ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಂಕುರಾಭಿವೃದ್ಧಿ
೨೩

ಮದಾಂಧತೆಯೂ, ಪೌರುಷಕ್ಕಿಂತ ಡಾಂಭಿಕತೆಯೂ, ಸತ್ಯಕ್ಕಿಂತ ಮೋಸಗಾರಿಕೆಯೂ ವಿಶೇಷವಾಗಿದ್ದವು. ಈ ಸ್ಥಿತಿಯು ರಾಷ್ಟ್ರವನ್ನಂಟಿಕೊಂಡ ಕ್ಷಯರೋಗವೆಂತಲೇ ಹೇಳಬಹುದು. ರಾಮರಾಜನಲ್ಲಿ ಹಲವು ಸದ್ಗುಣಗಳಿದ್ದರೂ ಆತನು ಈ ರಾಷ್ಟ್ರೀಯ ರೋಗದಿಂದ ಮುಕ್ತನಾಗಿದ್ದಿಲ್ಲ. ಕೇವಲ ಗುಣಲುಬ್ಧಳಾಗಿ ಆತನ ಕೈಹಿಡಿದಿದ್ದ ಮೆಹರ್ಜಾನಳಿಗೆ ಆತನ ಈ ಗುಪ್ತರೋಗದ ಲಕ್ಷಣಗಳನ್ನು ಲಕ್ಷಿಸಲಿಕ್ಕೆ ಅವಸರವು ದೊರೆಯಲಿಲ್ಲ. ಒಂದು ವರ್ಷದವರೆಗೆ ಅವರಿಬ್ಬರು ನಿರಾತಂಕವಾಗಿ ವಿಷಯ ಸುಖವನ್ನು ಭೋಗಿಸಿದರು. ಈ ಅವಧಿಯಲ್ಲಿ ರಾಮರಾಜನು ಮೆಹರ್ಜಾನಳನ್ನು ಕಣವಾದರೂ ಅಗಲದೆ ಇರುತ್ತಿದ್ದನೆಂದು ಹೇಳಬಹುದು. ಕೃಷ್ಣದೇವರಾಯನ ಅಪ್ಪಣೆಯಿಂದ ಮೆಹರ್ಜಾನಳನ್ನು ಅಗಲಿ ಹೋಗುವ ಪ್ರಸಂಗ ಬಂದರೆ ರಾಮರಾಜನ ಜೀವಬೇಸುತ್ತ ಬಂದಂತಾಗುತ್ತಿತ್ತು. ಸರಳ ಹೃದಯದ ಮೆಹರ್ಜಾಳಾದರೂ ತನ್ನ ಹೃದಯವನ್ನು ಸಂಪೂರ್ಣವಾಗಿ ರಾಮರಾಜನಿಗೆ ಒಪ್ಪಿಸಿ, ಸರ್ವಸ್ವವೂ ಆತನೇ ಎಂದು ತಿಳಿದಿದ್ದಳು. ಅವರಿಬ್ಬರ ಈ ಅಕೃತ್ರಿಮ ಪ್ರೇಮಭೂಮಿಯಲಿ ನಿರ್ದುಷ್ಟವಾದ ದಾಂಪತ್ಯ ಸುಖವು ಉತ್ಪನ್ನವಾದದ್ದೇನು ಆಶ್ಚರ್ಯವಲ್ಲ.

ಈ ಪ್ರಕಾರ ತರುಣ-ತರುಣಿಯರಲ್ಲಿ ಅಕೃತ್ರಿಮ ಪ್ರೇಮವು ಇರುವವರೆಗೆ ಅವರ ಸುಖದಲ್ಲಿ ಕೊರತೆಯುಂಟಾಗಿದ್ದಿಲ್ಲ ; ಆದರೆ ರಾಮರಾಜನ ದುರ್ದೈವದಿಂದಲೋ, ಇವರೆಲ್ಲರ ದುರ್ದೈದಿಂದಲೊ, ತಿಳಿಯದು. ಆ ತರುಣರ ಅಕೃತ್ರಿಮ ಪ್ರೇಮವು ರಾಮರಾಜನ ಮಹತ್ವಾಕಾಂಕ್ಷೆಯಿಂದ ಕೃತ್ರಿಮ ಸ್ವರೂಪವನ್ನು ತಾಳಹತ್ತಿತು. ಮೇಲೆ ಹೇಳಿದ ರಾಷ್ಟ್ರೀಯ ಕ್ಷಯರೋಗದ ಎಲ್ಲ ಲಕ್ಷಣಗಳೂ ರಾಮರಾಜನಲ್ಲಿ ಇದ್ದವಲ್ಲದೆ, ಆ ರೋಗದ ಹೆಚ್ಚುವಿಕೆಗೆ ಕಾರಣವಾದ ಮಹತ್ವಾಕಾಂಕ್ಷೆಯು ಆತನಲ್ಲಿ ವಾಸಿಸುತ್ತಿತ್ತು. ಮನುಷ್ಯನು ನ್ಯಾಯವಾದ ಮಹತ್ವವನ್ನು ಅಪೇಕ್ಷಿಸಬಾರದೆಂತಲ್ಲ; ಗುಣೋತ್ಕರ್ಷವನ್ನು ಪಡೆದು, ಆತನು ನರನು ಹೋಗಿ ನಾರಾಯಣನೂ ಆಗಬಹುದು ! ಆದರೆ”ಯೇನಕೇನ ಪ್ರಕಾರೇಣ ಪ್ರಸಿದ್ದಪುರಷೋಭವ” ಎಂಬ ಹೀನವಾದ ಉಕ್ತಿಗೆ ಸಂಬಂಧಿಸುವಂಥ ನೀಚ ಮಹತ್ವಾಕಾಂಕ್ಷೆಯನ್ನು ಯಾವನೂ ತಾಳಲಾಗದು. ಅಂಥವನು ಕೆಲಕಾಲದವರೆಗೆ ಮಹತ್ವ ಪಡೆದಂತೆ ತೋರಿದರೂ, ಕಡೆಗೆ ಆತನ ಅಧಃಪತನವೇ ಆಗುವದು. ಇಂಥ ಉದಾಹರಣೆಗಳು ಇತಿಹಾಸಜ್ಞರಿಗೂ, ವ್ಯವಹಾರಜ್ಞರಿಗೂ ಹಲವು ದೊರೆಯಬಹುದು. ಅವುಗಳಲ್ಲಿ ರಾಮರಾಜನದೊಂದು ಐತಿಹಾಸಿಕ ಉದಾಹರಣವೆಂದು ಹೇಳಬಹುದು ರಾಮರಾಜನಲ್ಲಿ ಗುಣಗಳೀದ್ದಿಲ್ಲವೆಂತಲ್ಲ ;