್ದನು. ಅಷ್ಟರಲ್ಲಿ ಮೆಹರ್ಜಾನಳ ಸುಂದರ ರೂಪವು ಆತನ ಕಣ್ಣಿಗೆ ಕಟ್ಟಿ, ಆತನ ಮನಸ್ಸು ಚಂಚಲವಾಯಿತು. ತಾನು ಮೆಹರ್ಜಾನಳನ್ನು ಕುದುರೆಯ ಮೇಲೆ ಅಡ್ಡಹಾಕಿಕೊಂಡು ಬರುವಾಗ ತನ್ನ ಶರೀರಕ್ಕಾದ ಆಕೆಯ ಸುಖಸ್ಪರ್ಶದ ಸ್ಮರಣವೂ, ಆಕೆಯ ಸುಂದರವಾದ ಅವಯವಗಳ ದರ್ಶನದಿಂದಾದ ಆನಂದದ ಸ್ಮರಣವೂ, ಆಕೆಯ ಕುಂಜವನಕ್ಕೆ ಬಂದಬಳಿಕ ತನ್ನ ಮಾತಿಗೆ ಅರ್ಧಮರ್ಧ ಒಪ್ಪಿಕೊಂಡಂತೆ ಮಾಡಿದ್ದರ ನೆನಪೂ ಆತನಿಗಾಗಿ, ಆತನ ಚಂಚಲ ಮನಸ್ಸು ದೂಷಿತವಾಗುತ್ತಾಗುತ್ತ ಕಡೆಗೆ ಅದರೊಳಗಿನ ವಿವೇಕವು ನಷ್ಟವಾಗಹತ್ತಿತ್ತು. ಪ್ರಿಯ ವಾಚಕರೇ "ಬಲವಾನಿಂದ್ರಿಯಗ್ರಾಮೋ ವಿದ್ವಾಂಸಮಪಿ ಕರ್ಷತಿ" ಎಂಬ ಮಹಾತ್ಮರ ಉಕ್ತಿಯಂತೆ ಇಂದ್ರಿಯಗಳ ಸಮೂಹವು ವಿದ್ವಂಸನನ್ನಾದರೂ [ವಿದ್ವಾಂಸನ ಮನಸ್ಸನ್ನಾದರೂ] ಜಗ್ಗಿಕೊಳ್ಳುತ್ತದೆಂಬ ಮಾತು ಸುಳ್ಳಲ್ಲ. ತುಂಬಿ ಹೊರಸೂಸುವ ಪ್ರಾಯದ ಸೊಕ್ಕಿನಲ್ಲಿ ನಾವು ಮನಸ್ಸಿಗೆ ಹೊರಚಾಳಿಯನ್ನು ಒಮ್ಮೆ ಹಚ್ಚಿಬಿಟ್ಟರೆ, ಆ ಖೋಡಿ ಮನ್ನಸ್ಸು ಅಸುಗೊಳ್ಳದೆ, ತಕ್ಕ ಪ್ರಸಂಗ ಒದಗಿದಾಗೆಲ್ಲ ನಮ್ಮನ್ನು ಎಳೆದೆಳೆದು ಗಾಸಿಮಾಡುತ್ತದೆಂಬುದನ್ನು ಪ್ರಾಯಸ್ಥರಾದ ನಿಮ್ಮಲ್ಲಿ ಬಹುಜನರು ಮನಸ್ಸಿನಲ್ಲಿಯಾದರೂ ಒಪ್ಪಿಕೊಳ್ಳಬಹುದೆಂದು ಅನುಭವದಿಂದ ಹೇಳಬಹುದಾಗಿದೆ ! ಆದ್ದರಿಂದ ಪರನಾರೀ ಸೋದರರಾಗುವಂತೆ ಪ್ರತಿಯೊಬ್ಬ ತರುಣನೂ ಅವರ ಹಿತಚಿಂತಕರು ಮೊದಲೇ ಜಾಗರೂಕರಾಗಿ